Mysuru dasara 2023: ಕೆಲವೇ ಕ್ಷಣಗಳಲ್ಲಿ ನಾಡಹಬ್ಬಕ್ಕೆ ಚಾಲನೆ, ಮೊದಲ ದಿನದ ಕಾರ್ಯಕ್ರಮಗಳ ಪಟ್ಟಿ ಹೀಗಿದೆ
ಮೈಸೂರು, ಅಕ್ಟೋಬರ್, 15: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ಕ್ಷಣಗಳಲ್ಲಿ ವಿದ್ಯುಕ್ತವಾಗಿ ಚಾಲನೆ ಸಿಗಲಿದೆ. ಚಾಮುಂಡಿ ಬೆಟ್ಟದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಚಾಮುಂಡಿಬೆಟ್ಟದ ದೇವಿ ಸನ್ನಿಧಿಯಲ್ಲಿ ಬೆಳಗ್ಗೆ 10:15ರಿಂದ 10:36ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಹಂಸಲೇಖ ಹತ್ತು ದಿನಗಳ ನಾಡಹಬ್ಬ ದಸಾರಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ದಸರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ರಾಜ್ಯಪಾಲ ಥಾರ್ವ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ನಿರ್ಮಲ ಸೀತಾರಾಮನ್ ಮತ್ತು ಶೋಭಾ ಕರಂದ್ಲಾಜೆಯವರು ಬೆಟ್ಟದ ತುದಿಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

"ಜಂಬೂ ಸವಾರಿ ದಿನ ಸೇರಿದಂತೆ 10 ದಿನಗಳ ಭದ್ರತೆಗಾಗಿ 7 ಸಾವಿರ ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಸ್ಥಳೀಯವಾಗಿ 2,500 ಮಂದಿ ಪೊಲೀಸರ ನಿಯೋಜನೆಯೊಂದಿಗೆ ನೆರೆ ಜಿಲ್ಲೆಗಳಿಂದ 4,500 ಮಂದಿ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದ್ದು, ಒಟ್ಟು 7 ಸಾವಿರ ಮಂದಿ ಪೊಲೀಸರ ದಸರಾ ಭದ್ರತೆಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪೊಲೀಸ್ ಆಯುಕ್ತ ರಮೇಶ್ ಬಿ. ತಿಳಿಸಿದ್ದಾರೆ.
ಯದುವೀರ್ ಖಾಸಗಿ ದರ್ಬಾರ್
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಅಕ್ಟೋಬರ್ 15ರಿಂದ ನಡೆಯಲಿದೆ. ಪತ್ನಿ ತ್ರಿಷಿಕಾ ಕುಮಾರಿ, ಮಗ ಆದ್ಯವೀರ್ ಜತೆಗೂಡಿ ಸಂಪ್ರದಾಯದಂತೆ ಕಂಕಣ ತೊಡುವರು. ಬಳಿಕ ಪಾದಪೂಜೆ ನಡೆಯಲಿದೆ. ನಂತರ ಸಿಂಹಾಸನದಲ್ಲಿ ಯದುವೀರ್ ವಿರಾಜಮಾನರಾಗುತ್ತಾರೆ.
ಮೊದಲ ದಿನ ಏನೆಲ್ಲಾ ಉದ್ಘಾಟನೆ?
ಕಲಾಮಂದಿರದಲ್ಲಿ ದಸರಾ ಚಲನ ಚಿತ್ರೋತ್ಸವ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ, ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ, ಸೆನೆಟ್ ಭವನದಲ್ಲಿ ಯೋಗ ದಸರಾ, ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ, ಸಯ್ಯಾಜಿರಾವ್ ರಸ್ತೆ ಬಳಿ ವಿದ್ಯುತ್ ದೀಪಾಲಂಕಾರ, ವಸ್ತು ಪ್ರದರ್ಶನ, ಅಖಿಲ ಭಾರತ ಹಾಗೂ ರಾಜ್ಯಮಟ್ಟದ ಚಿತ್ರ ಶಿಲ್ಪ ಕಲಾ ದರ್ಶನಕ್ಕೆ ಚಾಲನೆ ಸಿಗಲಿದೆ.
ಇನ್ನು ಅರಮನೆ ಆವರಣದಲ್ಲಿ ಸಂಜೆ 7 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿರುವ ಡಾ.ಪದ್ಮಮೂರ್ತಿ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.












Click it and Unblock the Notifications