ದಸರಾ ಆಹಾರ ಮೇಳದಲ್ಲಿ ರುಚಿ ರುಚಿಯಾದ ಖಾದ್ಯ: ಆದಿವಾಸಿ ತಿನಿಸುಗಳಿಗೆ ಭೋಜನ ಪ್ರಿಯರು ಫಿದಾ
ಮೈಸೂರು, ಅಕ್ಟೋಬರ್ 16: ಮೈಸೂರಿನಲ್ಲಿ ದಸರಾ ಸಂಭ್ರಮ ಶುರುವಾಗಿದೆ. ಮೊದಲ ದಿನವೇ ಆಹಾರ ಮೇಳ ಜನರನ್ನು ಆಕರ್ಷಿಸುತ್ತಿದೆ. ಆದಿವಾಸಿಗಳೇ ತಯಾರಿಸುತ್ತಿರುವ ಬ್ಯಾಂಬೂ ಬಿರಿಯಾನಿ, ಬಿದಿರಕ್ಕಿ ಪಾಯಸ ಹಾಗೂ ಮಾಕಳಿ ಬೇರಿನ ಟೀ ಎಲ್ಲರ ಗಮನ ಸೆಳೆಯುತ್ತಿದೆ.
ಆಹಾರ ಮೇಳ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ದಸರಾ ಆಹಾರ ಮೇಳದಲ್ಲಿ ಮೈಸೂರು ಜಿಲ್ಲೆಯ ಬುಡಕಟ್ಟು ಹಾಗೂ ಹಾಡಿಯಲ್ಲಿ ವಾಸಿಸುವ ಜನರು ಸೇರಿ ಮಳಿಗೆ ತೆರೆದಿದ್ದಾರೆ. ಇಲ್ಲಿ ಬ್ಯಾಂಬೂ ಬಿರಿಯಾನಿ ಹಾಗೂ ವಾಕಳಿ ಬೇರಿನ ಟೀ ಗಮನ ಸೆಳೆಯುತ್ತಿದೆ.

ತೆಂಗಿನ ಗರಿ ಮೂಲಕ ಚಪ್ಪರದಂತೆ ಮಳಿಗೆಯನ್ನು ಸಿಂಗರಿಸಲಾಗಿದೆ. ಅದೇ ರೀತಿ ಸೌದೆ ಒಲೆಯಲ್ಲಿ ಮಾಡಿರುವ ಬ್ಯಾಂಬೂ ಬಿರಿಯಾನಿ ಆಹಾರ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತಿದೆ.
ಆಹಾರ ಮೇಳದಲ್ಲಿ ಬಗೆಬಗೆಯ ಖಾದ್ಯಗಳು
ದಾವಣಗೆರೆ ಬೆಣ್ಣೆದೋಸೆ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ, ಮಲ್ಲಿಗೆ ಇಡ್ಲಿ, ಬಂಗಾರಪೇಟೆ ಚುರುಮುರಿ, ಮೇಲುಕೋಟೆ ಪುಳಿಯೋಗರೆ, ಮುಳಬಾಗಿಲು ತುಪ್ಪದ ದೋಸೆ ಸೇರಿದಂತೆ ಅರತ್ತಕ್ಕೂ ಹೆಚ್ಚು ಬಗೆಯ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ಜೊತೆಗೆ ವಿವಿಧ ರೀತಿಯ ಚಾಟ್ಸ್f, ಐಸ್‌ಸ್ಕ್ರೀಮ್, ಕೇಕ್‌ಗಳ ಮನಳಿಗೆ ಕೂಡ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.
ಪ್ರತಿ ವರ್ಷ ದಸರಾ ಆಹಾರ ಮೇಳವನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೇಸ್ ಬಳಿಯ ಮುಡಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಮಾತ್ರ ಆಯೋಜನೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಪ್ರಿಯರನ್ನು ನಿರೀಕ್ಷಿಸಲಾಗಿದೆ.

ಇನ್ನು ಮಾಂಸಾಹಾರದಲ್ಲಿ ಚಿಕನ್ ಕಬಾಬ್, ಧಂ ಬಿರಿಯಾನಿ, ಮೀನಿನ ವಿವಿಧ ಬಗೆ ಭಕ್ಷಯಗಳು, ಹೈದರಾಬಾದ್ ಬಿರಿಯಾನಿ, ತಂದೂರಿ ಸೇರಿದಂತೆ ನಾನಾ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿವೆ.
ಅಕ್ಟೋಬರ್ 22ರ ವರೆಗೆ ನಡೆಯು ಆಹಾರ ಮೇಳದಲ್ಲಿ ಗ್ರಾಹಕರು ಉತ್ತರ ಭಾರತ, ದಕ್ಷಿಣ ಭಾರತ, ಉತ್ತರ ಕರ್ನಾಟಕ, ಚೈನೀಸ್, ಹೈದರಾಬಾದ್, ಪಂಜಾಬ್, ರಾಜಸ್ತಾನ ಮುಂತಾದ ಪ್ರದೇಶಗಳ ವಿಶೇಷ ಭೋಜನವನ್ನು ಸವಿಯಬಹುದಾಗಿದೆ.
ದೋಸೆ ಹಾಕಿದ ಸಚಿವ ಮುನಿಯಪ್ಪ
ಆಹಾರ ಸಚಿವ ಎಚ್.ಸಿ.ಮುನಿಯಪ್ಪ ಅವರು ಮಳಿಗೆಯೊಂದರಲ್ಲಿ ದೋಸೆ ಹಾಕುವ ಮೂಲಕ ಸಂಭ್ರಮಿಸಿದರು. ನಂತರ ಪಾನೀಪುರಿ ಮಳಿಗೆಗೆ ತೆರಳಿ ಪಾನಿಪುರಿ ಹಾಗೂ ಗೋಲ್ಗಪ್ಪವನ್ನು ತಿಂದು ಬಾಯಿ ಚಪ್ಪರಿಸಿದರು. ಅವರೊಂದಿಗೆ ಡಾ.ತಿಮ್ಮಯ್ಯ ಕೂಡ ಸಾಥ್ ನೀಡಿದರು. ಉದ್ಘಾಟನೆ ವೇಳೆ ಕೇವಲ 15 ಮಳಿಗೆಗಳಷ್ಟೇ ತೆರೆದಿದ್ದವು. ಆದರೆ, ರಾತ್ರಿ ವೇಳೆಗೆ ಬಹುತೇಕ ಮಳಿಗೆಗಳು ಭರ್ತಿಯಾದವು.
ಆಹಾರ ಮೇಳದಲ್ಲಿ ಸ್ವಚ್ಛತೆಗೆ ಆದ್ಯತೆ
ಆಹಾರ ಮೇಳದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ಪ್ರತಿ ಮಳಿಗೆಯಲ್ಲೂ ತ್ಯಾಜ್ಯ ಹಾಕುವ ಡಬ್ಬಗಳನ್ನು ಜೋಡಿಸಲಾಗಿದೆ. ಸಂಜೆ ವೇಳೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಗಂಟೆಗೊಮ್ಮೆ ತ್ಯಾಜ್ಯವಸ್ತುಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ತಿಳಿಸಿದರು.












Click it and Unblock the Notifications