ಮೈಸೂರು ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಫಲಿತಾಂಶ: ದಳ ಮೂರು, ಒಂದು ಸ್ಥಾನ ಮಾತ್ರ ಕೈ ತೆಕ್ಕೆಗೆ
ಮೈಸೂರು, ಮೇ, 25: ಇಂದು ಮೈಸೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆದಿದ್ದು, ಮೂರು ಅಧ್ಯಕ್ಷ ಸ್ಥಾನವನ್ನು ಜೆಡಿಎಸ್, ಒಂದು ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿತು.
ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದರು. ಬೆಳಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆ ತನಕ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು ಕ್ರಮವಾಗಿ ನಡೆಸುವ ಮೂಲಕ ಹಲವು ದಿನಗಳಿಂದ ಇದ್ದ ಎಲ್ಲ ಗೊಂದಲಕ್ಕೆ ತೆರೆ ಎಳೆದರು.

ಎಂಟು ತಿಂಗಳಿನಿಂದ ನನೆಗುದಿಗೆ ಬಿದ್ದಿದ್ದ ಮೈಸೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಒಪ್ಪಂದದಂತೆ ನಾಲ್ಕು ಸ್ಥಾನಗಳನ್ನು ಬಿಜೆಪಿ ಬಿಟ್ಟು ಕೊಟ್ಟಿದ್ದರೂ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ನ ರಾಜಕೀಯದಿಂದ ಒಂದು ಅಧ್ಯಕ್ಷ ಸ್ಥಾನ ಜೆಡಿಎಸ್ ಕೈ ತಪ್ಪಿದೆ.
ಸೆಪ್ಟೆಂಬರ್ 6ರಂದು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆದಿತ್ತು. ಆದರೂ ಈ ತನಕ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಮಮೇ 25ರಿಂದ ಮುಂದಿನ ಸೆಪ್ಟೆಂಬರ್ 6ರವರೆಗೆ ಸದಸ್ಯರ ಅವಧಿ ಇರುವವರೆಗೆ ಮಾತ್ರ ಈ ಹಿಂದಿದ್ದವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಅವಕಾಶವಿದೆ. ಈ ಸಂದರ್ಭದಲ್ಲಿ ಉಪ ಮೇಯರ್ ಡಾ.ಎಂ.ರೂಪಾ, ಕೌನ್ಸಿಲ್ ಕಾರ್ಯದರ್ಶಿ ಆರ್.ರಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅವಿರೋಧ ಆಯ್ಕೆ
ಹಣಕಾಸು ಸ್ಥಾಯಿ ಸಮಿತಿಗೆ 41ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಎಂ.ಡಿ.ನಾಗರಾಜು ಅಧ್ಯಕ್ಷರಾಗಿ ಆಯ್ಕೆಯಾದರು. ಇನ್ನು ಸಿ.ಎಸ್.ರಜನಿ ಅಣ್ಣಯ್ಯ, ಪುಟ್ಟನಿಂಗಮ್ಮ, ಷಫೀ ಅಹಮ್ಮದ್, ಎಂ.ಡಿ.ನಾಗರಾಜು, ಎಂ.ಛಾಯಾದೇವಿ, ಬಿ.ವಿ.ರವೀಂದ್ರ, ಎಂ.ಪ್ರಮೀಳಾ ಭರತ್ ಸದಸ್ಯರಾಗಿ ಆಯ್ಕೆ ಆದರು.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ 44ನೇ ವಾರ್ಡ್‌ನ ಜೆಡಿಎಸ್‌ನ ಸದಸ್ಯೆ ಸವಿತಾ ಆಯ್ಕೆ ಆದರು. ಸಿ.ವೇದಾವತಿ, ಪ್ರದೀಪ್ ಚಂದ್ರ, ಅಯಾಜ್ ಪಾಷ, ಎಂ.ಶಿವಕುಮಾರ್, ಸವೂದ್ ಖಾನ್, ಸವಿತಾ, ಎಂ.ಸತೀಶ್ ಸದಸ್ಯರಾಗಿ ಆಯ್ಕೆ ಆದರು.
ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 7ನೇ ವಾರ್ಡ್‌ನ ಜೆಡಿಎಸ್ ಸದಸ್ಯ ವಿ.ರಮೇಶ್ ಆಯ್ಕೆ ಆಗಿದ್ದಾರೆ. ಸಮಿತಿಗೆ ಪುಷ್ಪಲತಾ ಜಗನ್ನಾಥ್, ಎಂ.ಎಸ್.ಶೋಭಾ, ಅಯೂಬ್ ಖಾನ್, ವಿ.ರಮೇಶ್, ಶ್ರೀನಿವಾಸ್, ಶಾರದಮ್ಮ, ಎನ್.ಸೌಮ್ಯ ಸದಸ್ಯರಾಗಿದ್ದಾರೆ. ಇನ್ನು ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಗೆ 32ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಎಚ್.ಎಂ.ಶಾಂತಕುಮಾರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಪಲ್ಲವಿ ಬೇಗಂ, ವಿ.ಲೋಕೇಶ್, ಎಚ್.ಎಂ.ಶಾಂತಕುಮಾರಿ, ಸಮೀವುಲ್ಲಾ, ಮಹಮ್ಮದ್ ರಫೀಕ್, ಕೆ.ವಿ.ಶ್ರೀಧರ್, ಎಸ್.ಸಾತ್ವಿಕ್ ಸದಸ್ಯರಾಗಿದ್ದಾರೆ.












Click it and Unblock the Notifications