ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಾತ್ರ ನನಗೆ ಸಮಾಧಾನ – ಬಿಎಸ್ವೈ
ಸ್ಟೀಲ್ ಬ್ರಿಡ್ಜ್ ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಾತ್ರ ನನಗೆ ಸಮಾಧಾನ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೈಸೂರಿನಲ್ಲಿ ಹರಿಹಾಯ್ದಿದ್ದಾರೆ.
ಮೈಸೂರು, ಮಾರ್ಚ್ 2: ಸ್ಟೀಲ್ ಬ್ರಿಡ್ಜ್ ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಾತ್ರ ನನಗೆ ಸಮಾಧಾನ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೈಸೂರಿನಲ್ಲಿ ಹರಿಹಾಯ್ದಿದ್ದಾರೆ.
ರಾಜ್ಯ ಸರಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕೈ ಬಿಡುವ ನಿರ್ಧಾರ ಘೋಷಣೆಗೂ ಕೆಲವೇ ಗಂಟೆಗಳ ಮೊದಲು ಮೈಸೂರಿನಲ್ಲ ಮಾತನಾಡಿದ್ದ ಯಡಿಯೂರಪ್ಪ, "ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಆಗಿರುವ ಭ್ರಷ್ಟಾಚಾರಕ್ಕೆ ಸಚಿವ ಜಾರ್ಜ್ ರಾಜೀನಾಮೆ ನೀಡಲು ಸಿದ್ದರಾಗಲಿ. ಆದರೆ ನನಗೆ ಜಾರ್ಜ್ ರಾಜೀನಾಮೆಯಿಂದ ಸಮಾಧಾನವಿಲ್ಲ. ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಮುಖ್ಯಮಂತ್ರಿಗಳ ಕುಟುಂಬಕ್ಕೆ 65 ಕೋಟಿ ಹೋಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಾತ್ರ ನನಗೆ ಸಮಾಧಾನ ಲಭಿಸಲಿದೆ," ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಆಗಮಿಸಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು.[ವಿವಾದಿತ ಉಕ್ಕಿನ ಮೇಲ್ಸೇತುವೆ ಯೋಜನೆ ರದ್ದು]
ಅವರು ನನ್ನ ವಿರುದ್ದದ ಯಾವುದೇ ಕೇಸ್ ರೀ ಓಪನ್ ಮಾಡಿದ್ರು ನಾನು ಜಗ್ಗಲ್ಲ, ಬಗ್ಗಲ್ಲ. ಅವರು ನನ್ನನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಆದರೆ ಅವರ ಬೆದರಿಕೆಗಳಿಗೆ ನಾನು ಬಗ್ಗಲ್ಲ. ಸಿದ್ದರಾಮಯ್ಯ ಈ ದೇಶ ಕಂಡ ಅತಿ ಭ್ರಷ್ಟ ಮುಖ್ಯಮಂತ್ರಿ ಎಂದು ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದರು.

ಮುಖ್ಯಮಂತ್ರಿಗಳಿಗೆ ನನ್ನ ನೈತಿಕತೆಯ ಬಗ್ಗೆ ಪದೇ ಪದೇ ಮಾತನಾಡುತಿದ್ದರೆ ಸಮಾಧಾನ ಸಿಗಲಿದೆ ಅನ್ನುವುದಾದರೆ ಮಾತಾಡಿಕೊಳ್ಳಲಿಬಿಡಿ ಎಂದು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಲೇವಡಿಯಾಡಿದರು.
'ನಿಮ್ಮ ಪಕ್ಷಕ್ಕೆ ಬರುವವರಿಗೆ ಟಿಕೆಟ್ ನೀಡುತ್ತೇವೆ ಅಂತ ಹೇಳಿದ್ದೀರಿ' ಎಂಬ ವದಂತಿಯಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಮ್ಮ ಪಕ್ಷಕ್ಕೆ ಬರುವ ಯಾರಿಗೂ ಟಿಕೆಟ್ ಭರವಸೆ ನೀಡಿಲ್ಲ. ನಮ್ಮಲ್ಲಿ ಸಾಕಷ್ಟು ಬಲಿಷ್ಠ ಅಭ್ಯರ್ಥಿಗಳಿದ್ದಾರೆ. 50 ಕ್ಷೇತ್ರದಲ್ಲಿ ಗೆಲ್ಲುವಂತ ಅಭ್ಯರ್ಥಿಗಳ ಅವಶ್ಯಕತೆ ಇದೆ. ಹೀಗಾಗಿ ಯಾರೇ ಪಕ್ಷದ ಸಿದ್ದಾಂತವನ್ನು ಒಪ್ಪಿ ಬಂದರೂ ಅವರಿಗೆ ಸ್ವಾಗತವಿದೆ. ಟಿಕೆಟ್ ನೀಡುವ ಕುರಿತಂತೆ ಸರ್ವೆ ನಡೆಸಿ ನಂತರ ರಾಷ್ಟ್ರಾಧ್ಯಕ್ಷರ ಮುಂದೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]
'ಮಾಜಿ ಸಚಿವ ಸೋಮಣ್ಣ ಮನೆಗೆ ಭೇಟಿ' ನೀಡಿರುವ ಕುರಿತು ಕೇಳಿದಾಗ ನನ್ನ ಮತ್ತು ಸೋಮಣ್ಣ ನಡುವೆ ಇದ್ದ ಮನಸ್ತಾಪ ಸರಿಪಡಿಸುವ ಸಲುವಾಗಿಯೇ ಅವರ ಮನೆಗೆ ಹೋಗಿದ್ದೆ. ನಾವು ಮುಂದೆ ಅಧಿಕಾರಕ್ಕೆ ಬರುವ ಗುರಿ ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗಬೇಕಿದೆ.
ನಿನ್ನೆ ಅವರ ಜೊತೆ ಮಾತನಾಡಿ ಎಲ್ಲವನ್ನು ಬಗೆ ಹರಿಸಿಕೊಂಡಿದ್ದೇವೆ. ಇನ್ನು ಮುಂದೆ ನನ್ನ ಮತ್ತು ಸೋಮಣ್ಣರ ನಡುವೆ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಸ್. ಎ. ರಾಮದಾಸ್ ಮತ್ತು ಬಿಜೆಪಿಯ ಹಲವು ಕಾರ್ಯಕರ್ತರು ಯಡಿಯೂರಪ್ಪ ಜೊತೆಗಿದ್ದರು.












Click it and Unblock the Notifications