ಮೈಸೂರು ಪಾಲಿಕೆ ಸದಸ್ಯರ ಅಧಿಕಾರ ಅವಧಿ ಅಂತ್ಯ; ಗರಿಗೆದರಿದ ಚುನಾವಣೆ
ಮೈಸೂರು, ನವೆಂಬರ್ 17: ಮೈಸೂರು ಮಹಾನಗರ ಪಾಲಿಕೆಯ ಸದಸ್ಯರ ಅಧಿಕಾವಧಿ ನವೆಂಬರ್ 16ಕ್ಕೆ ಕೊನೆಗೊಂಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ಪಾಲಿಕೆ ಸದಸ್ಯರ ಆಯ್ಕೆಯ ಚುನಾವಣೆಗೆ ಚಟುವಟಿಕೆಗಳು ಗರಿಗೆದರಿವೆ.
2018ರ ಆ.31ರಂದು ಮಹಾನಗರ ಪಾಲಿಕೆಯ 65 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಯಾವುದೇ ಪಕ್ಷಕ್ಕೆ ಬಹುಮತ ದೊರೆಯದ ಕಾರಣ ಮೈತ್ರಿ ಮೂಲಕ ಸದಸ್ಯರು ಮೇಯರ್ ಮತ್ತು ಉಪ ಮೇಯರ್ ಆಗಿ ಅಧಿಕಾರ ನಡೆಸಿದ್ದರು. ಮೂರು ಪಕ್ಷಗಳಿಗೂ ಅಧಿಕಾರ ಸಿಕ್ಕಿದ್ದು ವಿಶೇಷ ಎನ್ನಬಹುದು.

5 ವರ್ಷದ ಅವಧಿಯಲ್ಲಿ ಎರಡು ಬಾರಿ ಉಪ ಚುನಾವಣೆಯೂ ನಡೆದಿತ್ತು. ಮೇಯರ್, ಉಪ ಮೇಯರ್ ಸ್ಥಾನ ಪಡೆಯುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿತ್ತು. ಎರಡು ಬಾರಿ ಬಿಜೆಪಿಯ ಇಬ್ಬರು ಮೇಯರ್ ಸ್ಥಾನ ಅಲಂಕರಿಸಿ ಗಮನ ಸೆಳೆದರು.
ಮತ್ತೆ ಚುನಾವಣೆ ನಡೆಯಬೇಕಿದೆ; ಪ್ರಸ್ತುತ ಮೇಯರ್ ಆಗಿರುವ ಶಿವಕುಮಾರ್ ಹಾಗೂ ಉಪ ಮೇಯರ್ ಜಿ. ರೂಪಾ ಅವರ ಅಧಿಕಾರವಧಿ ಸೆ.5ಕ್ಕೆ ಮುಕ್ತಾಯಗೊಂಡಿದೆ. ಆದರೆ, ಸದಸ್ಯರ ಅಧಿಕಾರಾವಧಿಯು ನ.16ರವರೆಗೆ ಇದ್ದಿದ್ದರಿಂದ ಮೇಯರ್ ಹಾಗೂ ಉಪ ಮೇಯರ್ ಆಗಿ ಮುಂದುವರಿದಿದ್ದರು.
ಮೇಯರ್ ಶಿವಕುಮಾರ್ ಅವರು ಎರಡನೇ ಬಾರಿ ದಸರಾ ಜಂಬೂಸವಾರಿಯಲ್ಲಿ ಕುದುರೆ ಸವಾರಿ ಮಾಡಿ ಗಮನ ಸೆಳೆದರು. 2018ರ ನ.17ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈಗ ಕೌನ್ಸಿಲ್ ಅವಧಿ ನ.16ಕ್ಕೆ ಮುಕ್ತಾಯಗೊಂಡಿದೆ.
ಮೊದಲ ಅವಧಿಯಲ್ಲಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್, 2ನೇ ಅವಧಿಯಲ್ಲಿ ತಸ್ಲಿಂ ಮೇಯರ್ ಆಗಿ ಅಧಿಕಾರ ನಡೆಸಿದರು. 3ನೇ ಅವಧಿಯಲ್ಲಿ ರುಕ್ಷಿಣಿ ಮಾದೇಗೌಡ ಮೇಯರ್ ಆಗಿದ್ದರು. ಆದರೆ, ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮರೆಮಾಚಿದ್ದ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವವನ್ನು ಹೈಕೋರ್ಟ್ ವಜಾಗೊಳಿಸಿತ್ತು. ನಂತರ ಸುನಂದಾ ಪಾಲನೇತ್ರ ಮೇಯರ್ ಆದರು. 4ನೇ ಅವಧಿಯಲ್ಲಿ ಬಿಜೆಪಿಯ ಶಿವಕುಮಾರ್ ಮೇಯರ್ ಆಗಿ ಆಯ್ಕೆಯಾದರು.
ಆಡಳಿತಾಧಿಕಾರಿ ನೇಮಕ: ಚುನಾಯಿತ ಸದಸ್ಯರ ಅವಧಿ ಮುಕ್ತಾಯಕ್ಕೂ ಮುನ್ನ ಚುನಾವಣೆ ನಡೆಯಬೇಕು. ಆದರೆ, ಸದ್ಯ ಚುನಾವಣೆ ಯಾವಾಗ ನಡೆಯುತ್ತದೆ? ಎಂಬುದು ರಾಜ್ಯ ಸರಕಾರದ ನಿರ್ಧಾರದ ಮೇಲೆ ಅವಲಂಬಿಸಿದೆ.
ಇದರಿಂದ ನ.16ರ ನಂತರ ಜಿಲ್ಲಾಧಿಕಾರಿಯು ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿಯೂ ಅಧಿಕಾರ ವಹಿಕೊಳ್ಳುವರು. ಕರ್ನಾಟಕ ಸರ್ಕಾರ ಯಾವಾಗ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಆದೇಶ ಹೊರಡಿಸಲಿದೆ? ಎಂದು ಕಾದು ನೋಡಬೇಕಿದೆ.
ಮೈಸೂರು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸವಿದೆ. ಆದ್ದರಿಂದ ಈ ಬಾರಿ ನಡೆಯುವ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಲಿದೆ.












Click it and Unblock the Notifications