ಕರ್ತವ್ಯ ನಿರತ ಪೊಲೀಸರ ವ್ಯಾಸಂಗಕ್ಕೆ ಮೈಸೂರು ವಿವಿ ಜೊತೆ ಒಪ್ಪಂದ
ಮೈಸೂರು, ಫೆಬ್ರವರಿ 23; ಕರ್ತವ್ಯ ನಿರತ ಪೊಲೀಸರ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಹಾಗೂ ಮೈಸೂರು ವಿಶ್ವವಿದ್ಯಾಲಯದ ನಡುವೆ ಚಾರಿತ್ರಿಕವಾದ ಒಪ್ಪಂದವೊಂದು ಏರ್ಪಟ್ಟಿದೆ.
ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯು ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಪ್ರಾಯೋಗಿಕ ತರಬೇತಿ ಹೊರತುಪಡಿಸಿ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್, ಸ್ಪೆಷಲೈಸ್ಟ್ ಕೋರ್ಸ್, ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಹಾಗೂ ಆನ್‌ಲೈನ್ ಕೋರ್ಸುಗಳನ್ನು ಶೈಕ್ಷಣಿಕ ವಿನಿಮಯದೊಂದಿಗೆ ಪ್ರಾರಂಭಿಸಲು ಒಡಂಬಡಿಕೆ ಮಾಡಿಕೊಂಡಿದೆ.
ಕೃತಕ ಬುದ್ಧಿಮತ್ತೆ, ಅಪರಾಧ ಶಾಸ್ತ್ರ, ವಿಧಿವಿಜ್ಞಾನ ಶಾಸ್ತ್ರ, ಸೈಬರ್ ಕ್ರೈಂ, ಕಂಪ್ಯೂಟರ್ ಸೈನ್ಸ್ ಸೇರಿದಂತೆ ಹಲವು ವಿಷಗಳಲ್ಲಿ ಪೊಲೀಸರು ಕೋರ್ಸ್ ಮಾಡಬಹುದು. ಅಲ್ಲದೆ, ಮೈಸೂರು ವಿವಿಯಲ್ಲಿ ಓದುತ್ತಿರುವ ಮಕ್ಕಳು ಕೆಪಿಎಗೆ ಬಂದು ಪ್ರಾಯೋಗಿಕ ತರಬೇತಿ ಬಗ್ಗೆ ಮಾಹಿತಿ ಪಡೆಯಬಹುದು.

ಇದು ಮೈಸೂರು ವಿವಿ ಹಾಗೂ ಕೆಪಿಎ ಎರಡು ಸಂಸ್ಥೆಗಳ ಬೆಳವಣಿಗೆ ದೃಷ್ಟಿಯಿಂದ ಅನುಕೂಲಕರ ವಾತಾವರಣ ನಿರ್ಮಾಣ ಮಾಡುತ್ತದೆ. ಕರ್ತವ್ಯ ನಿರ್ವಹಣೆ ಮಾಡುವ ಪೊಲೀಸ್ ಅಧಿಕಾರಿಗಳಿಗೂ ಸಹಾಯಕವಾಗಿದೆ.
ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಮಾತನಾಡಿ, "ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರದ ಒಂದು ಸಂಸ್ಥೆಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ" ಎಂದರು.
"ಪೊಲೀಸ್ ಸಿಬ್ಬಂದಿಯ ಶೈಕ್ಷಣಿಕ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು ಒಡಂಬಡಿಕೆ ಮಾಡಿಕೊಂಡಿರುವುದು ಸ್ವಾಗತಾರ್ಹ. ನಗರದ ಜನರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿರುವ ಪೊಲೀಸ್ ಇಲಾಖೆಯೊಂದಿಗೆ ಮಾಡುತ್ತಿರುವ ಈ ಒಪ್ಪಂದ 10 ವರ್ಷ ಇರಲಿದೆ" ಎಂದು ಹೇಳಿದರು.
ನಿರ್ಗಮಿತ ನಿರ್ದೇಶಕ ವಿಪುಲ್ ಕುಮಾರ್ ಮಾತನಾಡಿ, "ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಪ್ರಶಿಕ್ಷಣಾರ್ಥಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಭವಿಷ್ಯದ ದೃಷ್ಟಿಯಿಂದ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಮೈಸೂರು ವಿಶ್ವ ವಿದ್ಯಾನಿಲಯವು ನಮ್ಮ ಜೊತೆ ಕೈಜೋಡಿಸುತ್ತಿರುವುದು ಶ್ಲಾಘನೀಯ" ಎಂದರು.
"ವಿವಿಧ ಕೋರ್ಸುಗಳಿಗೆ ಮಾನ್ಯತೆ ನೀಡುವುದು, ವಿಶೇಷ ಕೋರ್ಸ್‌ಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಒಡಂಬಡಿಕೆಯ ಮುಖ್ಯ ಉದ್ದೇಶ" ಎಂದರು.
ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ, ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ. ಚೇತನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications