ಮೈಸೂರು ಹೋಟೆಲ್ ಮಾಲೀಕರ ಸಂಘ ಸಿಎಂಗೆ ಪತ್ರ ಬರೆದಿದ್ದೇಕೆ?
ಮೈಸೂರು, ಸೆಪ್ಟೆಂಬರ್ 21: ರಾಜ್ಯದಲ್ಲಿ ಮತ್ತೊಮ್ಮೆ ನಂದಿನಿ ಹಾಲಿನ ದರವನ್ನು ಹೆಚ್ಚಿಸುವ ಚಿಂತನೆಯನ್ನು ಸರ್ಕಾರ ಮಾಡಿರುವುದು ಜನಸಾಮಾನ್ಯರು ಸೇರಿದಂತೆ ಹೋಟೆಲ್ ಉದ್ಯಮಿಗಳನ್ನು ಕಂಗೆಡುವಂತೆ ಮಾಡಿದೆ. ಹಾಲಿನ ದರ ಹೆಚ್ಚಾದರೆ ಕಾಫಿ, ಟೀ ಬೆಲೆಯನ್ನು ಹೆಚ್ಚಿಸುವುದು ಹೋಟೆಲ್ ಮಾಲೀಕರಿಗೆ ಅನಿವಾರ್ಯವಾಗಲಿದ್ದು ಇದರಿಂದ ಉದ್ಯಮದ ಮೇಲೆ ಪರಿಣಾಮ ಬೀರುವ ಭಯ ಕಾಡಲಾರಂಭಿಸಿದೆ.
ಈಗಾಗಲೇ ಜನಸಾಮಾನ್ಯರು ಬೆಲೆ ಏರಿಕೆಯ ಬೇಗೆಯಲ್ಲಿ ಬೇಯುತ್ತಿದ್ದು, ಕೆಲವು ಸಮಯಗಳ ಹಿಂದೆಯಷ್ಟೇ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಇದೀಗ ಮತ್ತೆ ಹಾಲಿನ ದರ ಏರಿಸುವ ಕುರಿತಂತೆ ಮಾತನಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಸರಾ ಹತ್ತಿರ ಬರುತ್ತಿರುವುದರಿಂದ ಈ ವೇಳೆಯಲ್ಲಿ ಹಾಲಿನ ದರ ಏರಿಕೆ ಮಾಡಿದರೆ ಅದರ ಪರಿಣಾಮಗಳು ಹೋಟೆಲ್ ಉದ್ಯಮದ ಮೇಲೆ ಬೀರಲಿದೆ ಎಂಬ ಆತಂಕವೂ ಶುರುವಾಗಿದೆ.

ಇದೀಗ ಮೈಸೂರು ಹೋಟೆಲ್ ಮಾಲೀಕರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಹಾಲಿನ ದರ ಏರಿಕೆ ಮಾಡದಂತೆ ಮನವಿ ಮಾಡಿದೆ. ಪತ್ರದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ.ನಾರಾಯಣಗೌಡ ಮತ್ತು ಗೌರವ ಕಾರ್ಯದರ್ಶಿ ಎ.ಆರ್.ರವೀಂದ್ರ ಭಟ್ ಹಲವು ವಿಚಾರಗಳನ್ನು ಸರ್ಕಾರವ ಮುಂದಿಟ್ಟಿದ್ದಾರೆ. ಆ ಪತ್ರದಲ್ಲಿ ಏನಿದೆ ಎಂಬುದನ್ನು ನೋಡಿದ್ದೇ ಆದರೆ ಹತ್ತಾರು ವಿಚಾರಗಳನ್ನು ಪ್ರಸ್ತಾಪಿಸಿರುವುದು ಗೋಚರಿಸಿದೆ.
ಸಿಎಂಗೆ ಬರೆದ ಪತ್ರದಲ್ಲಿ ಸೆ.13ರಂದು ಮಾಗಡಿಯಲ್ಲಿ ಹೇಳಿಕೆ ನೀಡಿ ಹಾಲಿನ ದರ ಏರಿಕೆ ಮಾಡುವಂತೆ ಸಹಕಾರ ಸಚಿವರಿಗೆ ಸೂಚನೆ ನೀಡಿರುವುದು ಸರಿಯಷ್ಟೆ. ಈಗಾಗಲೇ ಅನೇಕ ದಿನಸಿ ಪದಾರ್ಥಗಳ ದರಗಳು ಗಗನಕ್ಕೇರಿವೆ. ಈ ಏರಿಕೆಯ ಆಘಾತದೊಂದಿಗೆ ಜನರು ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ರೈತರ ಹಾಲಿನ ಸಬ್ಸಿಡಿ ಹಣ ಬಿಡುಗಡೆಗೊಳಿಸಬೇಕು. ಆಗ ರೈತರಿಗೆ ಅನುಕೂಲವಾಗುತ್ತದೆ.

ಕಳೆದ ಜೂನ್‌ನಲ್ಲಿ ಹಾಲಿನ ಬೆಲೆ ಪರಿಷ್ಕರಿಸಲಾಗಿದೆ. ತಾವು ಹಾಲಿನ ಬೆಲೆ ಹೆಚ್ಚಿಸಿಲ್ಲವೆಂದು ಹೇಳಿಕೆ ನೀಡಿರುವಿರಿ. ಕೇವಲ 50 ಎಂಎಲ್ ಹೆಚ್ಚಿಸಲಾಗಿದೆ ಎಂದು ಹೇಳಿದರೂ ಜಾರಿಗೆ ಬಂದಿಲ್ಲ, ಬೆಲೆಗಳು ಮಾತ್ರ ಹೆಚ್ಚಾಯಿತು. ಸರ್ಕಾರ ಮತ್ತು ಕೆ.ಎಂ.ಎಫ್. ಹಾಲು ಉತ್ಪಾದಕರಿಗೆ ಸಬ್ಸಿಡಿಯ ಮೊತ್ತ 500 ಕೋಟಿಗೂ ಹೆಚ್ಚು ಬಾಕಿ ಉಳಿಸಿಕೊಂಡಿದೆ ಎಂದು ತಿಳಿದುಬಂದಿದೆ. ರೈತರಿಗೆ ನೀಡಬೇಕಾದ ಸಬ್ಸಿಡಿ ಪ್ರೋತ್ಸಾಹ ಧನ ಬಿಡುಗಡೆ ಗೊಳಿಸಿದರೆ ರೈತರಿಗೆ ಅನುಕೂಲವಾಗುತ್ತದೆ.
ಹೋಟೆಲ್ ಉದ್ಯಮಕ್ಕೂ ಸಂಕಷ್ಟ
ರೈತರಿಗೆ ಶೇ.50ರಷ್ಟು ಮಾತ್ರ ಪ್ರೋತ್ಸಾಹದ ಸಬ್ಸಿಡಿ ನೀಡಲಾಗುತ್ತಿದೆ. ಅವರು ಡೈರಿಗೆ ಹಾಕುವ ಹಾಲು 50 ಲೀಟರ್ ಹಾಕಿದರೆ, ಗುಡ್‌ಮಿಲ್ಕ್, ಫ್ಯಾಟ್ ಮಿಲ್ಕ್ ಎಂದು ಹೇಳಿ ಹಾಲಿನ ಗುಣಮಟ್ಟ ಕಡಿಮೆಯಿದೆ ಎಂದು ಹೇಳಿ ರೈತರಿಗೆ ಕಡಿತದಿಂದ ಅನ್ಯಾಯವಾಗುತ್ತಿದೆ. ಬಾಕಿ ಉಳಿಸಿಕೊಂಡಿರುವ ಹಣ ಬಿಡುಗಡೆಗೊಳಿಸಲು ಕೋರುತ್ತಾ, ಹೆಚ್ಚಿಸಲು ಹೊರಟಿರುವ ಹಾಲಿನ ದರಗಳು ಕೈಬಿಡಲು ಕೋರುತ್ತೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ದರಗಳ ಏರಿಕೆಗಳಿಂದ ನಮ್ಮ ಆತಿಥ್ಯ ಉದ್ಯಮಕ್ಕೆ ಅಪಾರವಾದ ಹೊಡೆತ ಬೀಳುತ್ತಿದೆ. ಕಳೆದ ಆರು ತಿಂಗಳುಗಳಿಂದ ದವಸ, ಧಾನ್ಯಗಳು, ಎಲ್ಲಾ ತರಹ ಊಟದ ಅಕ್ಕಿಗಳು, ಬೇಳೆ ಕಾಳುಗಳು, ಪನ್ಸಾರಿ ಪದಾರ್ಥಗಳು, ಸಾಂಬಾರ ಪದಾರ್ಥಗಳು, ಮಸಾಲ ಪದಾರ್ಥಗಳು, ಈರುಳ್ಳಿ, ಅಲೂಗಡ್ಡೆ, ಬೆಳ್ಳುಳ್ಳಿ ಸೇರಿದಂತೆ ಎಲ್ಲವೂ ಶೇ.15 ರಿಂದ 20ರಷ್ಟು ಹೆಚ್ಚಾಗಿವೆ. ಪೆಟ್ರೊಲ್, ಡೀಸಲ್ ಬೆಲೆಗಳನ್ನು ರಾಜ್ಯ ಸರ್ಕಾರ ಹೆಚ್ಚಿಸಿದ ನಂತರ ವಿಪರೀತ ಬೆಲೆಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ.
ಸರ್ಕಾರ ಮನವಿ ಪುರಸ್ಕರಿಸುತ್ತಾ?
ಹಣ್ಣುಹಂಪಲು, ತರಕಾರಿಗಳು ಸೇರಿದಂತೆ ಎಲ್ಲವೂ ಹೇಳತೀರದ ಬೆಲೆ ಹೆಚ್ಚಾಗಿವೆ. ಈಗ ದಿನಾಂಕ ಸೆ.16 ರಿಂದ ಅಡಿಗೆ ಎಣ್ಣೆಗಳು ಒಂದು ಲೀಟರ್‌ಗೆ 20 ರೂ. ಜಾಸ್ತಿಯಾಗಿದೆ. ಕಾಫಿಪುಡಿ ಮತ್ತು ಟೀ ಪುಡೀ ಕೆ.ಜಿ.ಗೆ 100 ರೂ. ಹೆಚ್ಚಾಗಿದೆ. ಹೋಟೆಲುಗಳಲ್ಲಿ ನೌಕರರ ಕೊರತೆ ಜೊತೆಗೆ ನೌಕರರ ಸಂಬಳ ಹೆಚ್ಚಾಗಿದೆ. ಇವೆಲ್ಲವನ್ನೂ ಸರಿತೂಗಿಸಿ ಕೊಂಡು ನಮ್ಮ ಉದ್ಯಮಗಳನ್ನು ನಡೆಸಲು ಬಹಳ ಕಷ್ಟಕರವಾಗಿದೆ. ಈ ಎಲ್ಲಾ ಕಾರಣಗಳಿಂದ ದಯಮಾಡಿ ತಾವು ಹಾಲಿನ ಬೆಲೆ ಹೆಚ್ಚಿಸಲು ಕೊಟ್ಟಿರುವ ಆದೇಶದ ಸೂಚನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಹೋಟೆಲ್ ಮಾಲೀಕರ ಸಂಘದ ಮನವಿ ಪುರಸ್ಕರಿಸುತ್ತಾ ಗೊತ್ತಿಲ್ಲ. ಆದರೆ ಈಗಾಗಲೇ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದ ಬೊಕ್ಕಸ ಬರಿದಾಗಿರುವುದಂತು ನಿಜ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ. ಬೆಲೆ ಏರಿಕೆ ವಿರುದ್ಧ ಹೋರಾಡುತ್ತಾ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ಈಗ ಬೆಲೆ ಏರಿಕೆ ಮಾಡುವುದರಲ್ಲಿ ತೊಡಗಿರುವುದನ್ನು ನೋಡಿ ಜನ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಿರುವಾಗ ಹಾಲಿನ ಏರಿಕೆ ಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications