ಮೈಸೂರು ದಸರಾಕ್ಕೆ ನಾಡಹಬ್ಬದ ಟ್ಯಾಗ್ ಸರಿಯೇ?
ಕರ್ನಾಟಕದ ಶ್ರೀಮಂತ ಹಾಗು ಸಮೃದ್ದ ಸಂಸ್ಕೃತಿಯ ಅನಾವರಣ ಮಾಡಲು ಸೂಕ್ತವಾದ ವೇದಿಕೆಯಾಗಿರುವ ನಾಡ ಹಬ್ಬ ದಸರಾ ಮೈಸೂರಿನಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಸರ್ಕಾರ ನಾಡ ಹಬ್ಬದ ಆಚರಣೆ, ಪ್ರಚಾರ ಕಾರ್ಯದಲ್ಲಿ ಮಾತ್ರ ಸಮಸ್ತರಿಗೂ ಮೆಚ್ಚುಗೆ ಆಗುವ ರೀತಿಯಲ್ಲಿ ವರ್ತಿಸಿಲ್ಲ ಎಂದು ನೊಂದ ಓದುಗರೊಬ್ಬರು ಈ ರೀತಿ ಪತ್ರ ಬರೆದಿದ್ದಾರೆ. ಪತ್ರದ ಸಂಪೂರ್ಣ ಅಕ್ಷರಗಳಿಗೆ ಅವರೇ ಜವಾಬ್ದಾರರು-ಸಂಪಾದಕ
ಮಾನ್ಯ ಸಂಪಾದಕರೆ,
ಪಾರಂಪರಿಕ, ವಿಶ್ವ ಪ್ರಸಿದ್ಧ ಎಂದೆಲ್ಲ ಅನೇಕ ಬಿರುದುಗಳನ್ನು ಹೊತ್ತ ನಮ್ಮ ಮೈಸೂರು ದಸರಾದ ತಯಾರಿ, ಆರಂಭ ತುಂಬ ಜೋರಾಗಿಯೇ ನಡೆದಿದೆ. ಪ್ರವಾಸಿಗರಿಗೆ ಮಾಹಿತಿ ನೀಡಲು, ಅವರನ್ನು ಸೆಳೆಯಲು ಆಧುನಿಕ ತಂತ್ರಜ್ಞಾನವಾದ ಅಂತರ್ಜಾಲವನ್ನು ಈ ಬಾರಿಯೂ ಬಳಸಲಾಗಿದೆ.
ಈ ಸಲದ ಮಿಂಬಲೆಯಲ್ಲಿ(ವೆಬ್ ಸೈಟ್) ಕೊಂಚ ಬದಲಾವಣೆ ಕಂಡಿದ್ದು, ಡಿ-ಫಾಲ್ಟ್ ಭಾಷೆಯಾಗಿ ಕನ್ನಡ ಮತ್ತು ಇಂಗ್ಲಿಷ್ ಎರೆಡರಲ್ಲೂ ಜೊತೆಜೊತೆಯಾಗಿ ಮಾಹಿತಿಗಳನ್ನ ದೊರಕುವಂತೆ ಮಾಡಿಕೊಟ್ಟಿದ್ದಾರೆ. 2013ರ ಸಾಲಿನ ನಾಡ-ಹಬ್ಬದಲ್ಲಾದರೂ ಕರ್ನಾಟಕದ ಶ್ರೀಮಂತ ಹಾಗು ಸಮೃದ್ದ ಸಂಸ್ಕೃತಿಯ ಅನಾವರಣ ವಾಗಬೇಕಿದೆ.
ಹೀಗಾಗಿ, ಕನ್ನಡ ನಾಡಿನ ಸಂಸ್ಕೃತಿಯನ್ನ ಎತ್ತಿ ಹಿಡಿಯಬೇಕಾದದ್ದು ಆಯೋಜಕರ ಕರ್ತವ್ಯ. ಆದರೆ ಈ ಬಾರಿಯ ದಸರಾದಲ್ಲು ಕೂಡ ಮುಖ್ಯ ಕಾರ್ಯಕ್ರಮಗಳಲ್ಲಿ ಕನ್ನಡ ಹಾಗು ಕನ್ನಡಿಗರ ಕಡೆಗಣನೆ ಮಾಡಲಾಗಿದೆ.

'ಯುವ ದಸರಾ' ಹೆಸರನಲ್ಲಿ ನಡೆಯುವ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಒಂದು ದಿನ ಕಾಟಾಚಾರಕ್ಕೆ ಎಂಬಂತೆ ಮಾತ್ರ ಕನ್ನಡಿಗರಿಂದ ಏರ್ಪಡಿಸಿ, ಉಳಿದ ದಿನಗಳೆಲ್ಲ ಪರಭಾಷಿಕರಿಗೆ ಮೀಸಲಿಡಲಾಗಿದೆ.
"ಆಹಾರ ಮೇಳ"ದಲ್ಲಿ ಅಗತ್ಯಕಿಂತ ಹೆಚ್ಚು ಇತರೆ ಹೊರನಾಡಿನ ಊಟಗಳ ಮಾಹಿತಿ ನೀಡಲಾಗಿದ್ದು, ಹುಡುಕಿದ್ದರೆ ಇನ್ನು ಹೆಚ್ಚು-ಹೆಚ್ಚು ಕರ್ನಾಟಕ ಖಾದ್ಯಗಳ ಬಂದಂತಹ ಪ್ರವಾಸಿಗರಿಗೆ ಪರಿಚಯ ಮಾಡಿಕೊಟ್ಟಂತಾಗುತ್ತಿತ್ತು.
ಇನ್ನು ಪ್ರವಾಸಿಗರಿಗೆ ಎಲ್ಲಾ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳು ಹಾಗೂ ಮೈಸೂರಿನ ಪ್ರವಾಸಿ ತಾಣಗಳಿಗೆ ಪ್ರತಿ 5 ರಿಂದ 10 ನಿಮಿಷಕ್ಕೆ ಒಂದುರಂತೆ ಬಸ್ ತಲುಪುವ ವ್ಯವಸ್ಥೆ ಮಾಡಲಾಗಿದ್ದು ಈ ವ್ಯವಸ್ತೆಗೆ "ಹಾಪ್ ಆನ್-ಹಾಪ್ ಆಫ್" ಅನ್ನೋ ಬದಲು ಒಂದೊಳ್ಳೆ "ಕನ್ನಡದ್ದೇ" ಪದ ಬಳಸಬಹುದಿತ್ತಲ್ಲವೆ?
ಇದನ್ನೆಲ್ಲಾ ಗಮನಿಸಿದಾಗ ದಸರಾ ಹೊರಗಿನವರಿಗೆ ಹಬ್ಬವಾಗಿ ಕಂಡರೂ ಕನ್ನಡಿಗನಾಗಿ ನನಗೆ ಕನ್ನಡಿಗರ ಹಬ್ಬ ಅನಿಸುತ್ತಿಲ್ಲ. ಹಬ್ಬದಿಂದ ಕನ್ನಡವೇ ಮರೆಯಾದರೆ ನಾಡ ಹಬ್ಬವಾಗಲು ಸಾದ್ಯವೇ? ಜಗತ್ತಿನ ವಿವಿಧ ಕಡೆಯಿಂದ ಬರುವ ಜನರಿಗೆ ನಮ್ಮ ಭಾಷೆ/ಸಂಸ್ಕೃತಿಯ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲವೇ? ಈ ಮೂಲಕ ಕನ್ನಡವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯ ಬಹುದಲ್ಲವೇ? ಹಾಗಾಗಿ ನಮ್ಮ ಸರ್ಕಾರ ಹಬ್ಬವನ್ನು ಬರಿ ವ್ಯವಹಾರಿಕವಾಗಿ ನೋಡದೆ, ನಮ್ಮ ಸಂಸ್ಕೃತಿಯ,ನಮ್ಮ ಪ್ರತಿನಿಧಿಯಾಗಿ ದೇಶ-ವಿದೇಶಗಳಿಗೆ ಪರಿಚಯ ಮಾಡುವ ಹಾಗೆ ಕ್ರಮ ಕೈಗೊಳ್ಳುತ್ತದೆ ಎಂದು ಆಶಿಸುವೆವು.
ನಿಮ್ಮ ನಂಬುಗೆಯ,
ಜಯಂತ್ ಸಿದ್ಮಲ್ಲಪ್ಪ, ವಿನೋಬನಗರ, ಶಿವಮೊಗ್ಗ












Click it and Unblock the Notifications