ಚುನಾವಣಾ ಶಾಯಿ ಬಗ್ಗೆ ಬಂದಿರುವ ಆರೋಪ ಆಧಾರರಹಿತ:ಮೈಲಾಕ್ ಮಾಜಿ ಅಧ್ಯಕ್ಷ
ಮೈಸೂರು, ಏಪ್ರಿಲ್ 21:ಮೈಲಾಕ್ ಅಳಿಸಲಾಗದ ಶಾಯಿ ಗುಣಮಟ್ಟದ ಬಗ್ಗೆ ಏಪ್ರಿಲ್ 18 ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಆರೋಪ ಕೇಳಿ ಬಂದಿದ್ದು, ಇದನ್ನು ಸಂಸ್ಥೆಯ ಮಾಜಿ ಅಧ್ಯಕ್ಷ ಹೆಚ್.ಎ ವೆಂಕಟೇಶ್ ತಳ್ಳಿ ಹಾಕಿದ್ದಾರೆ.
ಮಾಧ್ಯಮಗಳಿಗೆ ಸ್ಪಷ್ಟಿಕರಣ ನೀಡಿದ ಅವರು, ಇದೊಂದು ನಿರಾಧಾರ ಆರೋಪ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈ ಇಂಕ್ ಬಳಕೆ ಆಗುತ್ತಿದೆ. ಅಂದಿನಿಂದ ಇಲ್ಲದ ಆರೋಪ ಇಂದು ಮಾಡುತ್ತಿರುವುದು ಸರಿಯಲ್ಲ. ಭಾರತವು ಸೇರಿದಂತೆ 23 ರಾಷ್ಟ್ರಗಳಿಗೆ ಈ ಇಂಕ್ ಬಳಕೆ ಆಗಲಿದೆ. ಇಂಕ್ ಗುಣಮಟ್ಟವನ್ನ ಲ್ಯಾಬ್ ಗಳಲ್ಲಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.
ಚುನಾವಣಾ ಶಾಯಿ ಬಗ್ಗೆ ಮೈಸೂರಿನ ಕಾರ್ಖಾನೆ ತನ್ನದೆ ಹೆಸರು ಉಳಿಸಿಕೊಂಡಿದೆ. ಅಲ್ಲಿನ ಶಾಯಿ ಗುಣಮಟ್ಟ ಎಂದಿಗೂ ಕಳಪೆಯಾಗಿಲ್ಲ. ನನ್ನ ಬೆರಳಲ್ಲಿ ಈಗಲೂ ಶಾಯಿ ಇದೆ. ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್ ಸಂಸ್ಥೆಯ ಇಡೀ ದೇಶದಲ್ಲೇ ಮಾದರಿ ಕಾರ್ಖಾನೆಯಾಗಿದೆ. ಆ ಕಾರ್ಖಾನೆ ಹೆಸರನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ. ಚುನಾವಣಾ ಶಾಯಿ ಬಗ್ಗೆ ಬಂದಿರುವ ಆರೋಪ ಆಧಾರರಹಿತವಾದದ್ದು ಎಂದರು.

ನಾನು ಅಲ್ಲಿ ಅಧ್ಯಕ್ಷನಾಗಿದ್ದವನು. ಅಲ್ಲಿಯ ಗುಣಮಟ್ಟದ ಬಗ್ಗೆ ಯಾವತ್ತೂ ಹೊಂದಾಣಿಕೆ ಆಗಿಲ್ಲ. ಯಾರು ಇಂಕ್ ಅಳಿಸಿಹೋಗಿದೆ ಎನ್ನುತ್ತಾರೋ ಅವರ ಉದ್ದೇಶ ಬೇರೆ ಇರಬೇಕು. ನಾಲ್ವಡಿಯವರ ದೂರದೃಷ್ಟಿಯ ಕಾರ್ಖಾನೆ ಅದು ಎಂದು ವೆಂಕಟೇಶ್ ತಿಳಿಸಿದರು.












Click it and Unblock the Notifications