ನನ್ನ ಪ್ರೀತಿಯ ನಂಜನಗೂಡು ಹಲ್ಲುಪುಡಿಗೆ 100!
ಓಹ್...ನನ್ ಬೆಸ್ಟ್ ಫ್ರೆಂಡ್ ಗೆ ನೂರು ವರ್ಷ ಆಗೋಯ್ತಂತೆ ನಂಗೆ ತುಂಬಾನೇ ಇಷ್ಟ ಇವ್ಳು! ಮುಂಚೆ ಮನೇವ್ರೆಲ್ಲಾರ್ಗೂ ಇಷ್ಟ ಇದ್ಲು. ಆದ್ರೆ ನಾನು ಇವಳ ಹುಚ್ಚು ಹಿಡಿಸಿಕೊಂಡಿದ್ದು ನೋಡಿ, ಅವಳನ್ನ ಮನೆಗೆ ಬರೋಕೇ ಬಿಡ್ಲಿಲ್ಲ! ಒಂದೇ ಸರ್ತಿ ಬ್ಯಾನ್ ಮಾಡಿ, ಬೇರೆಯವರನ್ನ ಫ್ರೆಂಡ್ ಮಾಡ್ಕೋ ಅಂದ್ರು! ಇಲ್ಲಾ ನಂಗೆ ಬೇಕೇ ಬೇಕು ಅವ್ಳು ಅಂತ ಎಷ್ಟು ಹಠ ಮಾಡಿ, ಅತ್ತಿದ್ದೆ ಕೂಡ! ಬೆಳಗ್ಗೆ, ಮಧ್ಯಾಹ್ನ, ರಾತ್ರಿ....ಇವಳಿಲ್ದೇ ನಾ ಇರ್ತಾ ಇರಲಿಲ್ಲ! ಅಮ್ಮ ಅಂತೂ "ಬೇಡ ಕಣೆ, ಹೀಗೊಂದು ಹಚ್ಕೊಂಡ್ರೆ...ನಿಂಗೇನಾರಾ ಆಗುತ್ತೆ! ಖಾಯ್ಲೆ, ಕಸಾಲೆ ಬರುತ್ತೆ" ಅಂತೆಲ್ಲಾ ಬ್ಲ್ಯಾಕ್ ಮೇಲ್ ಮಾಡ್ತಿದ್ರು! ಆದ್ರೂ ಬಿಡ್ತಿರ್ಲಿಲ್ಲ, ಕದ್ದು ಮುಚ್ಚಿ ಇವಳನ್ನ ಮನೆಗೆ ಕರ್ಕೊಂಡು ಬರ್ತಿದ್ದೆ. ಯಾರಿಗೂ ಕಾಣದ ಹಾಗೆ ಅವ್ಸಿಡ್ತಿದ್ದೆ! ..
ನಾ ಹೀಗೆ ಮಾಡ್ತೀನಿ ಅಂತ ಗೊತ್ತಾದಾಗ ನಮ್ ತಂದೆ ನಂಗೆ ಕೊಡ್ತಿದ್ದ ಪುಡಿಗಾಸು ಕೊಡೋದನ್ನ ನಿಲ್ಲಿಸಿಬಿಟ್ರು! ಆಗ ಇವಳಿಲ್ಲದೇ ಅದೆಷ್ಟು ಒದ್ದಾಡಿದಿನೋ...! ಶಿರಾಳಕೊಪ್ಪಕ್ಕೆ ಅಜ್ಜಿ ಮನೆಗೆ ಹೋದಾಗ, ಅಜ್ಜಿ ಇವಳನ್ನ ತಂದಿಟ್ಟುಕೊಂಡಿದ್ರು. ಸಖತ್ ಖುಷಿಯಾಗೋಯ್ತು! ಅಮ್ಮ ಬಿಡ್ಬೇಕಲ್ಲಾ...ಅಲ್ಲೂ ಬಂದ್ ಮಾಡಿಬಿಟ್ರು. ನಾ ಮೊಂಡಿ, ಬಿಡಲಿಲ್ಲ. ರಸ್ತೆ ಕೊನೇಲಿದ್ದ ಅಮ್ಮನ ಫ್ರೆಂಡ್ ಬಾಬ್ಯಾನ ಅಂಗಡಿಗೆ ಹೋಗಿ, ಮಾವನ ಹೆಸರಲ್ಲಿ ಬರೆಸಿ...ಇವಳನ್ನ ಮತ್ತೆ ನನ್ ಜೊತೆಗೆ ಕರ್ಕೊಂಡು ಬರ್ತಿದ್ದೆ!
ಅಜ್ಜಿ ಮನೆ ಮಾಳಿಗೆಯ ಕತ್ತಲೆ ರೂಮ್ನಲ್ಲಿ...ನಾನು ಇವ್ಳು, ಜೊತೆಗೆ ಮಾವ ತರುತ್ತಿದ್ದ ಅನಂತರಾಮ್ ಅವರ ಪತ್ತೇದಾರಿ ಕಾದಂಬರಿ ನಾಯಕ "ಪುರುಷೋತ್ತಮ"....ಆಹ್! ಎಷ್ಟು ಚೆಂದವಾಗಿತ್ತು ಆ ದಿನಗಳು! ಊಟ, ತಿಂಡಿ ಏನೂ ಬೇಡ! ಇವಳಿದ್ದರೆ ಸಾಕು...ನನ್ನ ಹೊಟ್ಟೆ ತುಂಬಿಹೋಗ್ತಿತ್ತು! ಅಪ್ಪ ಅಮ್ಮಂಗೆ ಇವಳು ಒಂದು ದೊಡ್ಡ ತಲೆನೋವಾಗಿ ಬಿಟ್ಲು! ಇವಳ ಸಹವಾಸಾನ ನಂಗೆ ಹೇಗಾದ್ರೂ ಬಿಡಿಸ್ಲೇ ಬೇಕು ಅಂತ...ಡಾಕ್ಟರ್ ಕೈಲಿ ಹೇಳಿಸಿದ್ರು!

ಡಾಕ್ಟರ್ ಅದೇನೋ ಹೊಟ್ಟೆ ಎಕ್ಸರೇ ಎಲ್ಲಾ ತೆಗೆದು ...ಬ್ರೈನ್ ಎಕ್ಸ್ ರೇ ಅಂತೆಲ್ಲಾ ತೋರ್ಸಿ (ಅವೆರೆಡೂ ನಂದಲ್ಲ, ಸುಳ್ಸುಳ್ಳೇ ರೈಲು ಬಿಟ್ಟಿದ್ದು ಅಂತ ನಂಗಾಗ ಗೊತ್ತಾಗ್ಲಿಲ್ಲ...ಚಿಕ್ಕೋಳಲ್ವಾ? ನಂಬಿಬಿಟ್ಟೆ) ಹೊಟ್ಟೇಲಿ ಹುಳ ಬಂದಿದೆ ಅಂದ್ರು! ನಂಗದು ಏನೂ ಅನ್ನಿಸ್ಲಿಲ್ಲ! ಆದ್ರೆ....ಬುದ್ಧಿ ಕಮ್ಮಿ ಆಗುತ್ತೆ, ನಾಲಿಗೆ ಬಿದ್ದು ಹೋಗುತ್ತೆ, ಗಂಟಲು ಕ್ಯಾನ್ಸರ್ ಬರುತ್ತೆ ಅಂತೆಲ್ಲಾ ಹೇಳಿದಾಗ ಹೆದರಿಬಿಟ್ಟೆ! ಕ್ಯಾನ್ಸರ್ ಗೆ ಅಲ್ಲ, ಬುದ್ಧಿ ಕಮ್ಮಿ ಆಗುತ್ತೆ ಅಂದಿದ್ದಕ್ಕೆ! ಎಷ್ಟು ಅತ್ತಿದಿನೋ ಇವಳನ್ನು ಬಿಟ್ಟುಕೊಡಬೇಕಾದ್ರೆ!
ಅವಳ ನೆನಪಿಗೆ ಅವಳ ಕವರ್ ನ ನನ್ ಸ್ಕೂಲ್ ಪುಸ್ತಕದಲ್ಲಿ ಇಟ್ಕೊಂಡು ಆಗಾಗ ನೋಡ್ತಿದ್ದೆ. ಆಮೇಲೆ ತುಂಬಾ ಜನ ಫ್ರೆಂಡ್ಸ್ ಆದ್ರೂ...ನಂಗೆ ಈಗ್ಲೂ ಇವಳೇ ಇಷ್ಟ! ಆದ್ರೆ...ಈಗ ಅಟ್ ಪ್ರೆಸೆಂಟ್ ಬೇರೇ ಫ್ರೆಂಡ್ಸ್ ಜೊತೆ ಒಗ್ಗಿಹೋಗಿದೀನಿ. ಇವಳನ್ನ ಮನೆಗೆ ಕರ್ಕೊಂಡು ಬರೋಕ್ಕಾದಷ್ಟು! ಮೊನ್ಮೊನ್ನೆ ಇವಳಿಗೆ ನೂರು ವರ್ಷ ಆಯ್ತು ಅಂತ ಗೊತ್ತಾದಾಗ....ಒಮ್ಮೆ ನೋಡ್ಬೇಕೂ ಅನ್ನಿಸ್ತು. ಎಷ್ಟು ಹುಡುಕಿದ್ರೂ ...ಹಾಳಾದ್ ಒಂದ್ ಅಂಗ್ಡಿಲೂ ಸಿಗ್ಲಿಲ್ಲ! ಇವತ್ತು ಅಚಾನಕ್ ಆಗಿ ಯಾವ್ದೋ ಪೆಟ್ಟಿಗೆ ಅಂಗ್ಡೀಲಿ ನೋಡಿ, ತಡೀಲಾರದಷ್ಟು ಖುಷಿಯಾಗಿ...ಕರ್ಕೊಂಡು ಬಂದೆ!
ಅವಳೇನೂ ಬದಲಾಗಿಲ್ಲ....ಹಾಗೇ ಇದಾಳೆ, ಆದ್ರೆ ನಾ ಬದಲಾಗಿದೀನಿ...ಈ ಕಾಲದ್ ಜೊತೆ. ಅವಳೆಂದ್ರೆ ಈಗ್ಲೂ ಇಷ್ಟಾನೇ...ಆದ್ರೆ ಆಗಿದ್ದಂತೆ ಹುಚ್ಚಿಲ್ಲ
ಹೌದು...ನಂಜನಗೂಡು ಹಲ್ಲುಪುಡಿಯನ್ನ ನಾ ಉಜ್ಜಿದ್ದಕ್ಕಿಂತಾ ತಿಂದಿದ್ದೇ ಹೆಚ್ಚು! ಅದೂ ಹುಚ್ಚುಹುಚ್ಚಾಗಿ....ಯಾವಾಗ್ಲೂ ತಿಂತಿದ್ದೆ, ಪ್ಯಾಕೆಟ್ಗಟ್ಲೆ! ತಿಂಡಿ, ಊಟಕ್ಕಿಂತಾ ಜಾಸ್ತಿ! ಕದ್ದು ಮುಚ್ಚಿ, ಬಯ್ಸ್ಕೊಂಡು, ಹೊಡೆಸ್ಕೊಂಡ್ರೂ ತಿಂತಿದ್ದೆ! 2 ರೂಪಾಯಿಯಿಂದ ಹತ್ತು ರೂಪಾಯಿ ಆಯ್ತು! ಆದ್ರೂ ...ಎಲೆಅಡಿಕೆನಲ್ಲಿ ಸಿಗ್ತಿದ್ದ ದಕ್ಷಿಣೇನೆಲ್ಲಾ ಸೇರಿಸಿ ಬೇರೇವ್ರೆಲ್ಲಾ ಚಾಕ್ಲೇಟ್, ಬಿಸ್ಕೆಟ್ಸ್ ತೊಗೊತಿದ್ರೆ...ನಾನು ಈ ಹಲ್ಲುಪುಡೀನ ತೊಗೊಂಡು ತಿಂತಿದ್ದೆ! ಅಂತೂ ಅದು ಹೇಗೋ....ಬಿಟ್ಟೆ!
ಇಂತಿಪ್ಪಾ...ನನ್ನ ಮತ್ತು ನನ್ನ ಪ್ರೀತಿಯ ನಂಜನಗೂಡು ಹಲ್ಲುಪುಡಿಯ ಕಥೆ! ಶತಮಾನೋತ್ಸವ ಆಚರಿಸುತ್ತಿರುವ ನನ್ನ ಬೆಸ್ಟೆಸ್ಟ್ ಫ್ರೆಂಡ್ ಗೆ ಪ್ರೀತಿಯ ಮುದ್ದುಗಳೊಂದಿಗೆ..."ಕಂಗ್ರಾಚ್ಯುಲೇಷನ್ಸ್" ಕಣೇಮ್ಮಾ












Click it and Unblock the Notifications