ಮೂಡಾದಿಂದ ಉಳಿತಾಯ ಬಜೆಟ್ ಮಂಡನೆ
ಮುಡಾ ಕಚೇರಿಯಲ್ಲಿ ಶನಿವಾರ ನಡೆದ ಆಯವ್ಯಯ ಸಭೆಯಲ್ಲಿ 100 ಕೋಟಿ ರೂ.ಯೋಜನಾಗಾತ್ರದ ಆಯವ್ಯಯ ಮಂಡಿಸಲಾಯ್ತು.
ಮೈಸೂರು, ಮೇ 6: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2017-18ನೇ ಸಾಲಿನ ಆಯವ್ಯಯವನ್ನು ಆಯುಕ್ತ ಮಹೇಶ್ ಶನಿವಾರ ಮಂಡಿಸಿದರು. ಮುಡಾ ಕಚೇರಿಯಲ್ಲಿ ಶನಿವಾರ ನಡೆದ ಆಯವ್ಯಯ ಸಭೆಯಲ್ಲಿ 100 ಕೋಟಿ ರೂ.ಯೋಜನಾಗಾತ್ರದ ಆಯವ್ಯಯ ಮಂಡಿಸಲಾಯ್ತು.
2016-17ನೇ ಸಾಲಿನಲ್ಲಿ 7,139.18 ಲಕ್ಷ ರೂ. ವೆಚ್ಚ ಭರಿಸಿದ್ದು, 2017-18ನೇ ಸಾಲಿನಲ್ಲಿ 10,000 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿವೃದ್ಧಿ ಕುರಿತ ತರಬೇತಿಗಾಗಿ 100 ಲಕ್ಷ ರೂ.ಕಾಯ್ದಿರಿಸಿದ್ದು, 50,000 ಲಕ್ಷ ರೂ.ಆದಾಯ ನಿರೀಕ್ಷಿಸಲಾಗಿದೆ. 49,723.41 ಲಕ್ಷ ರೂ. ವೆಚ್ಚ ಭರಿಸಲು ಉದ್ದೇಶಿಸಲಾಗಿದ್ದು, ಪ್ರಸಕ್ತ ಸಾಲಿಗೆ 276.59 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ.[ಸ್ವಚ್ಛ ನಗರಿ ಪಟ್ಟ ಕೈ ತಪ್ಪಿದ್ದೇಕೆ? ಹೀಗಿದೆ ಜನಪ್ರತಿನಿಧಿಗಳ ಉತ್ತರ]

ಪ್ರಾಧಿಕಾರದ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿರುವ ಹುಡ್ಕೋ ಮನೆಗಳ ಕಂತಿನ ಬಾಕಿ ವಸೂಲಾತಿಗೆ 6 ತಿಂಗಳ ಕಾಲಾವಕಾಶ ನೀಡಿದ್ದು ಉಳಿದ ಮನೆಗಳ ಕಂತಿನ ಬಾಕಿಯಿಂದ 350 ಲಕ್ಷ ರೂ. ನಿರೀಕ್ಷಿಸಲಾಗಿದೆ. 2017-18ನೇ ಸಾಲಿನಲ್ಲಿ ಹೊಸ ಬಡಾವಣಗೆಗಳಾದ ರವೀಂದ್ರನಾಥ್ ಠಾಗೂರ್ ನಗರದಲ್ಲಿ ಲಭ್ಯವಿರುವ 1764 ನಿವೇಶನ ಹಾಗೂ ಲಲಿತಾದ್ರಿ ನಗರ 1 ನೇ ಹಂತದಲ್ಲಿ 545 ನಿವೇಶನಗಳು ಲಭ್ಯವಿದ್ದು, ಒಟ್ಟು 2309 ನಿವೇಶನಗಳ ಹಂಚಿಕೆಯಿಂದ 14,000 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
ಹೊಸ ಯೋಜನೆಗಳು: 2017-18ನೇ ಸಾಲಿನ ಆಯವ್ಯಯದಲ್ಲಿ ಕೆಲ ಹೊಸ ಯೋಜನೆಗಳನ್ನು ಸೇರಿಸಲಾಗಿದೆ. ಅಶೋಕ ವೃತ್ತದಿಂದ ಮಾನಂದವಾಡಿ ರಸ್ತೆಗೆ ಬರುವ ಅಂಬೇಡ್ಕರ್ ರಸ್ತೆ ಅಭಿವೃದ್ಧಿ ಕಾಮಗಾರಿ, ಶ್ರೀರಾಂಪುರ ವಿವೇಕಾನಂದ ನಗರ ವೃತ್ತದಿಂದ ಮಾನಂದವಾಡಿ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆ ಅಗಲೀಕರಣ ಕಾಮಗಾರಿ, ಸಯ್ಯಾಜಿರಾವ್ ರಸ್ತೆಯಿಂದ ಪುಲಿಕೇಶಿ ರಸ್ತೆ ಮಾರ್ಗವಾಗಿ ಎಫ್‍ಟಿಎಸ್ ವೃತ್ತ ಸೇರುವ ರಸ್ತೆಯ ವಾಣಿಜ್ಯೀಕರಣ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಸಭೆಯಲ್ಲಿ ಮುಡಾ ಅಧ್ಯಕ್ಷ ಡಿ.ಧೃವಕುಮಾರ್, ಶಾಸಕರಾದ ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ವಾಸು, ಎಂಎಲ್.ಸಿಗಳಾದ ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಪಾಲಿಕೆ ಸದಸ್ಯ ಸಂದೇಶ್ ಸ್ವಾಮಿ, ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications