Mysuru Airport: ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಕುರಿತು ಸಂಸದ ಯದುವೀರ್ ಮಹತ್ವದ ಮಾಹಿತಿ
Mysuru Airport: ಈಗಾಗಲೇ ರಾಜ್ಯದ ಹಲವೆಡೆ ವಿಮಾನ ನಿಲ್ದಾಣ ಕಾಮಗಾರಿಗಳ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ನಡುವೆಯೇ ಇದೀಗ ಸಾಂಸ್ಕೃತಿಕ ನಗರಿ ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಕುರಿತು ಸಂಸದ ಯದುವೀರ್ ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದ್ದಾರೆ. ಹಾಗಾದರೆ ಮಾಹಿತಿ ಇಲ್ಲಿದೆ ಗಮನಿಸಿ.
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ವಿಮಾನ ನಿಲ್ದಾಣದ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹಲವು ವಿಷಯಗಳ ಕುರಿತು ಚರ್ಚೆ ಮಾಡಿದರು. ಈ ವೇಳೆ ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಯ ಮೊದಲ ಹಂತದ ಕೆಲಸ ಶೀಘ್ರದಲ್ಲೇ ಆರಂಭ ಆಗಲಿದೆ ಎಂದು ತಿಳಿಸಿದರು.

ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮೈಸೂರು ಪ್ರವಾಸೋದ್ಯಮ ಕೇಂದ್ರವಾಗಿದ್ದು, ಇಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಮಾನಯಾನ ಸಂಪರ್ಕ ಅಗತ್ಯವಾಗಿದೆ. ಈ ಹಿನ್ನೆಲೆ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸುಮಾರು 18 ರಿಂದ 20 ವಿಮಾನ ಯಾನ ಸಂಸ್ಥೆಗಳು ಒಂದಾಗಿದ್ದು, ಇದೇ ಮಾರ್ಚ್ ತಿಂಗಳಿನಿಂದ ಕೇರಳದಿಂದ ಮೈಸೂರಿಗೆ ವಿಮಾನಯಾನ ಸಂಪರ್ಕ ಆರಂಭ ಆಗಲಿದೆ ಎಂದು ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಕಾರ್ಯದ ಮೊದಲ ಹಂತ ಕೈಗೆತ್ತಿಕೊಳ್ಳಲು ಹೆಚ್ಚುವರಿ ಜಿಲ್ಲಾಧಿಕಾರಿ 45 ಹೆಕ್ಟೇರ್ ಸ್ವಾಧೀನಕ್ಕೆ ಅನುಮೋದನೆ ನೀಡಿದ್ದಾರೆ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದ ಬಳಿಕ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿ ಆರಂಭ ಆಗಲಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಪ್ರವಾಸೋದ್ಯಮ ಹಾಗೂ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳು ಇವೆ. ಆದರೆ, ಮೈಸೂರಿನಿಂದ ಬೇರೆಡೆಗೆ ಹಾಗೂ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹಲವು ವಿಮಾನ ಯಾನಗಳು, ಹಲವಾರು ಕಾರಣಗಳಿಂದ ರದ್ದಾಗಿದೆ. ಮುಂದಿನ ದಿನಗಳಲ್ಲಿ ದೇಶದ ಇತರ ಕಡೆಯಿಂದ ವಿಮಾನಯಾನ ಸೇವೆ ಆರಂಭಿಸುವ ಬಗ್ಗೆ ಹಲವು ವಿಮಾನಯಾನ ಸಂಸ್ಥೆಗಳ ಜೊತೆ ಸಂಪರ್ಕ ಇದೆ ಎಂದರು.
ಅಲ್ಲದೆ, ಇದಕ್ಕಾಗಿಯೇ ಮೈಸೂರಿನ ಟ್ರಾವೆಲ್ಸ್ ಅಸೋಸಿಯೇಟ್ಸ್ , ಹೋಟೆಲ್ ಮಾಲೀಕರ ಸಂಘ ಹಾಗೂ ಇತರ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚಿನ ವಿಮಾನಯಾನ ಸಂಪರ್ಕ ಸೇವೆ ಪ್ರಾರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಿದರು.
ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಯಾಗಲಿದ್ದು, ಈಗಾಗಲೇ ಕೆಪಿಟಿಸಿಎಲ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ ಎಂದರು.












Click it and Unblock the Notifications