Pratap Simha: ಬಿಜೆಪಿ ಚುನಾವಣೆ ಉಸ್ತುವಾರಿ ಭೇಟಿ ಬಳಿಕ ಪ್ರತಾಪ್ ಸಿಂಹ ಮಹತ್ವದ ನಿರ್ಧಾರ
ಬೆಂಗಳೂರು, ಮಾರ್ಚ್ 13: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಈ ಬಾರಿ ಹಾಲಿ ಸಂಸದ ಪ್ರತಾಪ್ ಸಿಂಹ ಕೈತಪ್ಪುತ್ತದೆ ಎನ್ನುವ ವಿಚಾರ ಸದ್ಯ ಭಾರೀ ಚರ್ಚೆಯಲ್ಲಿದೆ. ಈ ಬೆನ್ನಲ್ಲೇ ಪ್ರತಾಪ್ ಸಿಂಹ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾಗಿದ್ದಾರೆ.
ಕಳೆದ ಎರಡು ಅವಧಿಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿರುವ ಪ್ರತಾಪ್ ಸಿಂಹ ತಮ್ಮ ಕೆಲಸದಿಂದಲೇ ಜನ ನಾಯಕ ಎನಿಸಿಕೊಂಡಿದ್ದರು. ಇಂತಹ ಜನಪ್ರತಿನಿಧಿಗೆ ಟಿಕೆಟ್ ಕೈತಪ್ಪುತ್ತಿರುವ ಚರ್ಚೆ ಆರಂಭವಾಗುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರು, ಪ್ರತಾಪ್ ಸಿಂಹ ಮಾತ್ರವಲ್ಲದೇ ಪಕ್ಷ ಭೇದ ಮರೆತು ಪ್ರತಾಪ್ ಸಿಂಹ ಪರ ಬೆಂಬಲ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ನಿರಂತರ ಚರ್ಚೆ ನಡೆಯುತ್ತಿದೆ.

ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎನ್ನುವ ವಿಚಾರ ಮುನ್ನೆಲೆ ಬರುತ್ತಿದ್ದಂತೆ ಸ್ವತಃ ಪ್ರತಾಪ್ ಸಿಂಹ ಕೂಡ ಅಸಮಾಧಾನಗೊಂಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಪ್ರತಾಪ್ ಸಿಂಹ, ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾಗಿ, ಕ್ಷೇತ್ರದ ಸ್ಥಿತಿಗತಿ ಹಾಗೂ ಕ್ಷೇತ್ರದಲ್ಲಿ ತಮ್ಮ ಕೆಲಸಗಳು, ಜನಾಭಿಪ್ರಾಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ರಾಧಾ ಮೋಹನ್ ದಾಸ್ ಅಗರ್ವಾಲ್ ಭೇಟಿ ಬಳಿಕ ಫೇಸ್ಬುಕ್ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ, 'ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ನಾನು ಕೇವಲ ಒಂದು ಗಂಟೆ ಭೇಟಿ ಮಾಡಿದೆ. ನಾನು ಮೊದಲೇ ಹೇಳಿದ್ದೇನೆ ಮತ್ತು ಮತ್ತೊಮ್ಮೆ ಹೇಳುತ್ತಿದ್ದೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಲ್ಲದೆ ನಾನು ಏನೂ ಅಲ್ಲ. ನನಗೆ ಟಿಕೆಟ್ ಸಿಗುತ್ತದೆ ಎಂದು ಭಾವಿಸುತ್ತೇನೆ. ಇಲ್ಲದಿದ್ದರೆ ನಾನು ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಧನ್ಯವಾದ' ಎಂದು ಬರೆದುಕೊಂಡಿದ್ದಾರೆ.












Click it and Unblock the Notifications