ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ; ಇದೊಂದು ಪಾಠ ಎಂದ ಪ್ರತಾಪ್ ಸಿಂಹ
ಮೈಸೂರು, ಸೆಪ್ಟೆಂಬರ್ 2: "ಡ್ರಗ್ಸ್ ಮಾಫಿಯಾ ಭಯೋತ್ಪಾದನೆಯ ಒಂದು ಭಾಗ. ಒಂದು ದೇಶ ಹಾಳು ಮಾಡಬೇಕಾದರೆ ಬಾಂಬ್ ಹಾಕಬೇಕಿಲ್ಲ, ಆ ದೇಶದ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು" ಎಂದು ಸ್ಯಾಂಡಲ್ ವುಡ್ ನಲ್ಲಿನ ಡ್ರಗ್ಸ್ ಮಾಫಿಯಾ ವಿಷಯದ ಕುರಿತು ಪ್ರತಿಕ್ರಿಯಿಸಿದ್ದಾರೆ ಸಂಸದ ಪ್ರತಾಪ ಸಿಂಹ.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, "ಈ ಮಾಫಿಯಾ ಬಾಲಿವುಡ್, ಸ್ಯಾಂಡಲ್ ವುಡ್ ಗಷ್ಟೇ ಸಿಮಿತವಾಗಿಲ್ಲ. ಎಲ್ಲ ಕಡೆ ಡ್ರಗ್ಸ್ ಹಾಗೂ ಗಾಂಜಾ ಸಿಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆಯನ್ನು ಪಾಠವಾಗಿ ಭಾವಿಸಿ ಡ್ರಗ್ಸ್ ನಿರ್ಣಾಮ ಮಾಡಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ, ಯಾವ ದೇಶದ ಯಾವ ಪೆಡ್ಲರ್ ಇದ್ದಾರೆ ಅವರೆಲ್ಲರನ್ನೂ ಬಂಧಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಡ್ರಗ್ಸ್ ಬಗ್ಗೆ ಮಾಹಿತಿ ಇರುವವರು ಮಾಹಿತಿ ಕೊಡಿ. ಎಲ್ಲ ಕಡೆ ರೇಡ್ ಆಗಲಿ. ಗೃಹ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಶಿಘ್ರದಲ್ಲೇ ಇಡೀ ಪ್ರಕರಣದ ಬಗ್ಗೆ ತನಿಖೆಯಾಗಿ ಸತ್ಯ ಹೊರಬರಲಿ" ಎಂದು ಹೇಳಿದ್ದಾರೆ.

ಈ ಬಾರಿ ದಸರಾ ಆಚರಣೆ ಕುರಿತೂ ಮಾತನಾಡಿದ ಅವರು, "ಈ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ. ಮೈಸೂರಿನಲ್ಲೇ ಹೈಪವರ್ ಮೀಟಿಂಗ್ ನಡೆಯಲಿದೆ. ನಮಗೆ ದಸರಾ ಅನುಭವ ಇದೆ. ನಮ್ಮ ಹೊಸ ಡಿಸಿ ಹಾಗೂ ಹಳೆ ಡಿಸಿಯವರ ಅನುಭವ ಪಡೆದು ದಸರಾ ಮಾಡುತ್ತೇವೆ. ಯಾವುದೂ ಕಷ್ಟವಾಗಲ್ಲ. ಕೊರೊನಾ ಹಿನ್ನೆಲೆ ಹೇಗೆ ದಸರಾ ಆಚರಿಸಬೇಕು ಅಂತ ಸಿಎಂ ತೀರ್ಮಾನ ಮಾಡ್ತಾರೆ. ಈ ಬಾರಿಯ ದಸರಾಗೆ ನಾವು ಸಜ್ಜಾಗಿದ್ದೇವೆ" ಎಂದು ತಿಳಿಸಿದ್ದಾರೆ.












Click it and Unblock the Notifications