ಯಡಿಯೂರಪ್ಪರಿಂದ ಅಧಿಕಾರ ಪಡೆದ ಮಹಾರಥರು ಮಾಡಿದ್ದೇನು?-ಬೊಮ್ಮಾಯಿ ವಿರುದ್ಧ ಪ್ರತಾಪ್ ಸಿಂಹ ಟೀಕೆ
ಮೈಸೂರು, ಜೂನ್ 17: ಯಡಿಯೂರಪ್ಪ ಅವರಂತೆ ಅವರ ನಂತರ ಬಂದವರು ಸಮರ್ಥವಾಗಿ ಅಧಿಕಾರ ನಡೆಸಿದ್ದರೆ, ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಬಸವರಾಜ ಬೊಮ್ಮಯಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಹೊಂದಾಣಿಕೆ ಪಾಲಿಟಿಕ್ಸ್ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಅವರಂತೆ ಅವರ ನಂತರ ಬಂದವರು ಸಮರ್ಥವಾಗಿ ಅಧಿಕಾರ ನಡೆಸಿದ್ದರೆ ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಅವರು ತುಂಬಾ ಪ್ರಯತ್ನ ಮಾಡಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದರು. ಈ ವೇಳೆ ರಾಜ್ಯಕ್ಕೆ ಪ್ರವಾಹ ಬಂದಿತ್ತು. ಬಿಎಸ್‌ವೈ ಒಬ್ಬರೇ ಪ್ರವಾಹ ಪರಿಸ್ಥಿತಿ ನಿಭಾಯಿಸಿದ್ದರು. ಕೋವಿಡ್ ವೇಳೆ ಜನರ ಪ್ರಾಣ ಉಳಿಸಲು ಪಣ ಸತೊಟ್ಟಿದ್ದರು. ಆದರೆ, ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು? ಯಡಿಯೂರಪ್ಪ ಅವರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಎಂದು ಬಸವರಾಜ ಬೊಮ್ಮಾಯಿ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದರು.
ಸಾವರ್ಕರ್ ಪಠ್ಯ ತೆಗೆದು ಹಾಕಿರುವ ನೀವು, ಕ್ಷಮಾಪಣೆ ಪತ್ರ ಬರೆದು ಕೊಟ್ಟು ನವಾಬ್ ಜೈಲಿನ ಕಡೆ ತಿರುಗಿ ನೋಡಲ್ಲ ಎಂದು ಬ್ರಿಟೀಷರ ಬಳಿ ಮಂಡಿಯೂರಿದ ನೆಹರು ಪಠ್ಯ ಸೇರಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು. ಅಲ್ಲದೇ ಪ್ರವೀಣ್ ನೆಟ್ಟಾರು, ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉತ್ಸಾಹ ಅವರಲ್ಲಿ ಯಾಕೆ ಕಾಣಲಿಲ್ಲ? ಜನರ ಆಕ್ರೋಶ, ಕಾರ್ಯಕರ್ತರ ನೋವಿಗೆ ನಾನು ಧ್ವನಿಯಾಗಿದ್ದೇನೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.
ನನ್ನ ಪ್ರಬುದ್ಧತೆಯನ್ನು ಪ್ರಶ್ನಿಸುತ್ತಾ ಎಳಸು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಹಾದಿ ತಪ್ಪುವ ಪರಿವೇ ಇಲ್ಲದೇ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರಲ್ಲಿ ಯಾವ ಮೆಚ್ಯೂರಿಟಿ ಇದೆ. ಇದಕ್ಕೆ ಬೇಕಾಗುವ 59 ಸಾವಿರ ಕೋಟಿ ರೂ.ಗಳನ್ನು ಅವರು ಹೇಗೆ ತರುತ್ತಾರೆ ಎಂದು ಪ್ರಶ್ನಿಸಿದರು.
ನನಗೆ ಬುದ್ಧಿವಂತರಾದ ಸಿದ್ದರಾಮಯ್ಯರಂತೆ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡುವ ಪ್ರಬುದ್ಧತೆ ಬೇಕಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಕೊರಟಗೆರೆಯಲ್ಲಿ ಚೂ ಬಿಟ್ಟು ಡಾ.ಪರಮೇಶ್ವರ್ ಅವರನ್ನು ಸೋಲಿಸುವ, ಮಗ ಮೊಮ್ಮಗನನ್ನು ರಾಜಕೀಯಕ್ಕೆ ತರುವ, ಎಚ್.ಡಿ.ದೇವೇಗೌಡರನ್ನು ಸೇರಿದಂತೆ ಹಿರಿಯ ರಾಜಕಾರಣಿಗಳನ್ನು ಏಕ ವಚನದಲ್ಲಿ, ತುಚ್ಚವಾಗಿ ಮಾತನಾಡುವ ಹಾಗೂ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಪ್ರಬುದ್ಧತೆ ನನಗೆ ಬೇಕಿಲ್ಲ ಎಂದು ಟೀಕಿಸಿದರು.
ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ, ಮಹಾಪೌರ ಶಿವಕುಮಾರ್, ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್, ಗಿರಿಧರ್, ಕೇಬಲ್ ಮಹೇಶ್, ಸೋಮಸುಂದರ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications