ಶಾಸಕ ಜಿ.ಟಿ ದೇವೇಗೌಡ ಸವಾಲಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು
ಮೈಸೂರು, ಮೇ 28: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಆತಂಕದ ಜೊತೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ನಡುವೆ ಮಾತಿನ ಜಟಾಪಟಿ ಶುರುವಾಗಿದ್ದು, ಜಿಲ್ಲಾಧಿಕಾರಿ ವರ್ಗಾವಣೆ ವಿಚಾರವಾಗಿ ಸವಾಲು ಹಾಕಿದ್ದ ಶಾಸಕ ಜಿ.ಟಿ ದೇವೇಗೌಡ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, "ಅಧಿಕಾರಿಗಳನ್ನು ಟ್ರಾನ್ಸಫರ್ ಮಾಡುವುದೇ ತಾಕತ್ತು ಅನ್ನುವುದಾದರೆ, ಅಂತಹ ತಾಕತ್ತು ನನಗೆ ಬೇಡ. ಒಬ್ಬ ಸಂಸದನಾಗಿ ನಾನು ನನ್ನ ಕೆಲಸದಲ್ಲಿ ತಾಕತ್ತು ತೋರಿಸಿದ್ದೇನೆ" ಎಂದು ಉತ್ತರಿಸಿದರು.
"ಮೈಸೂರಿಗೆ ನಾನು ಹೊರಗಿನವನು. ಆದರೂ, ಮೊದಲ ಚುನಾವಣೆಯಲ್ಲಿ ಮೈಸೂರು- ಕೊಡಗಿನ ಜನ 30 ಸಾವಿರ ಅಂತರದ ಮತಗಳಿಂದ ಗೆಲ್ಲಿಸಿದರು. ನನ್ನ ತಾಕತ್ತು ತೋರಿಸಿ ಒಳ್ಳೆಯ ಕೆಲಸ ಮಾಡಿದ್ದರಿಂದಾಗಿ, 2ನೇ ಬಾರಿ 1.4 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು" ಎಂದು ಶಾಸಕ ಜಿಟಿ ದೇವೇಗೌಡರಿಗೆ ಟಾಂಗ್ ನೀಡಿದ್ದಾರೆ.
Recommended Video


ಜಿಲ್ಲಾಧಿಕಾರಿ ಅಥವಾ ಇನ್ನಾವುದೋ ಅಧಿಕಾರಿಯನ್ನು ವರ್ಗಾವಣೆ ಮಾಡಿಸುವುದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನು ನಾನು ಮಾಡುವುದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಶಾಸಕ ಸಾ.ರಾ ಮಹೇಶ್ ಅವರನ್ನು ಹೊಗಳಿದ್ದು ಜಿ.ಟಿ ದೇವೇಗೌಡರಿಗೆ ಇಷ್ಟವಾಗಿಲ್ಲ ಅನ್ನಿಸುತ್ತದೆ. ಹೀಗಾಗಿ, ನನ್ನ ವಿರುದ್ಧ ಮಾತನಾಡಿದ್ದಾರೆ. ಜಿಟಿಡಿ ಅವರು ನನಗೆ ತಂದೆ ಇದ್ದಂತೆ. ಅವರು ಹರೀಶ್‌ಗೌಡರನ್ನು ಹೇಗೆ ನೋಡಿಕೊಂಡಿದ್ದಾರೋ, ಹಾಗೆಯೇ ನನ್ನನ್ನು ನೋಡಿಕೊಂಡಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಬೈಯುವ ಹಕ್ಕು ಜಿ.ಟಿ ದೇವೇಗೌಡರಿಗೆ ಇದೆ. ಅವರು ಬೈಯುವುದನ್ನು ನಾನು ಪ್ರೀತಿಯಿಂದ ಸ್ವೀಕರಿಸಿಸುತ್ತೇನೆ ಎಂದರು.

ನಾನು ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾಗ ಶಾಸಕರ ಕಾರ್ಯವೈಖರಿ ನೋಡಿದ್ದೇನೆ. ಕೆ.ಆರ್ ನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಾ.ರಾ ಮಹೇಶ್ ಜಿಲ್ಲೆಗೆ ಮೇಲ್ಪಂಕ್ತಿಯಾಗುವಂತೆ ಕೆಲಸ ಮಾಡಿದ್ದಾರೆ ಅಂತ ಹೇಳಿದ್ದು ನಿಜ. ಇದರಲ್ಲಿ ಯಾರನ್ನೂ ಹೊಗಳುವ ಅಥವಾ ತೆಗಳುವ ಉದ್ದೇಶವಿಲ್ಲ. ಇದನ್ನು ಅಪಾರ್ಥ ಮಾಡಿಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.












Click it and Unblock the Notifications