Monsoon Rain: ಕಬಿನಿ ಜಲಾಶಯ ಭರ್ತಿಗೆ 6 ಅಡಿ ಅಷ್ಟೇ ಬಾಕಿ, ನದಿಪಾತ್ರದ ಜನರಿಗೆ ಶುರುವಾಯ್ತು ಢವಢವ
ಮೈಸೂರು, ಜುಲೈ, 24: ವಾಡಿಕೆಯಂತೆ ಮಳೆ ಸುರಿದಿದ್ದರೆ ಇಷ್ಟರಲ್ಲೇ ಜಿಲ್ಲೆಯ ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿ ಬಿಡುತ್ತಿತ್ತು. ಆದರೆ ಬೇಸಿಗೆಯಲ್ಲಿ ನೀರಿನ ಮಟ್ಟ ತಳಮುಟ್ಟಿದ್ದರಿಂದ ಮತ್ತು ಮುಂಗಾರು ವಿಳಂಬವಾದ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರಲಿಲ್ಲ. ಆದರೀಗ ಕೇರಳದ ವೈನಾಡು ಸೇರಿದಂತೆ ಹಿನ್ನೀರು ಪ್ರದೇಶಗಳಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಜೀವಕಳೆ ಬಂದಿದೆ.
ಕಳೆದ ಕೆಲ ದಿನಗಳಿಂದ ಮುಂಗಾರು ಚೇತರಿಸಿಕೊಂಡಿದ್ದು, ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಜಾಸ್ತಿಯಾಗಿದೆ. ಹೀಗಾಗಿ ನೀರಿನ ಮಟ್ಟವೂ ಏರಿಕೆಯಾಗುತ್ತಿದ್ದು, 2284 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2278.31 ಅಡಿಯಷ್ಟು ನೀರಿದೆ.

ಜಲಾಶಯದ ಒಳಹರಿವು 20,749 ಕ್ಯುಸೆಕ್‌ಗೆ ಏರಿದೆ. ಇದರಿಂದ ಜಲಾಶದಿಂದ 10,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲೀಗ 6.09 ಟಿಎಂಸಿ ನೀರು ಸಂಗ್ರಹವಾಗಿದೆ. ಮಳೆ ಹೀಗೆ ಮುಂದುವರೆದರೆ ಬಹುಬೇಗ ಜಲಾಶಯ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆಯೇ ರೈತರಿಗೆ ಸಂತೋಷದ ಜೊತೆಗೆ ಆತಂಕವೂ ಶುರುವಾಗಿದೆ. ಒಂದು ಕಡೆ ಜಲಾಶಯ ಭರ್ತಿಯಾದರೆ ಕೃಷಿಗೆ ನೀರು ಹರಿದು ಬರಲಿದೆ ಎಂಬ ಖುಷಿಯಿದ್ದರೆ, ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಸಂಕಷ್ಟ ಅನುಭವಿಸಬೇಕಲ್ವ ಎಂಬ ಚಿಂತೆಯೂ ಕಾಡತೊಡಗಿದೆ. ಈಗಾಗಲೇ ಕಳೆದ ನಾಲ್ಕೈದು ವರ್ಷಗಳಿಂದ ನದಿಪಾತ್ರದ ಜನ ಪ್ರವಾಹದ ಸಂಕಷ್ಟವನ್ನು ಅನುಭವಿಸುತ್ತಲೇ ಬಂದಿರುವುದರಿಂದ ತಗ್ಗುಪ್ರದೇಶದ ಜನರ ಎದೆ ಢವಢವ ಎಂದು ಬಡಿದುಕೊಳ್ಳಲಾರಂಭಿಸಿದೆ.
ರೈತರ ಮುಖದಲ್ಲಿ ಮಂದಹಾಸ
ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾಶಯದ ಪಕ್ಕದಲ್ಲಿರುವ ಸುಭಾಷ್ ವಿದ್ಯುತ್ ಘಟಕದ ಮೂಲಕ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ. ಒಳ ಹರಿವು ಧಿಡೀರ್ ಹೆಚ್ಚಾದಲ್ಲಿ ಹೆಚ್ಚಿನ ನೀರಿನ ಹೊರ ಹರಿವು ಹೆಚ್ಚಿಸುವುದು ಅನಿವಾರ್ಯವಾಗಲಿದ್ದು, ಇದರಿಂದ ಪ್ರವಾಹ ಏರ್ಪಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಈ ನಡುವೆ ಜಲಾಶಯ ಭರ್ತಿಯಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ಬಲದಂಡೆ ನಾಲೆಯ 1.15 ಲಕ್ಷ ಹೆಕ್ಟೇರ್, ಎಡದಂಡೆ ನಾಲೆಯ 3 ಸಾವಿರ ಹೆಕ್ಟೇರ್ ಪ್ರದೇಶದ ರೈತರ ಗದ್ದೆಗಳ ಖಾರೀಫ್ ಬೆಳೆಗೆ ನೀರು ಸಿಗುವ ಸಾಧ್ಯತೆಯಿದೆ. ಇದು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಇನ್ನು ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಇದರಿಂದ ಜಲಾಶಯದ ತಳಭಾಗದಲ್ಲಿರುವ ಗ್ರಾಮಗಳು ಹಾಗೂ ನಂಜನಗೂಡು ಪಟ್ಟಣದ ಜನರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದೆ. ಕಳೆದ ಐದು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಪ್ರವಾಹ ಏರ್ಪಡುತ್ತಿದ್ದು, ಪ್ರತಿ ವರ್ಷವೂ ಸಂಕಷ್ಟ ಅನುಭವಿಸುವುದು ತಪ್ಪದಂತಾಗಿದೆ.
ರೈತರಿಗೆ ಬೆಳೆಹಾನಿ ಸಂಭವಿಸುವ ಭಯ
ಜಲಾಶಯದಿಂದ ಹೊರ ಬಿಡುವ ನೀರಿನ ಪ್ರಮಾಣ ಹೆಚ್ಚಾದಂತೆಲ್ಲ ಭಯವೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರವಾಹ ಸೃಷ್ಟಿಯಾದಗಲೆಲ್ಲ ತಳಭಾಗದಲ್ಲಿ ವಾಸಿಸುವ ಜನರ ಮನೆಗೆ ನೀರು ನುಗ್ಗುವುದರಿಂದ ಗಂಜಿ ಕೇಂದ್ರದಲ್ಲಿ ಆಶ್ರಯಪಡಬೇಕಾಗುತ್ತದೆ. ಜೊತೆಗೆ ರೈತರು ಬೆಳೆದ ಭತ್ತ, ಕಬ್ಬು, ಬಾಳೆ ಹೀಗೆ ಎಲ್ಲ ಬೆಳೆಗಳು ಮುಳುಗಡೆಯಾಗುತ್ತವೆ. ಕೆಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿದು ಹೋಗುತ್ತದೆ. ಇದರಿಂದ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗುತ್ತದೆ.
ಪ್ರವಾಹ ಏರ್ಪಡದಂತೆ ಪ್ರಾರ್ಥನೆ ಮೊರೆಹೋದ ಜನ
ಕಬಿನಿಯಿಂದ ನೀರು ಹೊರಬರುತ್ತಿದ್ದಂತೆಯೇ ಕಪಿಲೆ ಉಗ್ರಳಾಗುತ್ತಾಳೆ. ಇದರಿಂದ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಮಲ್ಲನ ಮೂಲೆ ರಸ್ತೆ ಸಂಪೂರ್ಣ ಜಲಾವೃತವಾಗುತ್ತದೆ. ಜೊತೆಗೆ ನಂಜನಗೂಡು ತಾಲೂಕಿನ ಕಣೆನೂರು, ಹುಲ್ಲಹಳ್ಳಿ, ರಾಂಪುರ, ಹಂಡುವಿನಹಳ್ಳಿ, ದೇಬೂರು, ನಂಜನಗೂಡು, ಸುತ್ತೂರು, ವರುಣ ವ್ಯಾಪ್ತಿಯ ಜಮೀನುಗಳು ಮುಳುಗಡೆಯಾಗುತ್ತವೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಪ್ರವಾಹ ಸಂಭವಿಸಿದರೆ ನಂಜನಗೂಡು ಪಟ್ಟಣದ ಶ‍್ರೀಕಂಠೇಶ್ವರ ದೇವಾಲಯದ ಬಳಿಯಿರುವ ಪರಶುರಾಮ ದೇವಾಲಯ, ಸ್ನಾನಘಟ್ಟ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ತೋಪಿನಬೀದಿಯ ಮನೆಗಳಿಗೂ ನೀರು ನುಗ್ಗುತ್ತದೆ. ಇದರಿಂದ ಆಗುವ ಸಮಸ್ಯೆಗಳು ಒಂದೆರಡಲ್ಲ. ಹೀಗಾಗಿ ಜನ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಪ್ರಾರ್ಥಿಸುವುದು ಸಾಮಾನ್ಯವಾಗಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications