ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವುದು ಬೇಡ: ಎಚ್.ವಿಶ್ವನಾಥ್
ಮೈಸೂರು, ಜನವರಿ 02: ಮೈಸೂರಿನ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರ ಚರ್ಚೆಯಲ್ಲಿರುವಾಗಲೇ ಈಗಿರುವ ನಗರದ ಪ್ರಿನ್ಸೆಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವುದು ಬೇಡ. ಈ ವಿಚಾರವನ್ನು ಇಲ್ಲಿಗೆ ಕೈಬಿಡುವಂತೆ ನಿಮ್ಮ ಪಕ್ಷದವರಿಗೆ ಹೇಳಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆ ರಸ್ತೆಗೆ ಪ್ರಿನ್ಸೆಸ್ ಎಂಬ ಹೆಸರಿದೆ. ಆ ಹೆಸರು ಹಾಗೆ ಇರಲಿ. ಅದಕ್ಕೆ ಪೂರಕವಾದ ಎಲ್ಲಾ ರೀತಿಯ ದಾಖಲೆಗಳಿವೆ. ಹೀಗಿದ್ದರು ಸಿದ್ದರಾಮಯ್ಯ ಅವರ ಬೆಂಬಲಿಗರು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರನ್ನು ಇಡುವುದಕ್ಕೆ ಹೋಗಿ, ಸಿದ್ದರಾಮಯ್ಯ ಅವರ ಹೆಸರು ಕೆಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಜನರು ಸಿದ್ದರಾಮಯ್ಯ ಅವರಿಗೆ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಎಲ್ಲವನ್ನೂ ಅನುಭವಿಸಿದ್ದಾರೆ. ಹೀಗಿರುವಾಗ ಪ್ರಿನ್ಸೆಸ್ ರಸ್ತೆಯ ಹೆಸರು ಬದಲಾವಣೆ ಮಾಡುವುದು ಬೇಡ. ಈ ವಿಚಾರವನ್ನು ಇಲ್ಲಿಗೆ ಕೈಬಿಡುವಂತೆ ಒತ್ತಾಯಿಸಿದರು.
ಪೊಲೀಸರು ಸಿ.ಟಿ.ರವಿ ಬಂಧನ ಮಾಡಿದ್ದು ಸರಿಯಲ್ಲ
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನವೂ ಕೂಡ ಕೆಟ್ಟದಾಗಿ ಮುಗಿದಿದೆ. ವಿಧಾನ ಮಂಡಲದ ಸಂಪ್ರದಾಯ ಮುರಿಯುವಂತಹ ಕೆಲಸವೇ ನಡೆದಿದೆ. ಸಬಾಪತಿ ಬಸವರಾಜ ಹೊರಟ್ಟಿ ಎ ಮುಗಿದ ಅಧ್ಯಾಯ ಎಂದರೂ, ಪೊಲೀಸರು ಮಹಜರು ಮಾಡಲು ಮುಂದಾಗಿರುವುದು ಸರಿಯಲ್ಲ. ಜೊತೆಗೆ ಪೊಲೀಸರು ಸಿ.ಟಿ.ರವಿ ಬಂಧನ ಮಾಡಿದ್ದು ಸರಿಯಲ್ಲ. ಬೆಳಗಾವಿ ಅಧಿವೇಶನ ಕೆಟ್ಟ ರೀತಿಯಲ್ಲಿ ಅಂತ್ಯವಾಯಿತು. ರಾಜ್ಯದ ಆಡಳಿತ, ಅಭಿವೃದ್ಧಿ ಬಗ್ಗೆ ಯಾರು ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಾಜ್ಯದ ಪರಿಸ್ಥಿತಿ ಅಧೋಗತಿಯತ್ತ ಸಾಗಿದೆ. ಇನ್ನು ಮುಂದಾದರೂ ಈ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅಧೋಗತಿ ಪರಿಸ್ಥಿತಿಯಲ್ಲಿದೆ. ಸರ್ಕಾರದಲ್ಲಿ ಸರಿಯಾದ ಹಿಡಿತ ಇಲ್ಲ. ಹುಚ್ಚು ಹುಚ್ಚಾಗಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆಡಳಿತದಲ್ಲಿ ಬಿಗಿ ಇಲ್ಲ. ಸರ್ಕಾರಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ರೂಪ ಅವರ ಜಗಳ, ಬೀದಿ ರಂಪಾಟಕ್ಕೆ ಕ್ರಮ ತೆಗೆದುಕೊಳ್ಳಲಾಗಲಿಲ್ಲ. ರಾಜ್ಯದ ಜನತೆಗೆ ಯಾವ ರೀತಿಯ ಆಡಳಿತ ಕೊಡುತ್ತಿದೆ. ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಸಿಎಂ ಸಿದ್ದರಾಮಯ್ಯ ಒಂದು ಶ್ವೇತ ಪತ್ರ ಹೊರಡಿಸಬೇಕು. ರಾಜ್ಯದಲ್ಲಿರುವ ಆರ್ಥಿಕ ಪರಿಸ್ಥಿತಿಯನ್ನು ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.












Click it and Unblock the Notifications