"ನನ್ನನ್ನು ನಾನು ಮಾರಿಕೊಂಡಿಲ್ಲ": ಮತದಾರರಿಗೆ ಶಾಸಕ ವಿಶ್ವನಾಥ್ ಪತ್ರ
ಮೈಸೂರು, ಜುಲೈ 30: "ನನ್ನ ರಾಜಕೀಯ ಜೀವನಕ್ಕಾಗಿ ನನ್ನನ್ನು ನಾನು ಮಾರಿಕೊಂಡಿಲ್ಲ" ಎಂದು ಶಾಸಕ ಅಡಗೂರು ಎಚ್.ವಿಶ್ವನಾಥ್ ಹೇಳಿದ್ದಾರೆ.
ತಮ್ಮ ಇತ್ತೀಚಿನ ದಿನದ ರಾಜಕೀಯ ಬದಲಾವಣೆ ಕುರಿತು ಮತದಾರರಿಗೆ ಪತ್ರ ಬರೆದಿರುವ ವಿಶ್ವನಾಥ್, "ನನ್ನ ರಾಜಕೀಯ ವಿರೋಧಿಗಳು ಪ್ರಚಾರ ಮಾಡುತ್ತಿರುವಂತೆ ನನ್ನನ್ನು ನಾನು ಮಾರಿಕೊಂಡಿಲ್ಲ. ಹುಣಸೂರು ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ನೀಡಿದ ಮತಗಳಿಗೂ ಅಪಚಾರ ಮಾಡಿಲ್ಲ" ಎಂದಿದ್ದಾರೆ.
"ಹುಣಸೂರು ವಿಧಾನಸಭಾ ಕ್ಷೇತ್ರದ ನನ್ನ ಮತದಾರ ಬಂಧುಗಳೇ, ಇತ್ತೀಚೆಗಿನ ರಾಜ್ಯ ರಾಜಕೀಯ ವಿದ್ಯಮಾನಗಳು ತಮಗೆ ತಿಳಿದೇ ಇದೆ. ಇವುಗಳಿಗೆ ಸಕಾರಣಗಳನ್ನು ನಿಮಗೆ ತಿಳಿಸಲು ನಾನು ಜವಾಬ್ದಾರನಾಗಿದ್ದೇನೆ. ನಿಮ್ಮ ಪ್ರತಿ ಮತಕ್ಕಾಗಿ ನಿಮಗೆ ಸದಾ ಋಣಿಯಾಗಿದ್ದೇನೆ, ತಲೆ ಬಾಗಿದ್ದೇನೆ. ನಿಮ್ಮ ಮತ ಬಲದಿಂದ ಶಾಸಕನಾದ ನನ್ನನ್ನು ಈ ವ್ಯವಸ್ಥೆ ಶೋಷಿಸಿತು, ಅಪಮಾನಿಸಿತು, ಕಡೆಗಣಿಸಿತು. ಅನುಭವ, ಪ್ರಾಮಾಣಿಕತೆ ಮತ್ತು ಹಿರಿತನಕ್ಕೆ ಬೆಲೆಯಿಲ್ಲದಂತಾಯಿತು" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ದ್ವೇಷಪೂರಿತ ವ್ಯವಸ್ಥೆ ನಮ್ಮನ್ನು ದಮನಿಸಲು ಯತ್ನಿಸಿದೆ. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ನನ್ನ ರಾಜಕೀಯ ಮತ್ತು ಸಾರ್ವಜನಿಕ ಬದುಕನ್ನು ಮುಗಿಸುವ ಹುನ್ನಾರ ನಡೆಸಿದೆ. ಈಗ ನಾವು ದೇಶದ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟುತ್ತಿದ್ದೇವೆ. ನಿಮ್ಮನ್ನು ಸದ್ಯದಲ್ಲೇ ಹುಣಸೂರಿನಲ್ಲಿ ಭೇಟಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ. ವಾಸ್ತವ ಸಂಗತಿಗಳನ್ನು ತಿಳಿಸಲಿದ್ದೇನೆ. ದಯವಿಟ್ಟು ನೀವು ನನ್ನನ್ನು, ನನ್ನ ಜೀವನವನ್ನು ಬಲ್ಲವರಾಗಿದ್ದರಿಂದ ವದಂತಿಗಳಿಗೆ ಕಿವಿಗೊಡಬೇಡಿ" ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications