ಕೆ.ಆರ್. ಕ್ಷೇತ್ರದಲ್ಲಿ ಶಾಸಕ ರಾಮದಾಸ್ ಬೆಂಬಲಿಗರ ಆಕ್ರೋಶ: ಅಭಿಮಾನಿ ಆತ್ಮಹತ್ಯೆಗೆ ಯತ್ನ
ಮೈಸೂರು, ಏಪ್ರಿಲ್ 13: ಬಿಜೆಪಿ ಅಭ್ಯರ್ಥಿಗಳ ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರ ಹೆಸರು ಇಲ್ಲದ್ದರಿಂದ ಅಸಮಾಧಾನಗೊಂಡ ಬೆಂಬಲಿಗರು ಬುಧವಾರ ರಾತ್ರಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಯುವಕನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ರಾಮದಾಸ್ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ರಾಮದಾಸ್ ಬೆಂಬಲಿಗರು ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ತೀವ್ರ ಬೇಸರಗೊಂಡ ಕನಕಗಿರಿಯ ನಿವಾಸಿ ಅನಿರುದ್ಧ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಮದಾಸ್ ಅವರ ಕಾರ್ಯವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೀಗಿದ್ದರೂ ಅವರ ಹೆಸರನ್ನು ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ಘೋಷಿಸದೆ ಇರುವುದು ಬೇಸರ ತರಿಸಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತರನ್ನು ಸಮಾಧಾನ ಪಡಿಸಿದ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು, "ರಾಮದಾಸ್ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ದೊರೆಯದೆ ಇರುವುದು ಬೇಸರ ತರಿಸಿದೆ. ಈ ಕುರಿತು ವರಿಷ್ಠರ ಜೊತೆಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಅವರಿಗೆ ಪಟ್ಟಿಯಲ್ಲಿ ಟಿಕೆಟ್ ದೊರೆಯುವುದು ನಿಶ್ಚಿತ. ಹಾಗಾಗಿ ಎಲ್ಲರೂ ಪ್ರತಿಭಟನೆ ಕೈಬಿಡಬೇಕು'' ಎಂದು ಮನವಿ ಮಾಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.












Click it and Unblock the Notifications