ಮೋದಿ ಎಂದರೆ ಪ್ರೀತಿ: ಟಿಕೆಟ್ ಕೈ ತಪ್ಪಿದರೂ ಬಿಜೆಪಿ ಅಭ್ಯರ್ಥಿ ಪರ ನಿಂತ ರಾಮದಾಸ್
ಮೈಸೂರು, ಏಪ್ರಿಲ್ 18: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ತಪ್ಪಿದರೂ ಬಿಜೆಪಿಯಲ್ಲೇ ಇರುತ್ತೇನೆ. ಶ್ರೀವತ್ಸ ಅವರ ಪರ ಪ್ರಚಾರ ನಡೆಸುತ್ತೇನೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮದಾಸ್, ವಿಧಾನಸಭೆ ಚುನಾವಣಾ ಕಣಕ್ಕಿಳಿಯದಿರಲು ತೀರ್ಮಾನಿಸಿದ್ದಾರೆ. ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರ ಪ್ರಚಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀವತ್ಸ ನಾಮಪತ್ರ ಸಲ್ಲಿಸುವ ವೇಳೆಯೂ ಹಾಜರಿರುತ್ತೇನೆ. ಇನ್ನು ಮುಂದೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದಿದ್ದಾರೆ.

ಮಾತು ಮುಂದುವರಿಸಿದ ಅವರು ನನಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಪ್ರೀತಿ. ಜೀವ ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ನನಗೆ ಶಾಸಕ ಸ್ಥಾನ ಮುಖ್ಯ ಅಲ್ಲ. ನನ್ನ ದೇಶ ಮುನ್ನಡೆಸುತ್ತಿರುವ ವಿಶ್ವ ನಾಯಕ ಮೋದಿ ಅವರಿಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.
ಮುಂದಿನ 5 ವರ್ಷ ದೊಡ್ಡ ವಿಷನ್ ಇಟ್ಟುಕೊಂಡಿದ್ದೆ. ಅದನ್ನು ಈಡೇರಿಸಲು ಆಗುತ್ತಿಲ್ಲ ಅನ್ನೋ ಬೇಸರ ಇದೆ. ನನಗೆ ಟಿಕೆಟ್ ಯಾರು ತಪ್ಪಿಸಿದರು ಎನ್ನುವುದರ ಬಗ್ಗೆ ಪೋಸ್ಟ್ ಮಾರ್ಟಂ ಮಾಡಲ್ಲ. ಜನರ ಜೊತೆ ಇರುತ್ತೇನೆ. ಪಕ್ಷದ ಸೂಚನೆ ಪಾಲಿಸುತ್ತೇನೆ. ಶಾಸಕ ಆಗುವುದಕ್ಕಿಂತ ಪ್ರಧಾನಿ ಮೋದಿ ಪ್ರೀತಿ ಮುಖ್ಯ. ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ರಾಷ್ಟ್ರದ ವಿಚಾರಕ್ಕಾಗಿ ಉತ್ತಮ ತೀರ್ಮಾನ ಮಾಡ್ತಿದ್ದೇನೆ. ಪಕ್ಷದ ಜೊತೆ ಇರುತ್ತೇನೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ರಾಮದಾಸ್ ತಿಳಿಸಿದರು.
ನಾನು ಆರ್.ಎಸ್.ಎಸ್ ಕಟ್ಟಾಳು ಆದ್ದರಿಂದ ಪಕ್ಷ ಹೇಳಿದಂತೆ ಮಾಡುತ್ತೇನೆ. ನನ್ನ ಜೀವನದಲ್ಲಿ ಪಕ್ಷ ಒಳ್ಳೇದನ್ನು ಕೊಟ್ಟಿದೆ, ದುಃಖವನ್ನು ಕೊಟ್ಟಿದೆ, ನನ್ನ ವೈಯಕ್ತಿಕ ನಿಲುವಿಗಿಂತ ಪಕ್ಷ ಮುಖ್ಯ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು. ಈ ಮೂಲಕ ಮೂರು ದಶಕಗಳ ಬಳಿಕ ಕೃಷ್ಣರಾಜ ಕ್ಷೇತ್ರದ ಚುನಾವಣಾ ಸ್ಪರ್ಧಾ ಕಣದಿಂದ ದೂರ ಉಳಿಯಲಿರುವ ರಾಮದಾಸ್ ನಿರ್ಧಾರಿಸಿದ್ದಾರೆ.

ಶಾಸಕ ರಾಮದಾಸ್‌ಗೆ ಕೈ ತಪ್ಪಿದ ಬಿಜೆಪಿ ಟಿಕೆಟ್
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿತ್ತು. ಮೂರನೇ ಪಟ್ಟಿಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್ ಕ್ಷೇತ್ರದ ಅಭ್ಯರ್ಥಿ ಅಂತಿಮವಾಗಿದ್ದು, ಆರ್‌ಎಸ್‌ಎಸ್ ಮುಖಂಡ ಬಿ.ಎಲ್. ಸಂತೋಷ್ ಆಪ್ತ ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ್ ಅವರಿಗೆ ಬಿಜೆಪಿ ಮಣೆ ಹಾಕಿದೆ. ಇದರಿಂದ ಶಾಸಕ ರಾಮದಾಸ್ ಈ ಬಾರಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದರು.
ಟಿಕೆಟ್ ಕೈ ತಪ್ಪಿರುವ ವಿಚಾರ ಹೊರ ಬೀಳುತ್ತಿದ್ದಂತೆ ರಾಮದಾಸ್ ತೀವ್ರ ಬೇಸರಗೊಂಡಿದ್ದರು. ಯಾವೊಬ್ಬ ಬಿಜೆಪಿ ಮುಖಂಡರನ್ನು ಭೇಟಿಯಾಗದೇ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದರು. ಆದರೆ ಕೊನೆಗೂ ಅವರು ತಮ್ಮ ನಿರ್ಧಾರ ತಿಳಿಸಿದ್ದು, ಕೆ.ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಅವರ ಪರ ಪ್ರಚಾರ ನಡೆಸುತ್ತೇನೆ ಎಂದಿದ್ದಾರೆ.












Click it and Unblock the Notifications