ಮೈಸೂರಿನ ಮಿನ್ನಿಗೆ ಅನಾರೋಗ್ಯ: ಇಷ್ಟಕ್ಕೂ ಯಾರು ಈ ಮಿನ್ನಿ?
ಮೈಸೂರು, ಮಾರ್ಚ್ 31: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ವಿಭಿನ್ನ ಮತ್ತು ವಿಶಿಷ್ಟ ನಡೆಯೊಂದಿಗೆ ಅಪರೂಪದಲ್ಲಿ ಅಪರೂಪವಾಗಿ ವೀಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದ ಮಿನ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯ ಆರೋಗ್ಯಕ್ಕಾಗಿ ನಾವೀಗ ಪ್ರಾರ್ಥನೆ ಮಾಡಬೇಕಾಗಿದೆ. ವೈದ್ಯರು ಆಕೆಯ ಆರೋಗ್ಯದತ್ತ ನಿಗಾವಹಿಸಿ ಚಿಕಿತ್ಸೆಗಳನ್ನು ನೀಡುತ್ತಿದ್ದು ಚೇತರಿಕೆಯ ಸುಳಿವು ನೀಡಿದ್ದಾರೆ ಆದರೂ ಆದಷ್ಟು ಬೇಗ ಚೇತರಿಸಿಕೊಂಡು ಮೊದಲಿನಂತಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.
ಇಷ್ಟಕ್ಕೂ ಯಾರು ಈ ಮಿನ್ನಿ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡದಿರದು. ಆದರೆ ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿ ಒಂದು ಸುತ್ತು ಹೊಡೆದು ಬಂದವರಿಗೆ ಮಿನ್ನಿಯ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಇದೇ ಮಿನ್ನಿ ಈಗ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು ಆಕೆಯ ಆರೈಕೆಯನ್ನು ಮೃಗಾಲಯದ ಸಿಬ್ಬಂದಿ ಹಗಲು ರಾತ್ರಿಯೆನ್ನದೆ ಮಾಡುತ್ತಿದ್ದಾರೆ. ಅಲ್ಲದೆ ಆಕೆಯ ಚಿಕಿತ್ಸೆಗಾಗಿ ಯುಕೆ ಮತ್ತು ಮಲೇಷಿಯಾ ವೈದ್ಯರನ್ನು ಸಂಪರ್ಕಿಸಿ ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ದೊಡ್ಡವಾನರ ಜಾತಿಗೆ ಸೇರಿದ ಹೆಣ್ಣು ಒರಾಂಗೂಟಾನೇ ಮಿನ್ನಿ. ಈಕೆಗೆ ಈಗ ಸುಮಾರು ಹತ್ತು ವರ್ಷ ಎಂಟು ತಿಂಗಳ ಪ್ರಾಯ. ಈಕೆಯ ಬಗ್ಗೆ ಹೇಳಬೇಕೆಂದರೆ, ಒರಾಂಗೂಟಾನ್ ಬೋರ್ನಿಯನ್ ಪ್ರಭೇದದ ಒರಾಂಗೂಟಾನ್ ಆಗಿದ್ದು, ವೃಕ್ಷವಾಸಿ ಪ್ರಾಣಿಯಾಗಿದ್ದಾಳೆ. ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ 2021ನೇ ಸಾಲಿನಲ್ಲಿ ಮಲೇಷಿಯಾದ ಸಫಾರಿ ವಂಡರ್‌ಲ್ಯಾಂಡ್ ಮೃಗಾಲಯದಿಂದ ಆಮದುಮಾಡಿಕೊಳ್ಳಲಾಗಿದೆ.
ನಾಲ್ಕು ವರ್ಷಗಳಿಂದ ಮೃಗಾಲಯದ ಆಕರ್ಷಣೆ
ಈಕೆ ಕಳೆದ ನಾಲ್ಕು ವರ್ಷಗಳಿಂದ ಮೈಸೂರು ಮೃಗಾಲಯದ ಪ್ರವಾಸಿಗರನ್ನು ಆಕರ್ಷಿಸುತ್ತಾ ಬಂದಿದ್ದಾರೆ. ಮೃಗಾಲಯಕ್ಕೆ ಭೇಟಿ ನೀಡಿದವರು ಮಿನ್ನಿಯ ತುಂಟಾಟ ನೋಡಿ ಖುಷಿ ಪಡುತ್ತಿದ್ದರು. ಮೃಗಾಲಯದ ಆಕರ್ಷಣೆಯಲ್ಲಿ ಒಬ್ಬಳಾಗಿದ್ದ ಮಿನ್ನಿಯ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಖುಷಿ ಖುಷಿಯಾಗಿದ್ದ ಆಕೆಗೆ ಉಸಿರಾಟದ ತೊಂದರೆಗಳು ಕಾಣಲಾರಂಭಿಸಿತು. ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರಿಗೆ ಆಕೆ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವುದು ಗೊತ್ತಾಯಿತು. ಪರಿಣಾಮ ಉಸಿರಾಟದ ತೊಂದರೆಯಿಂದಾಗಿ ಆಕೆಗೆ ನ್ಯುಮೋನಿಯಾ ಬಾಧಿಸಿದ್ದು ಆರೋಗ್ಯದಲ್ಲಿ ಏರುಪೇರಾಗಿತ್ತು.

ಮೂಲ ಶ್ವಾಸಕೋಶದ ರೋಗ ಬಾಧಿಸಿರುವ ಕಾರಣ ಆಗಾಗ್ಗೆ ಆಕೆಗೆ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಮೃಗಾಲಯದ ಪಶು ವೈದ್ಯರು ಚಿಕಿತ್ಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಶ್ವಾಸಕೋಶದ ತೊಂದರೆಯು ಪ್ರಾಣಿಗಳ ಆರೋಗ್ಯಕ್ಕೆ ಗಂಭೀರವಾದ ಅಪಾಯ ತಂದೊಡ್ಡುವ ಸಾಧ್ಯತೆಯಿರುವುದರಿಂದ ಆಕೆಯ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಲಾಗುತ್ತಿದೆ. ಪಶುವೈದ್ಯಕೀಯ ಅಧ್ಯಯನನುಸಾರ ಒರಾಂಗೂಟಾನ್‌ನ ವಿಶಿಷ್ಟ ಉಸಿರಾಟ ಅಂಗರಚನೆ, ಪರಿಸರ ಒತ್ತಡಗಳು, ಬ್ಯಾಕ್ಟೀರಿಯಾ, ಶೀಲಿಂಧ್ರ ಮತ್ತು ವೈರಲ್ ಸೋಂಕಿನಿಂದಾಗಿ ಇಂತಹ ಪರಿಸ್ಥಿತಿಗೆ ಮಿನ್ನಿ ಗುರಿಯಾಗಿದ್ದಾಳೆ ಎನ್ನಲಾಗಿದೆ.
ಮೂರು ಬಾರಿ ನ್ಯುಮೋನಿಯಾಗೆ ತುತ್ತಾದ ಮಿನ್ನಿ
ಮೈಸೂರು ಮೃಗಾಲಯಕ್ಕೆ ಮಿನ್ನಿ ಆಗಮಿಸಿದ ನಂತರ ಸುಮಾರು ಮೂರು ಬಾರಿ ನ್ಯುಮೋನಿಯಾ ಆಕ್ರಮಣಕ್ಕೆ ಒಳಗಾಗಿದ್ದು, ಪ್ರತಿ ಬಾರಿಯೂ ತೀವ್ರವಾದ ವೈದ್ಯಕೀಯ ಚಕಿತ್ಸೆಯನ್ನು ನೀಡಿ ಮಿನ್ನಿ ಚೇತರಿಕೆ ಕಾಣುವಂತೆ ಮಾಡಲಾಗಿದೆ. ಈ ವಿಚಾರದಲ್ಲಿ ಮೃಗಾಲಯದ ವೈದ್ಯಕೀಯ ತಂಡವು ಸೂಕ್ತ ಚಿಕಿತ್ಸೆಯನ್ನು ನೀಡಿ ಮಿನ್ನಿಯನ್ನು ರಕ್ಷಿಸುವ ಕೆಲಸವನ್ನು ಮಾಡಿರುವುದು ಶ್ಲಾಘನೀಯ.

ಈಗಾಗಲೇ ಒರಾಂಗೂಟಾನ್ ನ ಆರೋಗ್ಯ ರಕ್ಷಣೆಯಲ್ಲಿ ಪರಿಣಿತಿ ಹೊಂದಿರುವ ಯು.ಕೆ ಮತ್ತು ಮಲೇಷಿಯಾ ದೇಶದ ತಜ್ಞರನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆಯುವ ಕೆಲಸ ಮಾಡಲಾಗಿದೆ. ಯು.ಕೆ. ಮತ್ತು ಮಲೇಷಿಯಾ ತಜ್ಞ ವೈದ್ಯರು ಹೇಳುವ ಪ್ರಕಾರ ಮಿನ್ನಿಯ ಆರೋಗ್ಯದ ವಿಚಾರದಲ್ಲಿ ಗಂಭೀರ ಸವಾಲ್ ಗಳಿದ್ದು ಅದರಂತೆ ಜಾಗತಿಕವಾಗಿ ಶಿಫಾರಸ್ಸು ಮಾಡಲಾಗಿರುವ ಚಿಕಿತ್ಸಾ ವಿಧಾನವನ್ನು ಬಳಸಿ ಮಿನ್ನಿಗೆ ಚಿಕಿತ್ಸೆ ನೀಡುವ ಕಾರ್ಯವನ್ನು ಇದೀಗ ಮೃಗಾಲಯದ ವೈದ್ಯರ ತಂಡ ಮಾಡುತ್ತಿದ್ದಾರೆ.
ಇನ್ನು ಸಿಬ್ಬಂದಿ ವರ್ಗವು ಜತನದಿಂದ ಆರೈಕೆ ಮಾಡುತ್ತಿದೆ. ಇದೆಲ್ಲದರ ನಡುವೆ ತಜ್ಞರು ಆರೋಗ್ಯ ಸುಧಾರಣೆಗೆ ಇನ್ನು ಹೆಚ್ಚಿನ ಮುನ್ನೆಚ್ಚರಿಕಾ ಕ್ರಮ ವಹಿಸಲು ಸೂಚಿಸಿದ್ದಾರೆ. ಇನ್ನು ಮಿನ್ನಿಯ ಆರೋಗ್ಯ ಸುಧಾರಿಸುವಂತೆ ಮಾಡಲು ಹಗಲಿರುಳು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಪಶು ವೈದ್ಯಕೀಯ ಸಲಹೆಗಾರರು, ಮೈಸೂರು ಮೃಗಾಲಯದ ಆಡಳಿತ ವರ್ಗ, ಪಶುವೈದ್ಯರು ಮತ್ತು ಸಮರ್ಪಣಾ ಮನೋಭಾವದ ಪ್ರಾಣಿ ಆರೈಕಾ ತಂಡವು ಶ್ರಮಿಸುತ್ತಿವೆ. ಮಿನ್ನಿಗೆ ಸಾಧ್ಯವಾದಷು ಉತ್ತಮ ವೈದ್ಯಕೀಯ ಆರೈಕೆ ದೊರೆಯುವಂತೆ ನೋಡಿಕೊಳ್ಳುತ್ತಿದ್ದು, ಅದರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ.
ವಿನಾಶದ ಅಂಚಿನಲ್ಲಿರುವ ದೊಡ್ಡವಾನರ ಪ್ರಾಣಿ
ಮಿನ್ನಿಯ ಆರೋಗ್ಯದ ವಿಚಾರದಲ್ಲಿ ಮೃಗಾಲಯವು ನಿರಂತರ ಮೇಲ್ವಿಚಾರಣೆ, ಸೂಕ್ತವಾದ ಔಷಧಿ ಮತ್ತು ಚಿಕಿತ್ಸೆ, ಪರಿಸರ ಮಾರ್ಪಾಡುಗಳು ಸೇರಿದಂತೆ ಸುಧಾರಿತ ಚಿಕಿತ್ಸಾ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದು, ಆರೋಗ್ಯ ಸುಧಾರಿಸುವಂತೆ ಮಾಡಲು ಏನೆಲ್ಲ ಚಿಕಿತ್ಸೆ ನೀಡಬಹುದೋ ಅದನ್ನು ನೀಡುವುದರೊಂದಿಗೆ ಅದರಾಚೆಗೆ ಆಕೆಯನ್ನು ಜತನದಿಂದ ಆರೈಕೆ ಮಾಡುವ ಕಾರ್ಯದಲ್ಲಿ ಮೃಗಾಲಯದ ಸಿಬ್ಬಂದಿ ನಿರತರಾಗಿದ್ದಾರೆ. ಅಷ್ಟೇ ಅಲ್ಲದೆ ಅದು ಬಹುಬೇಗ ಚೇತರಿಸಿಕೊಳ್ಳುತ್ತದೆ ಎಂಬ ವಿಶ್ವಾಸದಿಂದ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಿನ್ನಿ ಇನ್ನೊಂದಷ್ಟು ವರ್ಷಗಳ ಕಾಲ ನಮ್ಮ ನಡುವೆ ಇರಬೇಕಾಗಿದೆ. ಏಕೆಂದರೆ ಈಕೆ ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ದೊಡ್ಡವಾನರ ಜಾತಿಗೆ ಸೇರಿದ ಬೋರ್ನಿಯನ್ ಒರಾಂಗೂಟಾನ್ ಪ್ರಾಣಿಯಾಗಿದ್ದಾಳೆ. ಹೀಗಾಗಿ ಅವಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಜ್ಞ ವೈದ್ಯರು ತಮ್ಮ ಶಕ್ತಿ ಮೀರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ನಮ್ಮ ನಿಮ್ಮೆಲ್ಲರ ಪ್ರಾರ್ಥನೆಯ ಅಗತ್ಯವಿದ್ದು, ಅದು ತಲುಪಿದ್ದೇ ಆದರೆ ಮಿನ್ನಿ ಚೇತರಿಸಿಕೊಂಡು ಎಂದಿನಂತೆ ಪ್ರಾಣಿಪ್ರಿಯರಿಗೆ ಖುಷಿಕೊಡುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications