"ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದರೆ, ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ''
ಮೈಸೂರು, ನವೆಂಬರ್ 4: ಮಂತ್ರಿಮಂಡಲ ವಿಸ್ತರಣೆ ಕುರಿತು ಮಾತನಾಡಿದರೆ, ನನ್ನ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮಂತ್ರಿಮಂಡಲ ವಿಸ್ತರಣೆ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಮಾಧ್ಯಮದ ಮಾತು ಕೇಳಿ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರೆ ನನ್ನ ಮಂತ್ರಿ ಸ್ಥಾನವು ಹೋಗುತ್ತೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವುದಕ್ಕೆ ನನಗೆ ಅಧಿಕಾರ ಇಲ್ಲ, ಮಾಧ್ಯಮದವರು ನನಗೆ ಅಧಿಕಾರ ಕೊಡಿಸಿದರೆ ನಾನು ಮಾತನಾಡಬಹುದು. ನನಗೆ ಎಷ್ಟು ಅಧಿಕಾರ ಇದೆ ಅಷ್ಟಕ್ಕೆ ಮಾತ್ರ ಉತ್ತರಿಸುತ್ತೇನೆ ಎಂದು ಸೋಮಶೇಖರ್ ಹೇಳಿದರು.

ಪದೇ ಪದೇ ಮಂತ್ರಿಮಂಡಲದ ಪ್ರಶ್ನೆ ಕೇಳಿಬೇಡಿ. ಅದಕ್ಕೆ ನಾನು ಉತ್ತರ ಕೊಟ್ಟರೆ ಇರುವ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರು ಗೆಲ್ಲುತ್ತಾರೆ. ಅಲ್ಲಿ ಶೇಕಡವಾರು ಕಡಿಮೆ ಆಗಿದೆ ಎಂದರೆ, ಮುಂಚೆ ಒಂದು ಜಮಾನ್ ಇತ್ತು. ಕಡಿಮೆ ಇದ್ದರೆ ಇನ್ನೊಂದು ಪಕ್ಷದ ಅಭ್ಯರ್ಥಿ ಗೆಲ್ತಾರೆ ಅಂದು.
ಆದರೆ ಕೊರೊನಾ ನಡುವೆಯೂ ಆರ್.ಆರ್ ನಗರದಲ್ಲಿ ಉತ್ತಮ ಮತ ಚಲಾವಣೆ ಆಗಿದೆ. ವಿದ್ಯಾವಂತರು ಬಂದು ಮತ ಹಾಕಿದ್ದಾರೆ. ಹಾಗಾಗಿ ನಮ್ಮ ಅಭ್ಯರ್ಥಿ ಆರ್. ಆರ್ ನಗರ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎಂದರು.
ಇನ್ನು ಶಿರಾ ಉಪ ಚುನಾವಣೆಯ ಮತದಾನ ವಿಚಾರವಾಗಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಒಪ್ಪಿಕೊಂಡಿದ್ದಾರೆ. ಇವಿಎಂ ಮೇಲೆ ಅವರು ಆರೋಪ ಮಾಡಿದ್ದಾರೆ. ಅವರ ಸೋಲು ಮತ್ತು ಹತಾಶೆಯ ಸಂಕೇತವೆಂದರು.
ಫಲಿತಾಂಶ ಬಂದ ಮೇಲೆ ಕಾರಣ ಕೊಡುವುದಕ್ಕಿಂತ, ಜಯಚಂದ್ರ ಅವರು ಮುಂಚೆಯೇ ಕಾರಣ ಹುಡುಕಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾಜಿ ಸಚಿವ ಟಿ.ಬಿ ಜಯಚಂದ್ರ ಮಾತಿನ ಬಗ್ಗೆ ಎಸ್.ಟಿ ಸೋಮಶೇಖರ್ ವ್ಯಂಗ್ಯವಾಡಿದರು.
ಮೈಸೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ಅವ್ಯವಸ್ಥೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್, ಈ ಕೂಡಲೇ ನಾನು ಹಾಸ್ಟೆಲ್ ಪರಿಶೀಲನೆ ಮಾಡುತ್ತೇನೆ. ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ ಎಂದರು
ತಲಕಾಡು ಪಂಚಲಿಂಗ ದರ್ಶನ ಆಚರಣೆ ವಿಚಾರವಾಗಿ ಮಾತನಾಡಿ, ಪಂಚಲಿಂಗ ದರ್ಶನವನ್ನು ಸರಳವಾಗಿ ಆಚರಿಸುವ ಚಿಂತನೆಯಲ್ಲಿದ್ದೇವೆ ಎಂದು ಮಾಹಿತಿ ನೀಡಿದರು. ದಸರಾ ರೀತಿಯಲ್ಲಿ ಸರಳವಾಗಿ ಆಚರಿಸಬೇಕು ಎಂದು ಚಿಂತಿಸಿದ್ದೇವೆ. ಪಂಚಲಿಂಗದರ್ಶನವು ಹಲವು ವರ್ಷಗಳಿಗೊಮ್ಮೆ ಬರುತ್ತೆ. ಹಾಗಾಗಿ ಯಾವ ರೀತಿ ಆಚರಣೆ ಮಾಡಬೇಕು ಅಂತ ಚರ್ಚೆ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.












Click it and Unblock the Notifications