Mysuru: ಮೈಸೂರು ಮೆಟ್ರೋ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಹೆಚ್.ಸಿ. ಮಹದೇವಪ್ಪ
ಬೆಂಗಳೂರು ಬಳಿಕ ಮೈಸೂರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ ನಗರಗಳು ವೇಗವಾಗಿ ಬೆಳವಣಿಗೆ ಹೊಂದುತ್ತಿವೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನಗರದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಮತ್ತು ಉತ್ತಮ ಸಾರಿಗೆಯಲ್ಲಿ ಸಹಾಯ ಮಾಡಿದೆ. ಇದೇ ರೀತಿ ಬೇರೆ ನಗರಗಳಿಗೂ ಮೆಟ್ರೋ ಯೋಜನೆ ಬೇಕು ಎನ್ನುವ ಒತ್ತಾಯ ಇದೆ. ಮೈಸೂರು ನಗರಕ್ಕೂ ಮೆಟ್ರೋ ಯೋಜನೆ ಬೇಕು ಎನ್ನುವ ಕೂಗು ಶುರುವಾಗಿದ್ದು ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮೈಸೂರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.
ಮೈಸೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ 35 ಕೋಟಿ ಇದ್ದ ಭಾರತದ ಜನಸಂಖ್ಯೆ ಇಂದು 140 ಕೋಟಿ ಮೀರಿದೆ. ಮೈಸೂರು ಜನಸಂಖ್ಯೆ 3 ಪಟ್ಟು ಹೆಚ್ಚಳ ಆಗಿದೆ. ಮೈಸೂರು ನಗರ ವೇಗವಾಗಿ ಬೆಳೆಯುತ್ತಿರುವ ನಗರ. ಅದೇ ರೀತಿ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾಗಿದ್ದು, ಸಲಹೆ ಸೂಚನೆಗಳನ್ನು ಸ್ವೀಕಾರ ಮಾಡಲು ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಮೂಲ್ಯ ಸಲಹೆಗಳನ್ನು ಪರಿಗಣಿಸಿ ಮೈಸೂರು ನಗರದ ಅಭಿವೃದ್ಧಿಗೆ ವಿಸ್ತೃತ ಯೋಜನೆ ರೂಪಿಸಲಾಗುವುದು. ಮೈಸೂರು ಅಭಿವೃದ್ಧಿಯ ಅನುಗುಣವಾಗಿ ಭೌಗೋಳಿಕ ವಿಸ್ತೀರ್ಣ ಅಷ್ಟೇ ಇದೆ. ಜನ ಸಂಖ್ಯೆ ಹೆಚ್ಚಳ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸವಲತ್ತು ನೀಡಲು ಮೈಸೂರನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಪಡೆಸಲು ಯೋಜನೆ ರೂಪಿಸಬೇಕಿದೆ ಎಂದರು.
ಮೈಸೂರು ಜಿಲ್ಲೆಗೆ ಹೆಚ್ಚಿನ ಅನುದಾನ
ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆ ನಿರ್ಮಾಣ, ಕಾವೇರಿ ಕಬಿನಿ ಕುಡಿಯುವ ನೀರಿನ ಪೂರೈಕೆ, ದೊಡ್ಡಕೆರೆ ರಸ್ತೆ ಅಭಿವೃದ್ದಿ, ಜಂಬೂಸವಾರಿ ಮಾರ್ಗದ ರಸ್ತೆ ಕಾಂಕ್ರಿಟ್ ಮಾಡಿರುವುದು ಹೀಗೆ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮೈಸೂರು ಆರ್ಥಿಕವಾಗಿ ಶೈಕ್ಷಣಿಕವಾಗಿ ಸೌಲಭ್ಯಗಳಲ್ಲಿ ಬೆಳವಣಿಗೆ ಆಗಬೇಕು. ಮೈಸೂರು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ.ಈ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು, ಮೈಸೂರಿಗೆ ಮೆಟ್ರೋ ಯೋಜನೆ ಬೇಕು ಎನ್ನುವ ಕೂಗು ಮೊದಲಿನಿಂದಲೂ ಇದ್ದು, ಈ ಬಗ್ಗೆ ಚರ್ಚೆ ಮಾಡಿ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.
ಮೈಸೂರು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣರಾಜ ದತ್ತ ಒಡೆಯರ್ ಮಾತನಾಡಿ, ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವುದು ತುಂಬಾ ಅವಶ್ಯಕ. ಇದರಿಂದ ಕೇಂದ್ರ ಸರಕಾರದ ಹಲವು ಯೋಜನೆಗಳು ಹಾಗೂ ಅನುದಾನ ಬರುತ್ತದೆ. ಇದಕ್ಕೂ ಮುಂಚೆ ಮೈಸೂರು ನಗರದಲ್ಲಿ ಇರುವ ಹಲವು ಸಮಸ್ಯೆಗಳಿಗೆ ಮೊದಲು ಪರಿಹಾರ ನೀಡಿ ನಂತರ ಬೃಹತ್ ಮೈಸೂರು ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಜನ ಕೊಟ್ಟ ಸಲಹೆ ಏನು?
ಮಾರುಕಟ್ಟೆ ಅಭಿವೃದ್ಧಿ, ಪಾರಂಪರಿಕ ಕಟ್ಟಡಗಳ ಅಭಿವೃದ್ಧಿ, ನೀರಿನ ವ್ಯವಸ್ಥೆ, ಯುಜಿಡಿ ಲೈನ್ ಸಮರ್ಪಕವಾಗಿ ಇರಬೇಕು. ಸಿಟಿ ಬಸ್ ಸ್ಟಾಂಡ್ ಹಾಗೂ ಸಬ್ ಅರ್ಬನ್ ಬಸ್ ಸ್ಟಾಂಡ್ ಜನರಿಗೆ ದೂರ ಇದೆ. ವಯಸ್ಸಾದವರು ಅಲ್ಲಿಗೆ ನಡೆದು ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.
ಮೈಸೂರು ನಗರದ ರಿಂಗ್ ರೋಡ್ ಆಚೆ ಹೆಚ್ಚು ಕಾಳಜಿ ಇಲ್ಲ. ಖಾಸಗಿ ನಿವೇಶನಗಳ ಲೇಔಟ್, ಮೈಸೂರು ನಗರದ ನಾಲ್ಕು ದಿಕ್ಕುಗಳಲ್ಲಿ ಬಸ್ ಸ್ಟಾಂಡ್ ಮಾಡಿ, ಇದರಿಂದ ಜನರು ಮೈಸೂರು ಮಧ್ಯೆ ಬರುವ ಒತ್ತಡ ಕಡಿಮೆ ಆಗುತ್ತದೆ. ವಾರ್ಡ್‌ಗಳಲ್ಲಿ ಕ್ಲಿನಿಕ್ ಮಾಡಬೇಕು. ಶೈಕ್ಷಣಿಕವಾಗಿ ಪ್ರತಿ ವಾರ್ಡ್‌ನಲ್ಲಿ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆ ಮೂಲಕ ಮಾಡಬೇಕು. ಪಾದಚಾರಿ ಮಾರ್ಗ ಒತ್ತುವರಿ ಆಗಿದ್ದು ಅದನ್ನು ತೆರವುಗೊಳಿಸಿ ಎಂದರು.












Click it and Unblock the Notifications