ಕಾಂಗ್ರೆಸ್ ಕೈ ಕೊಟ್ಟರೂ, ಬಿಜೆಪಿ ಸಿದ್ದರಾಮಯ್ಯರವರ ಕೈ ಹಿಡಿಯಲಿದೆ: ಸಿ.ಟಿ. ರವಿ
ಮೈಸೂರು, ಸೆಪ್ಟೆಂಬರ್ 10: "ಮಾಜಿ ಸಿಎಂ ಸಿದ್ಧರಾಮಯ್ಯರವರನ್ನು ಕಾಂಗ್ರೆಸ್ ಕೈ ಬಿಟ್ಟರೂ ನಾವು ಮಾತ್ರ ಕೈ ಬಿಡಲ್ಲ. ಸಿದ್ದರಾಮಯ್ಯರನ್ನು ಸೇರಿಸಿಕೊಂಡೇ ಈ ಬಾರಿ ದಸರಾ ಆಚರಣೆ ಮಾಡುತ್ತೇವೆ" ಎಂದು ತಿಳಿಸಿದ್ದಾರೆ ಸಚಿವ ಸಿ.ಟಿ ರವಿ.
ಪತಿ ಪರ ವಕಾಲತ್ತು ವಹಿಸಿದ ಸಿ.ಟಿ.ರವಿ ಪತ್ನಿ ಪಲ್ಲವಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಿಟ್ಟರೂ ನಾವು ಬಿಡಲ್ಲ. ಅವರು ನನ್ನ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯನವರನ್ನು ಆಹ್ವಾನಿಸಿಯೇ ದಸರಾ ಮಾಡುತ್ತೇವೆ" ಎಂದರು.
ಇದೇ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ, "ಭ್ರಷ್ಟಾಚಾರ ನಡೆಸದಿದ್ದರೆ ಭಯ ಯಾಕೆ ಬೀಳಬೇಕು? ಯಾರು ಭ್ರಷ್ಟಾಚಾರ ಮಾಡಿರುತ್ತಾರೋ ಅವರಿಗೆ ಭಯ ಇರುತ್ತದೆ. ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡೋದೆ ತಪ್ಪೆಂದು ಬಿಂಬಿಸುತ್ತಿದ್ದಾರೆ. ಸಮುದಾಯದ ವಿರುದ್ಧ ಎಂದು ಹೇಳುತ್ತಿದ್ದಾರೆ. ಅದರೆ ನಾನು ಕೂಡ ಒಕ್ಕಲಿಗ ಸಮುದಾಯದವನು. ನನ್ನ ಸಮುದಾಯದ ನಾಯಕರಿಗೆ ಹೇಳುತ್ತೇನೆ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಭಾವನಾತ್ಮಕವಾಗಿ ಯೋಚನೆ ಮಾಡಬೇಡಿ. ವಾಸ್ತವಿಕವಾಗಿ ಯೋಚನೆ ಮಾಡಿ. ಬಂಧನ ಸಮುದಾಯದ ವಿರುದ್ಧ ಅಂತ ಯಾಕೆ ಹೇಳಬೇಕು? ನನ್ನ ಮನೆಯಲ್ಲಿ 10 ಕೋಟಿ ದುಡ್ಡು ಸಿಕ್ಕರೆ ನಾನು ಪ್ರಾಮಾಣಿಕ ಎಂದು ಹೇಳಿಕೊಳ್ಳೋಕೆ ಆಗುತ್ತಾ? ನನ್ನ ಆಸ್ತಿ 18 ಎಕರೆ ಇದೆ. ಅದು 180 ಎಕರೆ ಆದರೆ ಅದಕ್ಕೆ ಉತ್ತರ ಕೊಡಬೇಕು. ಅದು 1880 ಎಕರೆ ಆದರೂ ಜನರಿಗೆ ಉತ್ತರ ಕೊಡಬಾರದೇ" ಎಂದು ಪ್ರಶ್ನಿಸಿದರು.
"ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾಗುವ ಯೋಜನೆಗೆ ವಿರೋಧ ಮಾಡಲ್ಲ. ಡಿಸ್ನಿಲ್ಯಾಂಡ್ ಯೋಜನೆ ನೀಲಿ ನಕ್ಷೆಯಲ್ಲೇ ಇದೆ. ಇದು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಯೋಜನೆಯಲ್ಲ" ಎಂದರು.