ಹೆಚ್.ಡಿ.ಕೋಟೆಯ 4 ಜಲಾಶಯಗಳಲ್ಲಿ ಜಲವೈಭವ: ರೈತರ ಮುಖದಲ್ಲಿ ಮಂದಹಾಸ!
ಮೈಸೂರು, ಆಗಸ್ಟ್ 21: ಮೈಸೂರು ಜಿಲ್ಲೆಯಲ್ಲಿಯೇ ಅತಿಹೆಚ್ಚು ಪ್ರಕೃತಿ ಚೆಲುವಿನೊಂದಿಗೆ ಸಮೃದ್ಧ ಅರಣ್ಯವನ್ನು ಹೊಂದಿರುವ ತಾಲೂಕಾಗಿ ಗಮನಸೆಳೆಯುತ್ತಿದೆ. ನಾಗರಹೊಳೆ ಅಭಯಾರಣ್ಯ ಸೇರಿದಂತೆ ನಾಲ್ಕು ಜಲಾಶಯಗಳಿರುವುದು ಇಲ್ಲಿಯ ಹೆಮ್ಮೆಯಾಗಿದೆ. ಹೀಗಾಗಿಯೇ ಪ್ರವಾಸಿಗರಿಗೆ ಭವ್ಯ ತಾಣವಾಗಿ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಕಾಲಕಳೆಯಲು ಹಿಂದಿನ ಕಾಲದಲ್ಲಿ ರಾಜಮಹಾರಾಜರೇ ಇಲ್ಲಿಗೆ ಬರುತ್ತಿದ್ದರು ಎನ್ನುವುದೇ ಇಲ್ಲಿನ ಹೆಮ್ಮೆಯಾಗಿದೆ. ಬುಡಕಟ್ಟು ಜನಾಂಗದವರಿಗೂ ನೆಲೆಯಾಗಿದೆ.
ಇವತ್ತು ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ನಾಲ್ಕು ಪುಟ್ಟ ಜಲಾಶಯಗಳಿರುವುದು ಇಲ್ಲಿನ ವಿಶೇಷತೆಯಾಗಿದೆ. ಈ ನಾಲ್ಕು ಜಲಾಶಯಗಳ ಪೈಕಿ ಕಬಿನಿ ದೊಡ್ಡ ಜಲಾಶಯವಾಗಿದ್ದು, ಇದನ್ನು ನಂಬಿಕೊಂಡು ರೈತರು ಮಾತ್ರವಲ್ಲದೆ, ಲಕ್ಷಾಂತರ ಜನರಿದಿದ್ದಾರೆ. ಕುಡಿಯುವ ನೀರಿಗಾಗಿ ಇದೇ ಜಲಾಶಯವನ್ನು ಮೈಸೂರು ಸೇರಿದಂತೆ ಹಲವು ಪಟ್ಟಣಗಳು ಆಶ್ರಯಿಸಿವೆ. ಜೊತೆಗೆ ಇದೇ ಜಲಾಶಯವನ್ನು ನಂಬಿಕೊಂಡು ರೈತರು ಕೃಷಿ ಮಾಡುತ್ತಿದ್ದಾರೆ. ಕಳೆದ ವರ್ಷ ಜಲಾಶಯದಲ್ಲಿ ನಿರೀಕ್ಷೆಯಂತೆ ನೀರು ಹರಿದು ಬಾರದ ಕಾರಣ ರೈತರು ಸಂಕಷ್ಟಕ್ಕೀಡಾಗಿದ್ದರು.

ಈ ಬಾರಿ ಲಕ್ಷಾಂತರ ಕ್ಯುಸೆಕ್ ನೀರು ಈ ಜಲಾಶಯದಿಂದ ಹರಿದು ಹೋಗುವ ಮೂಲಕ ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಈಗಲೂ ಉತ್ತಮ ಒಳಹರಿವು ಇರುವುದರಿಂದ ಎಲ್ಲರೂ ನೆಮ್ಮದಿಯುಸಿರು ಬಿಡುವಂತಾಗಿದೆ. ಇದರ ಜತೆಗೆ ಉಳಿದ ನುಗು, ತಾರಕ ಮತ್ತು ಹೆಬ್ಬಳ್ಳ ಜಲಾಶಯವೂ ಭರ್ತಿಯಾಗುವಷ್ಟರ ಮಟ್ಟಿಗೆ ನೀರು ಹರಿದು ಬಂದಿರುವುದು ನೆಮ್ಮದಿಯಿಂದ ರೈತರು ಸೇರಿದಂತೆ ಸಾರ್ವಜನಿಕರು ಖುಷಿ ಪಡುವಂತಾಗಿದೆ. ಮುಂದಿನ ದಿನಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಬಂದರೂ ಸಾಕಾಗಲಿದೆ.
ಉತ್ತಮ ಮಳೆಯಾದರೆ ಜಲಾಶಯಕ್ಕೆ ಕಳೆ
ಹಾಗೆನೋಡಿದರೆ ಕಬಿನಿ ಜಲಾಶಯಕ್ಕೆ ಕೇರಳದಲ್ಲಿ ಉತ್ತಮವಾಗಿ ಮಳೆಯಾದರೆ ನೀರು ಹರಿದು ಬಂದು ಬಿಡುತ್ತದೆ. ಆದರೆ ಉಳಿದ ಮೂರು ಜಲಾಶಯಗಳಿಗೆ ಜಲಮೂಲಗಳ ಕೊರತೆಯಿದೆ. ಹೀಗಾಗಿ ಆ ಮೂರು ಜಲಾಶಯಗಳು ಭರ್ತಿಯಾಗಬೇಕಾದರೆ ಮಳೆ ಬರುವುದು ಅನಿವಾರ್ಯವಾಗಿದ್ದು, ಮಳೆಯೇ ಈ ಜಲಾಶಯಗಳ ಮೂಲವಾಗಿದೆ. ಹೀಗಾಗಿ ಈ ಬಾರಿ ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಅದರಲ್ಲೂ ಜಲಾಶಯಗಳ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು ಜಲಾಶಯದ ನೀರಿನ ಮಟ್ಟವು ಉತ್ತಮವಾಗಿದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಈ ಬಾರಿಯ ಮುಂಗಾರು ಮಳೆ ಕೇರಳ ಮತ್ತು ತಾಲೂಕಿನಾದ್ಯಂತ ಉತ್ತಮವಾಗಿ ಸುರಿದ ಕಾರಣ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ, ತಾರಕ ಮತ್ತು ನುಗು ಮಾತ್ರವಲ್ಲದೆ ಹೆಬ್ಬಾಳ ಜಲಾಶಯಗಳಲ್ಲಿ ನೀರು ಅಲೆಯಾಡುತ್ತಿದೆ. ಕಬಿನಿ ಜಲಾಶಯವನ್ನು ಹೊರತುಪಡಿಸಿ ಉಳಿದು ಮೂರು ಜಲಾಶಯದಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಕಾಣಿಸಿಕೊಳ್ಳುತ್ತಿರುವುದು ಎಲ್ಲವೂ ಖುಷಿಪಡುವ ವಿಚಾರವೇ.. ಎಲ್ಲ ವರ್ಷಗಳಲ್ಲೂ ಈ ಜಲಾಶಯಗಳು ಭರ್ತಿಯಾಗುವುದಿಲ್ಲ. ಈ ಜಲಾಶಯಗಳು ಅದರಲ್ಲೂ ತಾರಕ ಜಲಾಶಯ ಭರ್ತಿಯಾಗಿದೆ ಎಂದರೆ ಈ ವರ್ಷ ಸಮೃದ್ಧ ಮಳೆಯಾಗಿದೆ ಎಂದರ್ಥ.
ಈ ಜಲಾಶಯಗಳು ಭರ್ತಿಯಾಗುವುದೇ ವಿಶೇಷ
ಮೊದಲೆಲ್ಲ ತಾರಕ, ನುಗು ಜಲಾಶಯಗಳು ಎರಡೋ ಮೂರು ವರ್ಷಕ್ಕೊಮ್ಮೆ ಭರ್ತಿಯಾಗುತ್ತಿತ್ತು. ಆದರೆ 2018ರ ನಂತರ 2022ರವರೆಗೂ ಈ ಎಲ್ಲ ಜಲಾಶಯಗಳು ಪ್ರತಿವರ್ಷವೂ ಭರ್ತಿಯಾಗುತ್ತಾ ಬಂದಿತ್ತು. ಆದರೆ ಕಳೆದ 2023ರಲ್ಲಿ ಮುಂಗಾರು ಕ್ಷೀಣಗೊಂಡಿದ್ದರಿಂದ ಜಲಾಶಯಗಳು ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿಯ ಮುಂಗಾರು ಆಶಾದಾಯಕ ವಾಗಿದ್ದರಿಂದ ಜಲಾಶಯಗಳಲ್ಲಿ ನೀರು ಕಾಣಿಸಿದ್ದು ಗಮನಾರ್ಹವಾಗಿದೆ.

2022ರಲ್ಲಿ ಉತ್ತಮ ಮಳೆಯಾದ್ದರಿಂದ ಎಲ್ಲ ಜಲಾಶಯವು ಭರ್ತಿಯಾಗಿತ್ತು. 2023ರಲ್ಲಿ ಬರದಿಂದಾಗಿ ಕಬಿನಿ, ತಾರಕ, ನುಗು ಮತ್ತು ಹೆಬ್ಬಾಳ ಈ ನಾಲ್ಕು ಜಲಾಶಯಗಳು ಖಾಲಿ, ಖಾಲಿಯಾಗಿದ್ದವು.. 2017ರ ಬಳಿಕ ಉತ್ತಮ ಮಳೆಯಾದ ಪರಿಣಾಮ ಕಬಿನಿ, ತಾರಕ ಹಾಗೂ ನುಗು ಜಲಾಶಯದಲ್ಲಿ ನೀರಿನ ಶೇಖರಣೆ 2023ನ್ನು ಹೊರತು ಪಡಿಸಿ ಉತ್ತಮ ಪ್ರಮಾಣದಲ್ಲಿಯೇ ಇತ್ತು. ಈ ಬಾರಿಯೂ ಅದು ಮರುಕಳಿಸಿದೆ. ಕಬಿನಿ ಜಲಾಶಯ ಗರಿಷ್ಟ 2284ಅಡಿ ಹೊಂದಿದ್ದು ಅದು ಭರ್ತಿಯಾಗಿದೆ.
ಪ್ರವಾಸಿಗರಲ್ಲಿ ಜಲಾಶಯ ವೀಕ್ಷಿಸುವ ತವಕ
ಇಲ್ಲಿರುವ ತಾರಕ ಜಲಾಶಯವನ್ನು. 1998ರಲ್ಲಿ ಕೃಷಿ ಉದ್ದೇಶಕ್ಕೆ ನಿರ್ಮಿಸಲಾಗಿದ್ದು, 2425 ಅಡಿ ಸಾಮರ್ಥ್ಯದ ಈ ಜಲಾಶಯ ಕ್ರಸ್ಟ್ ಗೇಟ್ 2006ರಲ್ಲಿ ಒಡೆದು ಜಲಾಶಯದ ನೀರು ಮನೆ, ಜಮೀನಿಗೆ ನುಗ್ಗಿ ಹಾನಿಯಾಗಿತ್ತು. ಈ ಜಲಾಶಯಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೆಟಿಕುಪ್ಪೆ ವನ್ಯಜೀವಿ ವಲಯದಿಂದ ನೀರು ಹರಿದು ಬರುತ್ತದೆ. ಜತೆಗೆ ನಾರಹೊಳೆ ಹಾಗೂ ಸಾರಥಿ ಹೊಳೆಯೂ ಇದಕ್ಕೆ ಸೇರುತ್ತದೆ. ಈ ಜಲಾಶಯಕ್ಕೆ ಕಬಿನಿ ಹಿನ್ನೀರಿನಿಂದ ನೀರನ್ನು ತುಂಬಿಸಿಟ್ಟರೆ ರೈತರಿಗೆ ಅನುಕೂಲವಾಗಲಿದೆ. ನುಗು ಜಲಾಶಯವು ಗರಿಷ್ಟ ಮಟ್ಟ 2380 (5.4ಟಿಎಂಸಿ) ಅಡಿಯನ್ನು ಹೊಂದಿದೆ.
ಈ ಬಾರಿ ಅದರಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರ ಜೊತೆಗೆ ಹೆಬ್ಬಳ್ಳ ಜಲಾಶಯವಿದ್ದು, ಇದು ನಾಗರಹೊಳೆ ಅಭಯಾರಣ್ಯದೊಳಗಿಂದ ಹರಿಯುವ ಹೆಬ್ಬಳ್ಳ ನದಿ ಅಡ್ಡಲಾಗಿ ನಿರ್ಮಿಸಲಾದ ಜಲಾಶಯವಾಗಿದೆ. ಇದು 0.428 ಟಿಎಂಸಿ ನೀರಿನ ಸಂಗ್ರಹಮಟ್ಟ ಹೊಂದಿದೆ, ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಎಲ್ಲ ಜಲಾಶಯಗಳಲ್ಲಿ ಉತ್ತಮ ಪ್ರಮಾಣದಲ್ಲಿ ನೀರಿನ ಸಂಗ್ರಹವಿರುವುದು ಖುಷಿ ತಂದಿದೆ. ಹೀಗಾಗಿಯೇ ಈ ಜಲಾಶಯಗಳನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದೊಂದು ರೀತಿಯಲ್ಲಿ ಖುಷಿಕೊಡುವ ಸಂಗತಿಯಾಗಿದೆ.












Click it and Unblock the Notifications