ಮೈಸೂರು; ರನ್ ವೇ ವಿಸ್ತರಣೆಗೆ 319 ಕೋಟಿ ಬಿಡುಗಡೆ
ಮೈಸೂರು, ಏಪ್ರಿಲ್ 17; ಬಹು ನಿರೀಕ್ಷಿತ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ ಕರ್ನಾಟಕ ಸರ್ಕಾರವು 319 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. 1740 ಮೀ ಇರುವ ರನ್ ವೇಯನ್ನು 2400 ಮೀ.ಗೆ ವಿಸ್ತರಣೆ ಮಾಡಲಾಗುತ್ತದೆ.
ಇದೀಗ ರನ್ ವೇ ವಿಸ್ತರಣೆಗೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ಹಸ್ತಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಅವಶ್ಯವಿರುವ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾ ಭಿವೃದ್ಧಿ ಮಂಡಳಿಯಿಂದ ಸ್ವಾಧೀನ ಪಡಿಸಿಕೊಂಡು ನೀಡಲಾಗುತ್ತದೆ. ಬಹಳ ವರ್ಷಗಳಿಂದ ರನ್ ವೇ ವಿಸ್ತರಣೆ ಬೇಡಿಕೆ ಇತ್ತು.
ಇದಕ್ಕಾಗಿ ಕೆಎಸ್‌ಐಐಡಿಸಿ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಮೊದಲ ಹಂತದಲ್ಲಿ ರನ್‌ವೇ ವಿಸ್ತರಣೆಗೆ 240 ಎಕರೆ ಜಮೀನು ಅಗತ್ಯವಿದೆ ಎಂದು ಬೇಡಿಕೆ ಸಲ್ಲಿಸಲಾಗಿತ್ತು. ಇದರಲ್ಲಿ 22.9 ಎಕರೆ ಜಮೀನು ಈಗಾಗಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸ್ವಾಧೀನದಲ್ಲಿದೆ.
11.09 ಎಕರೆ ಜಮೀನು ಎಣ್ಣೆಹೊಳೆ ಕಾಲುವೆಯಾಗಿದ್ದು, ಸರ್ಕಾರದ ಜಮೀನು. ಭೂ ಮಾಲೀಕರಿಂದ ಮರಕ್ಕೆ ತೆಗೆದುಕೊಂಡಿರುವ 206 ಎಕರೆ ಪೈಕಿ 160 ಎಕರೆಗೆ ಸರ್ಕಾರ ಇದೀಗ ಅಂತಿಮ ಅಧಿಸೂಚನೆ ಹೊರಡಿಸಿದೆ. ಉಳಿದಂತೆ 46.22 ಎಕರೆ ಅಧಿಸೂಚನೆ ಬಾಕಿ ಇದೆ.

ಸಂಸದರು ಮನವಿ ಸಲ್ಲಿಕೆ ಮಾಡಿದ್ದರು
ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಈ ಹಿಂದೆ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ಸಿಎಂ ಬಸವರಾಜ ಬೊಮ್ಮಾಯಿಗೆ ಧನ್ಯವಾದ ತಿಳಿಸಿದ್ದಾರೆ. 2022-23ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಏರ್ ಪೋರ್ಟ್ ಅಭಿವೃದ್ಧಿಗೆ ಕ್ರಮಕೈಗೊಳ್ಳುವ ಭರವಸೆಯನ್ನು ಸಿಎಂ ಘೋಷಿಸಿದ್ದರು.

700 ಕೋಟಿ ಮೀಸಲಿಡಲಾಗಿದೆ
ಮೈಸೂರಿನ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಈಗಾಗಲೇ ಕೇಂದ್ರ ಸರ್ಕಾರ 700 ಕೋಟಿ ಮೀಸಲಿಟ್ಟಿದೆ. ಇನ್ನೂ ಹೆಚ್ಚಿನ ಅನುದಾನ ಅಗತ್ಯವಿದೆ. ಅಂಡರ್ ಪಾಸ್ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 400 ಕೋಟಿ ಬೇಕಾಗುತ್ತದೆ. ಹೀಗಾಗಿ ಅಂಡರ್ ಪಾಸ್ ನಿರ್ಮಾಣದ ಬದಲು ರಾಷ್ಟ್ರೀಯ ಹೆದ್ದಾರಿಯನ್ನೇ ಡಿವಿಯೇಷನ್ ಮಾಡುವ ಯೋಜನೆ ಇದೆ. ಸದ್ಯದಲ್ಲೇ ರನ್‌ವೇ ವಿಸ್ತರಣೆ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಪ್ರತಾಪಸಿಂಹ ತಿಳಿಸಿದ್ದಾರೆ.

1740 ಮೀಟರ್ ರನ್ ವೇ ಇದೆ
ಮೈಸೂರಿನ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣವಿದೆ. ಈಗ ರನ್‌ವೇ ಕೇವಲ 1740 ಮೀಟರ್ ಇದೆ. ಇದರಿಂದಾಗಿ ಸಣ್ಣ ವಿಮಾನಗಳು ಮಾತ್ರ ಸಂಚಾರ ನಡೆಸಬಹುದಾಗಿದೆ. ರನ್‌ವೇಯನ್ನು 2400 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತದೆ. ಈ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲು ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮವನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಈ ಸಂಸ್ಥೆ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಣೆ ಮಾಡಲಿದೆ.

ಎಷ್ಟು ಜಮೀನು ವಶದಲ್ಲಿದೆ?
ಕೆಎಸ್‌ಐಐಡಿಸಿ ವಶದಲ್ಲಿ 206.22 ಎಕರೆ ಜಮೀನು ಇದೆ. ಒಂದು ಎಕರೆಗೆ 1.50 ಕೋಟಿ ರೂ.ಗಳಂತೆ 309.84 ಕೋಟಿ ಹಾಗೂ ಸೇವಾ ಶುಲ್ಕ ಸೇರಿ 319.13 ಕೋಟಿ ರೂ.ಗಳನ್ನು ಭರಿಸುವಂತೆ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಎನ್. ಕಲಾವತಿ ಆದೇಶದಲ್ಲಿ ತಿಳಿಸಿದ್ದಾರೆ. 240 ಎಕರೆ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡುವುದು ಕರ್ನಾಟಕ ಸರ್ಕಾರದ ಜವಾಬ್ದಾರಿಯಾಗಿದೆ.












Click it and Unblock the Notifications