Mahisha Dasara; ಮಹಿಷ ದಸರಾ, ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿ
ಮೈಸೂರು, ಸೆಪ್ಟೆಂಬರ್ 28: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಟೋಬರ್ 3ರ ಗುರುವಾರ ಮೈಸೂರು ದಸರಾ-2024ಕ್ಕೆ ಚಾಲನೆ ಸಿಗಲಿದೆ. ಅಕ್ಟೋಬರ್ 12ರಂದು ಜಂಬೂ ಸವಾರಿ ಮೂಲಕ ದಸರಾಕ್ಕೆ ತೆರೆ ಬೀಳಲಿದೆ. ಈ ನಡುವೆ ಮಹಿಷ ದಸರಾ ನಡೆಸುವ ಕುರಿತು ಚರ್ಚೆಗಳು ಆರಂಭವಾಗಿವೆ. ಆದ್ದರಿಂದ ಮೈಸೂರು ನಗರ ಪೊಲೀಸರು ಸೆಪ್ಟೆಂಬರ್ 28ರ ರಾತ್ರಿ 12 ಗಂಟೆಯಿಂದ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಈ ಕುರಿತು ಸೀಮಾ ಲಾಟ್ಕರ್, ಪೊಲೀಸ್ ಆಯುಕ್ತರು ಮೈಸೂರು ನಗರ ಆದೇಶವನ್ನು ಹೊರಡಿಸಿದ್ದಾರೆ. ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಚಾಮುಂಡಿ ಬೆಟ್ಟ ಸೇರಿದಂತೆ (ಟೌನ್ ಹಾಲ್ ಒಳ ಆವರಣ ಹೊರತುಪಡಿಸಿ) ದಿನಾಂಖ 28.09.2024ರಂದು ಮಧ್ಯರಾತ್ರಿ 12 ಗಂಟೆಯಿಂದ ದಿನಾಂಕ 30.09.2024ರ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಸಭೆ-ಸಮಾರಂಭ, ರ್‍ಯಾಲಿ ಹಾಗೂ ಮೆರವಣಿಗೆ ನಡೆಸುವುದನ್ನು ನಿಷೇಧಿಸಿ ಕಲಂ 163 ಬಿ.ಎನ್.ಎಸ್.ಎಸ್. ರೀತ್ಯಾ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.

ಪ್ರಸ್ತಾವನೆ ಏನು?: ದಿನಾಂಕ 29/09/2024 ರಂದು ಬೆಳಗ್ಗೆ 8.30 ಗಂಟೆಗೆ ಮೈಸೂರು ನಗರದಲ್ಲಿ 'ಮಹಿಷ ಮಂಡಲೋತ್ಸವ' ಎಂಬ ಹೆಸರಿನಲ್ಲಿ ಶ್ರೀ ಪುರುಷೋತ್ತಮ್, ಅಧ್ಯಕ್ಷರು ಮಹಿಷ ದಸರಾ ಆಚರಣಾ ಸಮಿತಿ ಮತ್ತು ಮಹಿಷ ಮಂಡಲೋತ್ಸವ ಕಾರ್ಯಕ್ರಮ ಹಾಗೂ ಮಾಜಿ ಮಹಾಪೌರರು, ಮೈಸೂರು ಇವರ ನೇತೃತ್ವದಲ್ಲಿ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಮಹಿಷ ಅನುಯಾಯಿಯಗಳು ಮತ್ತು ಮಹಿಷ ಮಂಡಲೋತ್ಸವ ಕಾರ್ಯಕ್ರಮದ ಆಯೋಜಕರುಗಳು ಚಾಮುಂಡಿಬೆಟ್ಟಕ್ಕೆ ತೆರಳಿ ಮಹಿಷಾಸೂರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ನಂತರ ಅದೇ ದಿನ ಬೆಳಗ್ಗೆ 10.30ಕ್ಕೆ ನಗರದ ಪುರಭವನದ ಹೊರಾವರಣದಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅನುಮತಿ ಮತ್ತು ರಕ್ಷಣೆ ಕೋರಿ ಮನವಿ ಸಲ್ಲಿಸಿರುತ್ತಾರೆ.
ಪತ್ರದಲ್ಲಿ ಎಸಿಪಿ ಕೃಷ್ಣರಾಜ ಉಪ ವಿಭಾಗರವರು ಈ ಸಂಬಂಧ ವರದಿ ಸಲ್ಲಿಸಿದ್ದು, ವರದಿಯಲ್ಲಿ ಮಹಿಷಾ ದಸರಾ ಆಚರಣೆ ವಿಚಾರದಲ್ಲಿ ಎರಡು ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತದೆ. ಅಲ್ಲದೆ ವಿವಿಧ ಹಿಂದೂ ಪರ ಸಂಘಟನೆಗಳು ಮತ್ತು ಇತರೆ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇರುತ್ತದೆ. ಚಾಮುಂಡಿ ಬೆಟ್ಟವು ವಿಶಾಲತೆಯಿಂದ ಕೂಡಿದ್ದಾಗಿದ್ದು, ಯಾವ ಸಂದರ್ಭದಲ್ಲಾದರೂ ಅಥವಾ ಯಾವ ಕಡೆಯಿಂದಾದರೂ ಸಹ ತಂಡೋಪತಂಡವಾಗಿ ಪರ ವಿರೋಧ ಮಾಡುವವರು ಸೇರಬಹುದಾಗಿರುತ್ತದೆ. ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಚಾಮುಂಡಿ ಬೆಟ್ಟದಲ್ಲಿ ವಾಸಿಸುತ್ತಿರುವವರಿಗೆ ಅನ್ವಯಿಸದಂತೆ, ದಿನಾಂಕ 28/09/2024ರ ರಾತ್ರಿ 12 ಗಂಟೆಯಿಂದ ದಿನಾಂಕ 30/09/2024ರ ಬೆಳಗ್ಗೆ 6 ಗಂಟೆಯವರೆಗೆ ಮಹಿಷಾಸುರ ವೃತ್ತದ ಸುತ್ತ 200 ಮೀ. ವ್ಯಾಪ್ತಿಗೆ ಕಲಂ 163 ಬಿ.ಎನ್.ಎಸ್.ಎಸ್. ರೀತ್ಯ ನಿಷೇಧಾಜ್ಞೆಯ ಆದೇಶವನ್ನು ಹೊರಡಿಸಬೇಕೆಂದು ಕೋರಿ ವರದಿ ನೀಡಿರುತ್ತಾರೆ.
ವರದಿಯಲ್ಲಿ ದಿನಾಂಕ 29/09/2024 ರಂದು ಮಹಿಷ ದಸರಾ ಆಚರಣಾ ಸಮಿತಿ ಅವರು ಆಚರಿಸುವ ಮಹಿಷ ದಸರಾ 2024ರ ಬಗ್ಗೆ ವಿವಿಧ ಸಂಘಟನೆಗಳು, ಬುದ್ದಿ ಜೀವಿಗಳು, ಕಾರ್ಯಕರ್ತರು ಸೇರಿದಂತೆ ಬಹುತೇಕ ಸಾರ್ವಜನಿಕರು ಇದಕ್ಕೆ ಪರ ಮತ್ತು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚು ಸಂದೇಶಗಳು ಹರಿದಾಡುತ್ತಿರುವುದರಿಂದ, ಇದನ್ನು ಕೆಲವು ವಿರೋಧಿಸಿ ಪ್ರತಿಭಟನೆ ಮಾಡಿ ಹಿಂಸಾಚಾರ ಉಂಟಾಗುವ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆಗಳು ನಡೆದು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಗಳು ಅತ್ಯಧಿಕವಾಗಿರುತ್ತದೆ. ಆದ ಕಾರಣ ಟೌನ್‌ಹಾಲ್ ಹೊರತುಪಡಿಸಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ಧ್ವನಿವರ್ಧಕ ಬಳಸುವುದು, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು ಮೂರ್ತಿ ಮೆರವಣಿಗೆ ಮಾಡದಂತೆ ನಿಷೇಧಾಜ್ಞೆಯ ಆದೇಶವನ್ನು ಹೊರಡಿಸಬೇಕೆಂದು ಕೋರಿರುತ್ತಾರೆ.
ಉಪ ನಿರೀಕ್ಷಕರು, ನಗರ ವಿಶೇಷ ವಿಭಾಗ ಅವರು ಈ ಸಂಬಂಧ ವರದಿ ಸಲ್ಲಿಸಿದ್ದು, ವರದಿಯಲ್ಲಿ ಮಾಜಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಹಾಗೂ ಮಹಿಷ ಮಂಡಲೋತ್ಸವ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಿದ್ದಲ್ಲಿ ಚಾಮುಂಡಿ ಬೆಟ್ಟಕ್ಕೆ ಚಾಮುಂಡಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಮಾಹಿತಿ ಇದ್ದು, ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಪರ ವಿರೋಧ ಹೇಳಿಕೆ ಹಾಗೂ ಸಂದೇಶಗಳು ಹರಿದಾಡುತ್ತಿರುತ್ತದೆ. ಈ ಬಗ್ಗೆ ಪರ ಮತ್ತು ವಿರೋಧಗಳು ವ್ಯಕ್ತವಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ದಸರಾ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಭಕ್ತಾದಿಗಳು ಹಾಗೂ ಪ್ರವಾಸಿಗರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವುದರಿಂದ ಇಂತಹ ವೇಳೆಯಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮ ಆಚರಣೆಯಿಂದ ಸಂಘರ್ಷಗಳು ನಡೆದು ಶಾಂತಿ ಭಂಗ ಉಂಟಾಗಬಹುದಾಗಿರುವ ಮಾಹಿತಿ ಇರುತ್ತದೆ ಎಂಬುದಾಗಿ ತಿಳಿಸಿರುತ್ತಾರೆ.
2024ನೇ ಸಾಲಿನ ಮೈಸೂರು ದಸರಾ ದಿನಾಂಕ 03/10/202400 ಉದ್ಘಾಟನೆಗೊಳ್ಳುತ್ತಿದ್ದು, ಇದು ವಿಶ್ವವಿಖ್ಯಾತ ದಸರಾ ಮಹೋತ್ಸವವಾಗಿದ್ದು ಇದನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಆಗಮಿಸಲಿದ್ದು, ಇಂತಹ ವೇಳೆಯಲ್ಲಿ ಮೇಲ್ಕಂಡ ಮಹಿಷ ಮಂಡಲೋತ್ಸವ ಕಾರ್ಯಕ್ರಮ ಆಚರಣೆ ವೇಳೆ ಏನಾದರೂ ಶಾಂತಿ ಭಂಗ ಉಂಟಾಗಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಂದಲ್ಲಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟಾಗಿ, ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೂ ಭಂಗ ಉಂಟಾಗುವ ಸಂಭವವಿರುತ್ತದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ (ಟೌನ್‌ಹಾಲ್ ಒಳ ಆವರಣ ಹೊರತುಪಡಿಸಿ) ಹಾಗೂ ಚಾಮುಂಡಿ ಬೆಟ್ಟ ಮಹಿಷಾಸುರನ ಪ್ರತಿಮೆಯ 200 ಮೀಟರ್ ವ್ಯಾಪ್ತಿ ಸುತ್ತಲೂ ದಿನಾಂಕ 28/09/2024 ರಂದು ಮಧ್ಯರಾತ್ರಿ 12 ಗಂಟೆಯಿಂದ ದಿನಾಂಕ 30/09/2024ರ ಬೆಳಗ್ಗೆ 6 ಗಂಟೆಯವರೆಗೆ ಕಲಂ 163 ಬಿ.ಎನ್.ಎಸ್.ಎಸ್-2023 ರೀತ್ಯ ನಿಷೇಧಾಜ್ಞೆಯನ್ನು ಜಾರಿಗೊಳಿಸಬೇಕೆಂದು ಡಿಸಿಪಿ ಕಾನೂನು & ಸುವ್ಯವಸ್ಥೆ ಮೈಸೂರು ನಗರ ಪತ್ರದಲ್ಲಿ ಕೋರಿರುತ್ತಾರೆ. ಈ ವಿಷಯಗಳನ್ನು ಅವಲೋಕಿಸಿ, ಸದರಿ ದಿನಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದು ಅವಶ್ಯಕವಿದೆ ಎಂದು ಮನಗಂಡು ಆದೇಶ ಹೊರಡಿಸಲಾಗಿದೆ.
ಆದೇಶದ ವಿವರ: ಆದೇಶದಲ್ಲಿ ಸೀಮಾ ಲಾಟ್ಕರ್, ಐಪಿಎಸ್ ಪೊಲೀಸ್ ಕಮೀಷನರ್, ಮೈಸೂರು ನಗರ ಆದ ನಾನು ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಚಾಮುಂಡಿ ಬೆಟ್ಟ ಸೇರಿದಂತೆ (ಟೌನ್‌ಹಾಲ್ ಒಳ ಆವರಣ ಹೊರತುಪಡಿಸಿ) ಮಹಿಷ ಮಂಡಲೋತ್ಸವ/ ಮಹಿಷ ದಸರಾದ ಪರ ವಿರೋಧವಾಗಿ ನಡೆಸುವ ಈ ಕೆಳಕಂಡವುಗಳನ್ನು ನಿಷೇಧಿಸಿ ಕಲಂ 163 ಬಿ.ಎನ್.ಎಸ್.ಎಸ್ ಕಾಯ್ದೆ -2023 ರೀತ್ಯ ನಿಷೇಧಾಜ್ಞೆಯನ್ನು ಘೋಷಿಸಿರುತ್ತೇನೆ ಎಂದು ಹೇಳಿದ್ದಾರೆ.
* ಯಾವುದೇ ಮೆರವಣಿಗೆ, ಪ್ರತಿಭಟನೆ, ರ್‍ಯಾಲಿ, ಬೈಕ್ ರ್‍ಯಾಲಿ, ನಡೆಸುವುದು
* ಪರ ವಿರೋಧ ಘೋಷಣೆ ಕೂಗುವುದು
* ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದು
* 5 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು
* ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು
* ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ಧ್ವನಿವರ್ಧಕ ಬಳಸುವುದು, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದು.
ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಹಾಗೂ ಸಭೆ- ಸಮಾರಂಭ ಮೆರವಣಿಗೆ, ಪ್ರತಿಭಟನೆ, ರ್‍ಯಾಲಿ ನಡೆಸಲು ಪ್ರಯತ್ನಿಸಿದಲ್ಲಿ ಅಲ್ಲಿ ಸೇರಿರುವ ಜನರ ಕೂಟವನ್ನು ಅಕ್ರಮ ಕೂಟವೆಂದು ಪರಿಗಣಿಸಿ, ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಈ ಆದೇಶ ಮದುವೆ ಸಮಾರಂಭಗಳಿಗೆ, ಶವ ಸಂಸ್ಕಾರಗಳಿಗೆ, ಶಾಲೆ/ ಕಾಲೇಜು ಮತ್ತು ಪರೀಕ್ಷೆಗಳಿಗೆ ತೆರಳುವವರಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications