ಪಿರಿಯಾಪಟ್ಟಣ: ಹುಚ್ಚು ನಾಯಿ ದಾಳಿಗೆ ಮಕ್ಕಳು ಸೇರಿ ಒಂಬತ್ತು ಮಂದಿಗೆ ಗಾಯ
ಮೈಸೂರು, ಜುಲೈ. 04: ರಾಜ್ಯದಲ್ಲಿ ಮಕ್ಕಳ ಮೇಲೆ ನಾಯಿ ದಾಲಿ ಮಾಡುವ ಘಟನೆಗಳು ವರದಿಯಾಗುತ್ತಿದ್ದವು. ಇದರ ಬೆನ್ನಲ್ಲೇ ಹುಚ್ಚು ನಾಯಿಯೊಂದು ಮೂವರು ಬಾಲಕರು ಸೇರಿ ಒಂಬತ್ತು ಮಂದಿಗೆ ಕಚ್ಚಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಪಿರಿಯಾಪಟ್ಟಣದ ಈಡಿಗರ ಬೀದಿಯ ಬಳಿ ಈ ಘಟನೆ ನಡೆದಿದ್ದು ಸ್ಥಳೀಯ ನಿವಾಸಿ ಇಬಾದುಲ್ಲಾ ಖಾನ್ ಎಂಬುವವರ ಮಗ 9 ವರ್ಷದ ಮಗು ಫರಾನ್ ಎಂಬುವವರಿಗೆ ಈ ಹುಚ್ಚು ನಾಯಿ ಮೊದಲು ಕಚ್ಚಿದೆ. ಈ ಬಗ್ಗೆ ಇಬಾದುಲ್ಲಾ ಖಾನ್ ಪಟ್ಟಣ ಪಂಚಾಯಿತಿಗೂ ಮಾಹಿತಿ ನೀಡಿದ್ದಾರೆ. ಆದರೆ ಸಂತ್ರಸ್ತರ ಮಾಹಿತಿ ನಿರ್ಲಕ್ಷಿಸಿದ ಪುರಸಭೆಯವರು ಯಾವುದೆ ಕ್ರಮವಹಿಸಿಲ್ಲ.

ಇದೇ ಹುಚ್ಚು ನಾಯಿ ಸಂಜೆಯ ವೇಳೆಗೆ ವರ್ಧನ್ ಆರ್ಯ ಎಂಬ 10 ವರ್ಷದ ಮಗುವಿನ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿ ಕಚ್ಚಿದ್ದು ತೊಡೆಯ ಭಾಗ, ಕಾಲುಗಳಲ್ಲಿ ಗಂಭೀರ ಗಾಯಗಳಾಗಿವೆ. ಇದಾದ ನಂತರ ಜುಬೇರ್ ಶರೀಫ್, ದರ್ಶನ್, ಸುಯೇಬ್ ಶರೀಫ್ ಮತ್ತು ಇಬಾದುಲ್ಲಾಖಾನ್ ಅವರ ಮೇಲೂ ದಾಳಿ ಮಾಡಿದೆ.
ಒಂದೇ ದಿನದಲ್ಲಿ ಬರೋಬ್ಬರಿ ಏಳು ಮಂದಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಜಬೀರ್ ಶರೀಫ್ ಮತ್ತು ರಂಗಮ್ಮ ಎಂಬ ಮಹಿಳೆಗೆ ತೀವ್ರವಾಗಿ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಇಬ್ಬರು ಗಾಯಾಳುಗಳಿಗೆ ಬೆಳಗ್ಗೆ ರ್‍ಯಾಡೀಸ್ ಇಮನೋಗೋಬಿನ್ ಎಂಬ ಇಂಜೆಕ್ಷನ್ ನೀಡಲಾಗಿತ್ತು. ಬಳಿಕ ನಂತರ ಬಂದ ಎಂಟು ಮಂದಿಗೆ ಇಂಜೆಕ್ಷನ್ ಇಲ್ಲವಾದ ಕಾರಣ ಎಲ್ಲರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದಲ್ಲದೆ ಬೀದಿ ನಾಯಿಗಳ ಹಾವಳಿಯ ಬಗ್ಗೆ ಹುಚ್ಚು ನಾಯಿ ಕಡಿತಕ್ಕೆ ಒಳಗಾದವರ ಬಗ್ಗೆ ಕ್ರಮವಹಿಸುವಂತೆ ಪತ್ರ ಬರೆದು ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ನಾಯಿ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಪ್ರಮೋದ್ ತಿಳಿಸಿದ್ದಾರೆ.
ಪಿರಿಯಾಪಟ್ಟಣದ ತುಂಬೆಲ್ಲಾ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸುವ ಸಂಬಂಧ ಪುರಸಭೆ ಕ್ರಮವಹಿಸಬೇಕು. ಈ ಮೂಲಕ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಬೇಕು. ಹೀಗೆ ನಾಯಿ ಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಮತ್ತು ಯಾರಾದರೂ ಹುಚ್ಚುನಾಯಿ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ತಕ್ಷಣ ಪುರಸಭೆ ವತಿಯಿಂದ ಸ್ಪಂದಿಸುವ ಕೆಲಸವಾಗಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇನ್ನು, ಹುಚ್ಚು ನಾಯಿ ದಾಳಿ ಮಾಡಿ ಕಚ್ಚಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು ಶೀಘ್ರದಲ್ಲಿ ಕ್ರಮವಹಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ ತಿಳಿಸಿದ್ದಾರೆ.












Click it and Unblock the Notifications