Get Updates
Get notified of breaking news, exclusive insights, and must-see stories!

Loksabha Election: ಮೈಸೂರಿನಲ್ಲಿ ಪ್ರತಾಪ್ ಸಿಂಹ ಮಣಿಸಲು "ಕೈ" ಪಡೆ ರಣತಂತ್ರ

ಮೈಸೂರು, ಅಕ್ಟೋಬರ್‌, 31: ಮೈಸೂರು, ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾರಮ್ಯ ಸಾಧಿಸಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿರುವ ಆಕಾಂಕ್ಷಿಗಳು ಸ್ಪರ್ಧೆಗೆ ತಾಮುಂದು ನಾಮುಂದು ಎಂಬಂತೆ ಪೈಪೋಟಿಗಿಳಿದಿರುವ ಬೆನ್ನಲ್ಲೇ ಕೈ ನಾಯಕರು ಸಭೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಗೆಲುವಿಗೆ ಬ್ರೇಕ್ ಹಾಕಲು ತಂತ್ರ ರೂಪಿಸುತ್ತಿದ್ದಾರೆ.

ಕಳೆದ ಎರಡು ಅವಧಿಯಲ್ಲೂ ಗೆಲುವು ಸಾಧಿಸಿರುವ ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಅವರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಕಾಂಗ್ರೆಸ್ ನಾಯಕರು ಬಿದ್ದಿದ್ದಾರೆ. ಅದರಲ್ಲೂ ಕೆಪಿಸಿಸಿ ವಕ್ತಾರರಾಗಿರುವ ಎಂ.ಲಕ್ಷ್ಮಣ್ ಅವರು ಹೆಜ್ಜೆ ಹೆಜ್ಜೆಗೂ ಪ್ರತಾಪ್ ಸಿಂಹ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆ ಆರಂಭವಾಗಿದ್ದು, ಈ ಬಾರಿ ಪ್ರತಾಪ್ ಸಿಂಹ ಅವರಿಗೆ ಹ್ಯಾಟ್ರಿಕ್ ಗೆಲುವು ಸಿಗದಂತೆ ನೋಡಿಕೊಳ್ಳಲು ಬೇಕಾದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತಿದೆ.

Lok Sabha Election 2024: Mass Preparation by Congress in Mysore to Defeat BJP MP Pratap Simha

ಕೊಡಗು ಮಂಗಳೂರಿನ ಜೊತೆಯಿದ್ದಾಗಲೂ ಬಿಜೆಪಿ ಸಂಸದರೇ ಹೆಚ್ಚಾಗಿ ಗೆದ್ದಿದ್ದರು. ಆ ನಂತರ ಮೈಸೂರಿಗೆ ಸೇರ್ಪಡೆಯಾದಾಗ ಒಮ್ಮೆ ಮಾತ್ರ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. ಆ ನಂತರ ಕಳೆದೊಂದು ದಶಕದಿಂದ ಬಿಜೆಪಿಯ ಪ್ರತಾಪ್ ಸಿಂಹ ಗೆಲುವು ಸಾಧಿಸುತ್ತಾ ಬರುತ್ತಿದ್ದಾರೆ. ಇದರಲ್ಲಿ ಪ್ರತಾಪ್ ಸಿಂಹ ಅವರ ಒಂದಷ್ಟು ವೈಯಕ್ತಿಕ ವರ್ಚಸ್, ಜೆಡಿಎಸ್‌ನ ಸಹಕಾರ ಮತ್ತು ಮೋದಿ ಹವಾ ಹೀಗೆ ಎಲ್ಲವೂ ಮಿಳಿತವಾಗಿದೆ. ಆದರೆ ಈ ಬಾರಿ ಅದೆಲ್ಲದಕ್ಕೂ ಸೆಡ್ಡು ಹೊಡೆದು ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬುದು ಕೈ ನಾಯಕರ ನಂಬಿಕೆಯಾಗಿದೆ.

ಸಿಎಂ ಸಿದ್ದರಾಮಯ್ಯರಿಗೂ ಪ್ರತಿಷ್ಠೆಯ ಕ್ಷೇತ್ರ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿದ್ದು, ಇಲ್ಲಿ ಗೆಲುವು ಸಾಧಿಸದೆ ಹೋದರೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಹಗುರವಾಗುವ ಸಾಧ್ಯತೆಯಿದೆ. ತಮ್ಮ ಕ್ಷೇತ್ರದಲ್ಲಿಯೇ ಒಂದು ಸೀಟನ್ನು ಗೆಲ್ಲಿಸಿಕೊಂಡು ಬರಲಾಗಲಿಲ್ಲ ಎಂದರೆ ಅದು ಸಿದ್ದರಾಮಯ್ಯರಿಗೆ ಮುಖಭಂಗದಂತೆ. ಈಗಾಗಲೇ ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಕೂಗು ಕೇಳಿ ಬರುತ್ತಿದ್ದು, ತಾವು ಸ್ಟ್ರಾಂಗ್ ಎಂದು ತೋರಿಸಬೇಕಾದರೆ ಅಥವಾ ಸಿಎಂ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಸಿದ್ದರಾಮಯ್ಯ ಅವರು ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿ ತೋರಿಸಲೇಬೇಕಾಗಿದೆ.

ಲೋಕಸಭಾ ಚುನಾವಣೆ ವಿಧಾನಸಭಾ ಚುನಾವಣೆಯಂತಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಾಗಿ ಮೋದಿಯನ್ನು ನೋಡಿಕೊಂಡು ಮತ ನೀಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂತಹ ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆದು ಮತ ಪಡೆಯಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ಅವರಿಗೆ ಎದುರಾಗಿದೆ. ಹೀಗಾಗಿಯೇ ತವರು ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ಒಮ್ಮತದ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಚಾರಗಳು ಒಂದೆಡೆಯಾದರೆ, ಅದಕ್ಕಿಂತ ಮುಖ್ಯವಾಗಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಈಗಾಗಲೇ ಹಲವರು ತಾವೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂಬುದಾಗಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಈಗಿನಿಂದಲೇ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡದೆ ಹೋದರೆ ಚುನಾವಣೆ ದಿನಗಳು ಹತ್ತಿರವಾದಂತೆ ಆಕಾಂಕ್ಷಿಗಳು ಬಂಡಾಯವೇಳುವ ಸಾಧ್ಯತೆಯಿದ್ದು, ಇದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಭಯವೂ ಇಲ್ಲದಿಲ್ಲ.

ಮುಂದೆ ಆಗಬಹುದಾದ ಕೆಲವೊಂದು ಸಮಸ್ಯೆಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಕೈನಾಯಕರು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಸರತ್ತು ಆರಂಭಿಸಿದ್ದಾರೆ. ಅದರಂತೆ ಎಲ್ಲರೂ ತೀರ್ಮಾನ ಕೈಗೊಂಡು ಚುನಾವಣೆಯಲ್ಲಿ ಗೆಲ್ಲುವ ಅರ್ಹತೆ ಹೊಂದಿರುವ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅದನ್ನು ಗೌಪ್ಯವಾಗಿ ವರಿಷ್ಟರಿಗೆ ರವಾನಿಸುವ ತೀರ್ಮಾನ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲಕೊಡುತ್ತದೆಯೋ ಗೊತ್ತಿಲ್ಲ. ಆದರೆ ಪ್ರಕ್ರಿಯೆ ಮಾತ್ರ ಈಗಿನಿಂದಲೇ ಆರಂಭವಾಗಿದೆ.

ಪ್ರತಾಪ್ ಸಿಂಹರನ್ನು ಸೋಲಿಸುವುದೇ ಗುರಿ

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷರು, 16 ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಂಟು ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು, 40 ಮಂದಿ ಮುಂಚೂಣಿ ಘಟಕದ ಅಧ್ಯಕ್ಷರು, 16 ಬ್ಲಾಕ್ ನ ಕೆಪಿಸಿಸಿ ಸದಸ್ಯರು, ಮಾಜಿ ಮೇಯರ್ ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯರು ಸಭೆ ನಡೆಸಿ ಪಕ್ಷದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಹಾಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಸೋಲಿಸುವ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಈ ಸಂಬಂಧ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂಬ ಸಂದೇಶವನ್ನು ಆಕಾಂಕ್ಷಿಗಳಿಗೆ ರವಾನಿಸಲಾಗಿದೆ.

ಇನ್ನು ಲೋಕಸಭಾ ಚುನಾವಣೆ ಸನಿಹವಾಗುತ್ತಿರುವಾಗ ಅಭ್ಯರ್ಥಿಯನ್ನು ಘೋಷಣೆ ಮಾಡದೆ, ಶೀಘ್ರವೇ ಘೋಷಣೆ ಮಾಡಬೇಕು. ಹೀಗೆ ಮಾಡುವುದರಿಂದ ಅಭ್ಯರ್ಥಿಯ ಪರವಾಗಿ ಕ್ಷೇತ್ರಗಳಲ್ಲಿ ತಳಮಟ್ಟದಿಂದ ಪ್ರಚಾರ ಕೈಗೊಳ್ಳಲು ಮತ್ತು ಮತದಾರರನ್ನು ಸೆಳೆಯಲು ಸಾಧ್ಯವಾಗುತ್ತದೆ. ಬಹುಬೇಗ ಅಭ್ಯರ್ಥಿಯನ್ನು ಆಯ್ಕೆ ಮಾಡಿದಷ್ಟು ಯಾವುದೇ ಗೊಂದಲವಿಲ್ಲದೆ ಕೆಲಸ ಮಾಡಲು ಸಾಧ‍್ಯವಾಗುತ್ತದೆ. ಒಂದು ವೇಳೆ ಅಸಮಾಧಾನಗಳು ಕಂಡು ಬಂದರೂ ಅದನ್ನು ಶಮನಗೊಳಿಸಲು ಕಾಲಾವಕಾಶಗಳಿರುತ್ತವೆ. ಹೀಗೆ ಹತ್ತಾರು ಅಭಿಪ್ರಾಯಗಳನ್ನು ನಾಯಕರು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ನಾವಿಕನಿಲ್ಲದ ಹಡಗಾಗಿರುವ ರಾಜ್ಯ ಬಿಜೆಪಿ

ಒಂದೆಡೆ ಬಿಜೆಪಿ ರಾಜ್ಯದಲ್ಲಿ ವಿರೋಧಪಕ್ಷದ ನಾಯಕನನ್ನಾಗಲೀ, ರಾಜ್ಯಾಧ್ಯಕ್ಷರನ್ನಾಗಲೀ ಆಯ್ಕೆ ಮಾಡದೆ, ನಾವಿಕನಿಲ್ಲದ ಹಡಗಿನಂತೆ ಗಿರಕಿ ಹೊಡೆಯುತ್ತಿದ್ದು, ಅತ್ತ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೂ ಸೀಟು ಹಂಚಿಕೆ ಸಂಬಂಧ ಯಾವುದೇ ತೀರ್ಮಾನಕ್ಕೆ ಬಾರದೆ ಮೌನವಾಗಿರುವುದು ಮತ್ತು ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯತ್ತ ಆಸಕ್ತಿ ತೋರದೆ ಗಾಢ ನಿದ್ದೆಯಲ್ಲಿರುವ ಹೊತ್ತಿನಲ್ಲೇ ಕಾಂಗ್ರೆಸ್ ಆಕ್ಟೀವ್ ಮೂಡ್‌ನಲ್ಲಿರುವುದು ಹಾಲಿ ಸಂಸದರ ನಿದ್ದೆಗೆಡಿಸುವಂತೆ ಮಾಡಿದೆ. ಮುಂದೇನು? ಕಾದು ನೋಡಬೇಕಷ್ಟೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+