ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಪಣತೊಟ್ಟ ಸಿದ್ದರಾಮಯ್ಯ... ಹೇಗಿವೆ ತಂತ್ರಗಳು?

ಮೈಸೂರು, ಮಾರ್ಚ್ 26: ಈ ಬಾರಿಯ ಲೋಕಸಭಾ ಚುನಾವಣೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯಾಗಿದ್ದು, ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರು ಕ್ಷೇತ್ರವಾದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವುದು ಬಹುಮುಖ್ಯವಾಗಿದ್ದು, ಅದಕ್ಕಾಗಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಅವರು ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಾರದೆ ಹೋದರೆ ಪಕ್ಷದೊಳಗೆ ಮತ್ತು ವಿಪಕ್ಷಗಳ ಮುಂದೆ ಮುಜುಗರಕ್ಕೀಡಾಗಬೇಕಾದ ಸ್ಥಿತಿ ಸಿದ್ದರಾಮಯ್ಯನವರದ್ದಾಗಿದೆ. ಹೀಗಾಗಿಯೇ ಅವರು ಈ ಕ್ಷೇತ್ರದತ್ತ ಹೆಚ್ಚಿನ ನಿಗಾವಹಿಸಿದ್ದು, ಗೆಲುವಿಗಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಟಾರ್ಗೆಟ್ ನೀಡಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಮತಗಳನ್ನು ಸೆಳೆಯುವಂತೆಯೂ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.

Lok Sabha Election 2024 CM Siddaramaiah Get Ready On The Victory In Mysuru constituency

ಮೂರು ದಿನಗಳ ಕಾಲ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿರುವ ಅವರು ಮೇಲಿಂದ ಮೇಲೆ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆಯೂ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಮೈಸೂರಲ್ಲಿ ಲಾಭ ತರುತ್ತಾ ಆಪರೇಷನ್ ಹಸ್ತ?

ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಎರಡು ಪಕ್ಷಕ್ಕೆ ಶಾಕ್ ನೀಡುವ ಪ್ರಯತ್ನ ಮಾಡಿದ್ದು ಅದು ಸದ್ಯ ಫಲಿಸಿದಂತೆ ಗೋಚರಿಸಿದೆ. ಕೆ.ಆರ್.ಕ್ಷೇತ್ರದ ಮುಖಂಡರಾದ ಬಿಜೆಪಿಯ ಹೆಚ್.ವಿ.ರಾಜೀವ್, ಜೆಡಿಎಸ್ ನ ಕೆ.ವಿ.ಮಲ್ಲೇಶ್ ಹಾಗೆಯೇ ಬಿಜೆಪಿಯ ಸದಾನಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನ ಮಾಡಿದ್ದು, ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನ ಮಾಡಲಾಗಿದೆ.

Lok Sabha Election 2024 CM Siddaramaiah Get Ready On The Victory In Mysuru constituency

ಹಾಗೆನೋಡಿದರೆ ಈಗ ಬಿಜೆಪಿ ಮತ್ತು ಜೆಡಿಎಸ್ ತೊರೆಯುತ್ತಿರುವ ಮುಖಂಡರು ಕಾಂಗ್ರೆಸ್ ಗೆ ಸೇರುವುದರಿಂದ ಮಾತೃ ಪಕ್ಷಗಳಿಗೆ ಹೇಳಿಕೊಳ್ಳುವ ನಷ್ಟವೇನು ಆಗುವುದಿಲ್ಲ. ಈ ಎರಡು ನಾಯಕರು ಇದುವರೆಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೂ ಗೆಲುವನ್ನು ದಾಖಲಿಸಿಲ್ಲ. ಇವರ ಸೇರ್ಪಡೆಯಿಂದ ಒಂದಷ್ಟು ಬ್ರಾಹ್ಮಣ ಮತ್ತು ಲಿಂಗಾಯಿತ ಮತಗಳು ಕಾಂಗ್ರೆಸ್ ಗೆ ಬರಬಹುದು ಎಂಬ ಲೆಕ್ಕಾಚಾರ ಸಿಎಂ ಸಿದ್ದರಾಮಯ್ಯನವರದ್ದಾಗಿದೆ.

ಯದುವೀರ್ ವಿರುದ್ಧ ವೈಯಕ್ತಿಕ ಟೀಕೆ ಬೇಡ

ಜಿಲ್ಲೆಯ ಹಲವೆಡೆ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮೈಸೂರು ಜಿಲ್ಲಾ ಸಚಿವ ಉಸ್ತುವಾರಿ ಹೆಚ್.ಸಿ.ಮಹದೇವಪ್ಪ, ಚಾಮರಾಜನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಹುಣಸೂರು ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ. ಅವರು ಕೂಡ ಗೆಲುವಿಗೆ ಏನೆಲ್ಲ ಮಾಡಬೇಕು ಎಂಬುದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ.

Lok Sabha Election 2024 CM Siddaramaiah Get Ready On The Victory In Mysuru constituency

ಸದ್ಯ ಮೈಸೂರು ಕ್ಷೇತ್ರವನ್ನೇ ಹೆಚ್ಚು ಟಾರ್ಗೆಟ್ ಮಾಡಿರುವ ಸಿದ್ದರಾಮಯ್ಯ ಅವರು ಮೊದಲಿಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸೇರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರನ್ನು ಕಾಂಗ್ರೆಸ್ ನತ್ತ ಒಲವು ತೋರುವಂತೆ ಮಾಡಬೇಕು ಅವರಿಗೆ ಪಂಚಗ್ಯಾರಂಟಿ ಯೋಜನೆ ಬಗ್ಗೆ ಇನ್ನಷ್ಟು ಅರಿವು ಮೂಡಿಸಬೇಕು ಎಂಬಿತ್ಯಾದಿ ಸೂಚನೆ ನೀಡಿದ್ದಾರೆ. ಸ್ವತಃ ಮೈಸೂರು ಮಹಾರಾಜರ ವಂಶಸ್ಥರು ಎದುರಾಳಿಯಾಗಿ ಸ್ಪರ್ಧಿಸುತ್ತಿರುವುದರಿಂದ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡದಂತೆ, ಟೀಕೆ ಮಾಡುವುದಿದ್ದರೆ ಪಕ್ಷದ ವಿರುದ್ಧ ಟೀಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಈ ಸಮಯದಲ್ಲಿ ಯದುವೀರ್ ವಿರುದ್ಧ ಮಾತನಾಡಿದರೆ ಅದು ತಿರುಗುಬಾಣವಾಗುವ ಸಾಧ್ಯತೆಯಿರುವುದರಿಂದ ಆ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ

ಗೆಲ್ಲಿಸಲು ಯಾರಿಗೆ ಏನೇನು ಜವಬ್ದಾರಿ?

ಮೈಸೂರು-ಕೊಡಗು ಕ್ಷೇತ್ರದ ವ್ಯಾಪ್ತಿಗೆ ಸೇರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕ್ಷೇತ್ರಕ್ಕೊಂದು ರಣತಂತ್ರ ರೂಪಿಸಿದ್ದು, ಲೀಡ್ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಜತೆಗೆ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಈ ಮೂಲಕ ಒಕ್ಕಲಿಗ ಮತ ಕ್ರೂಢೀಕರಣದ ಪ್ಲಾನ್ ಹಾಕಿದ್ದಾರೆ. ಇದರ ಜೊತೆಗೆ ಅಹಿಂದ ಮತಗಳ ಕ್ರೂಢೀಕರಣ, ಪ್ರತಿ ಕ್ಷೇತ್ರದಲ್ಲಿ ಪ್ರಬಲ ಸಮುದಾಯ ಮುಖಂಡರಿಗೆ ಕ್ಷೇತ್ರವಾರು ಉಸ್ತುವಾರಿ ಕೊಡಲು ಯೋಜನೆ ರೂಪಿಸಿದ್ದಾರೆ.

ಈ ಬಾರಿ ಕ್ಷೇತ್ರವನ್ನು ಗೆಲ್ಲಲೇ ಬೇಕು. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತಗಳು ವಿಭಾಗ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡುವ ಮೂಲಕ ಪುತ್ರ ಯತೀಂದ್ರಗೆ ವರುಣಾ, ಹೆಚ್.ಡಿ.ಕೋಟೆ, ನಂಜನಗೂಡು ಭಾಗದ ಜವಾಬ್ದಾರಿ ವಹಿಸಿದ್ದರೆ, ಕೊಡಗು ಹಾಗೂ ಮೈಸೂರು ಗ್ರಾಮಾಂತರ ಭಾಗದ ಜವಾಬ್ದಾರಿಯನ್ನು ಸಚಿವ ಕೆ.ವೆಂಕಟೇಶ್ ಅವರಿಗೆ ನೀಡಲಾಗಿದೆ.

'ಕೈ' ಪ್ರಾಬಲ್ಯವಿದ್ದರೂ ಮೈಮರೆಯುವಂತಿಲ್ಲ

ಮೇಲ್ನೋಟಕ್ಕೆ ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿರುವ ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಗಮನಿಸಿದರೆ ಈ ಬಾರಿ ಮೈಸೂರು ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವು ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ. ಲೋಕಸಭಾ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಎರಡು, ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಆದರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಮತದಾರರು ಪ್ರತ್ಯೇಕವಾಗಿ ನೋಡುವುದರಿಂದ ಗೆಲುವು ಅಷ್ಟು ಸುಲಭವಲ್ಲ ಎಂಬುದು ಸಿದ್ದರಾಮಯ್ಯರವರಿಗೂ ಗೊತ್ತಿದೆ. ಹೀಗಾಗಿಯೇ ಅವರು ಕ್ಷೇತ್ರದತ್ತ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮುಂದೇನು ಎಂಬುದನ್ನು ಕಾದು ನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+