ರಾಮ ನೆಲೆನಿಂತ ಚುಂಚನಕಟ್ಟೆಯಲ್ಲೀಗ ಜಾನುವಾರು ಜಾತ್ರಾ ಸಂಭ್ರಮ: ಕ್ಷೇತ್ರದ ಮಹಿಮೆ ತಿಳಿಯಿರಿ
ಮೈಸೂರು, ಜನವರಿ 08: ರಾಮನ ಹೆಜ್ಜೆಗುರುತುಗಳು ದೇಶದಾದ್ಯಂತ ನೆಟ್ಟಿವೆ. ಆತ ಕಾಲಿಟ್ಟ ಸ್ಥಳಗಳೆಲ್ಲವೂ ಇವತ್ತಿಗೂ ಪವಿತ್ರ ಕ್ಷೇತ್ರಗಳಾಗಿ ಭಕ್ತರಿಂದ ಪೂಜಿಸಲ್ಪಡುತ್ತಿವೆ. ಇಂತಹ ಕ್ಷೇತ್ರಗಳ ಪೈಕಿ ಜಿಲ್ಲೆಯ ಕೆ.ಆರ್.ನಗರ ಬಳಿಯಿರುವ ಚುಂಚನಕಟ್ಟೆಯೂ ಒಂದಾಗಿದ್ದು, ಇಲ್ಲಿ ರಾಮ ನೆಲೆನಿಂತು ಭಕ್ತರಿಂದ ಪೂಜಿಸಲ್ಪಡುತ್ತಿದ್ದರೆ, ಇಲ್ಲಿ ನಡೆಯುವ ಜಾನುವಾರು ಜಾತ್ರೆ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದೆ.
ಕೊರೊನಾ ಮತ್ತು ಜಾನುವಾರುಗಳಿಗೆ ತಗುಲಿದ ಚರ್ಮಗಂಟು ರೋಗದ ಕಾರಣದಿಂದಾಗಿ ಕಳೆದ ಕೆಲವು ವರ್ಷಗಳಿಂದ ನಡೆಯದ ಚುಂಚನಕಟ್ಟೆ ಜಾನುವಾರು ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆಯುತ್ತಿರುವುದು ಜನಮನದಲ್ಲಿ ಸಂಭ್ರಮ ತಂದಿದೆ. ಈಗಾಗಲೇ ಆರಂಭವಾಗಿರುವ ಜಾತ್ರೆಯಲ್ಲಿ ಸುತ್ತಮುತ್ತಲಿನ ಊರುಗಳಲ್ಲದೆ ದೂರದೂರುಗಳಿಂದಲೂ ಜಾನುವಾರುಗಳು ಬಂದಿದ್ದು ಎಲ್ಲೆಂದರಲ್ಲಿ ದಷ್ಠಪುಷ್ಠ ಸುಂದರ ಎತ್ತುಗಳು ಕಂಡು ಬರುತ್ತಿದ್ದು, ಜಾನುವಾರು ಜಾತ್ರೆಗೆ ಶೋಭೆ ತಂದಿದೆ.

ಚುಂಚನಕಟ್ಟೆಯಲ್ಲಿ ನಡೆಯುವ ಜಾನುವಾರು ಜಾತ್ರೆ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದ್ದು, ಇದು ಬರೀ ಜಾನುವಾರು ಜಾತ್ರೆಯಾಗಿರದೆ ಗ್ರಾಮೀಣ ಸಂಸ್ಕೃತಿಯ ಭಾಗವಾಗಿ, ರೈತರು ಮತ್ತು ಖರೀದಿದಾರರ ನಡುವಿನ ಕೊಂಡಿಯಾಗಿ. ಗ್ರಾಮೀಣ ಜನರಿಗೆ ಸಡಗರ ಸಂಭ್ರಮದ ಹಬ್ಬವಾಗಿ ಗಮನಸೆಳೆಯುತ್ತಿದೆ. ಜಾತ್ರೆ ಎಂದರೆ ಜನಜಂಗುಳಿ, ಆಟ, ವ್ಯಾಪಾರ ವಹಿವಾಟು, ಖುಷಿ, ಸಂತಸ, ಸಂಭ್ರಮ ಹೀಗೆ ಎಲ್ಲವೂ ಇರುತ್ತದೆ. ಎಲ್ಲ ಜಾತ್ರೆಗಳಲ್ಲೂ ರೈತರಿಗೆ ಹೆಗಲುಕೊಟ್ಟು ದುಡಿಯುವ ಜಾನುವಾರು ಇರಲೇ ಬೇಕು. ಹೀಗಾಗಿ ಹೆಚ್ಚಿನ ಜಾತ್ರೆಗಳಲ್ಲಿ ಜಾನುವಾರುಗಳಿಗೆ ಸ್ಥಾನ ನೀಡಲಾಗುತ್ತಿತ್ತು.
ಜಾತ್ರಾ ಸಂಭ್ರಮದಲ್ಲಿ ಚುಂಚನಕಟ್ಟೆ ಜನ
ಕೆಲವು ಕಡೆ ಜಾನುವಾರುಗಳಿಗೆ ಆದ್ಯತೆ ನೀಡಿ ಪ್ರತ್ಯೇಕವಾಗಿ ಜಾತ್ರೆ ನಡೆಸಲಾಗುತ್ತಿದ್ದು, ಅದರಲ್ಲಿ ಚುಂಚನಕಟ್ಟೆಯ ಜಾನುವಾರು ಜಾತ್ರೆಯೂ ಒಂದಾಗಿದೆ. ಈ ಜಾತ್ರೆಯಲ್ಲಿ ಕೇವಲ ಜಾನುವಾರು ಮಾತ್ರವಿಲ್ಲದೆ ಪ್ರತಿಯೊಬ್ಬರ ಪ್ರೀತಿ, ವಿಶ್ವಾಸವಿದೆ. ಈ ಬಾರಿ ಜಾತ್ರೆಗೆ ಅದ್ಧೂರಿ ಆರಂಭ ನೀಡಲಾಗಿದೆ. ದೇಶಿ ತಳಿಯ ಗೋ ಸಂಪತ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅವುಗಳನ್ನು ಸಿಂಗರಿಸಿ, ಮೈಮೇಲೆ ರಂಗಿನ ಹೊದಿಕೆ ಹೊದಿಸಿ, ವಿದ್ಯುತ್ ಬೆಳಕಿನಲ್ಲಿ ನಗಾರಿ, ಮಂಗಳಕರವಾದ್ಯ, ಡ್ಯಾನ್ಸ್, ಸಿಡಿಮದ್ದುಗಳೊಂದಿಗೆ ಮೆರವಣಿಗೆ ನಡೆಸಿ ಸಂಭ್ರಮಿಸಲಾಗಿದೆ.

ಇನ್ನು ಬಹಳ ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿರುವುದರಿಂದ ಊರಿಗೆ ಊರೇ ಸಂಭ್ರಮಿಸುತ್ತಿದೆ. ಜಾತ್ರೆಗೆ ರೈತರು ಮಂಡ್ಯ, ಹಾಸನ, ಚರಮರಾಜನಗರ, ಚಿಕ್ಕಮಗಳೂರು, ರಾಮನಗರ, ಮಾಗಡಿ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಜಾನುವಾರುಗಳನ್ನು ಕರೆತಂದಿದ್ದು, ಜಾತ್ರೆಯಲ್ಲಿ ಹಳ್ಳಿಕಾರ್ ಎತ್ತುಗಳು ಆಕರ್ಷಿಸುತ್ತಿದ್ದು, ಎತ್ತುಗಳ ಬೆಲೆ ಸುಮಾರು 50 ಸಾವಿರದಿಂದ 3 ಲಕ್ಷದವರೆಗೂ ಬೆಲೆ ಬಾಳುತ್ತಿವೆ.
ಹೊರ ರಾಜ್ಯಗಳಿಂದ ಆಗಮಿಸಿದ ಖರೀದಿದಾರರು
ಜಾನುವಾರು ಜಾತ್ರೆಗೆ ಜಾನುವಾರುಗಳನ್ನು ಖರೀದಿಸಲು ದೂರದ ಗದಗ, ಹುಬ್ಬಳ್ಳಿ ಧಾರವಾಡ, ಗುಲ್ಬರ್ಗ ವಿಜಯಪುರ, ದಾವಣಗೆರೆ ಜಿಲ್ಲೆಗಳಲ್ಲದೆ ದೂರದ ಆಂಧ್ರಪ್ರದೇಶ, ಮಹಾರಾಷ್ಟ್ರ ತಮಿಳುನಾಡು, ಕೇರಳ, ರಾಜ್ಯದಿಂದಲೂ ವ್ಯಾಪಾರಸ್ಥರು ಆಗಮಿಸಿ ಬೀಡು ಬಿಟ್ಟಿದ್ದಾರೆ. ಜಾತ್ರೆಯಲ್ಲಿ ಜಾನುವಾರುಗಳ ಅಲಂಕಾರಿಕ ವಸ್ತುಗಳು, ಸಿಹಿತಿಂಡಿ, ಸಂಚಾರಿ ಹೋಟೆಲ್, ತಂಪು ಪಾನೀಯ ಸೇರಿದಂತೆ ಹತ್ತು ಹಲವು ಅಂಗಡಿಗಳನ್ನು ತೆರೆಯಲಾಗಿದ್ದು, ವ್ಯಾಪಾರ ವಹಿವಾಟುಗಳು ಕೂಡ ಜೋರಾಗಿದೆ.

ಆಧುನಿಕತೆಯ ನಾಗಾಲೋಟದಲ್ಲಿ ಬಹುತೇಕ ಕೆಲಸ ಕಾರ್ಯಗಳಲ್ಲಿ ಯಂತ್ರಗಳು ಸೇರ್ಪಡೆಗೊಂಡಿವೆ. ಎತ್ತುಗಳು ಮಾಡುತ್ತಿದ್ದ ಉಳುಮೆ ಸೇರಿದಂತೆ ಹೆಚ್ಚಿನ ಕೆಲಸಗಳನ್ನು ಯಂತ್ರದಿಂದ ಮಾಡುತ್ತಿದ್ದು, ಎತ್ತುಗಳ ಬಳಕೆ ಕಡಿಮೆಯಾಗುತ್ತಿವೆ. ಆದರೂ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಸಂತಸದ ಸಂಗತಿಯಾಗಿದೆ. ಆ ಮೂಲಕ ನಮ್ಮ ಸಂಸ್ಕೃತಿಯ ರಂಗು ಚೆಲ್ಲುತ್ತಿದೆ.
ಚುಂಚನಕಟ್ಟೆಯಲ್ಲಿ ರಾಮನೇ ಆರಾಧ್ಯ ದೈವ
ಇದೆಲ್ಲದರ ನಡುವೆ ಜಾತ್ರೆ ನಡೆಯುತ್ತಿರುವ ಚುಂಚನಕಟ್ಟೆ ಬಗ್ಗೆಯೂ ಒಂದಿಷ್ಟು ಮಾಹಿತಿ ನೀಡಲೇ ಬೇಕಾಗುತ್ತದೆ. ಪುರಾಣ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಚುಂಚನಕಟ್ಟೆಯಲ್ಲಿ ರಾಮನೇ ಆರಾಧ್ಯ ದೈವನಾಗಿದ್ದಾನೆ. ಕಾವೇರಿ ನದಿ ದಡದಲ್ಲಿರುವ ಚುಂಚನಕಟ್ಟೆ ಯಾತ್ರಾ ಸ್ಥಳ ಮತ್ತು ಪ್ರವಾಸಿ ತಾಣವೂ ಆಗಿದೆ. ಇಲ್ಲಿಗೆ ಬರುವ ಭಕ್ತರು ಇಲ್ಲಿನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಹಿಂತಿರುಗುತ್ತಾರೆ. ಕ್ಷೇತ್ರದ ಮಹಿಮೆ ಏನೆಂದರೆ ಹಿಂದಿನ ಕಾಲದಲ್ಲಿ ಈ ಕ್ಷೇತ್ರವು ದಟ್ಟ ಕಾಡಿನಿಂದ ಕೂಡಿದ ಅರಣ್ಯವಾಗಿತ್ತಂತೆ. ಇದನ್ನು ದಂಡಕಾರಣ್ಯವೆಂದು ಕರೆಯಲಾಗುತ್ತಿತ್ತಂತೆ.

ಒಮ್ಮೆ ಇಲ್ಲಿಗೆ ಆಗಮಿಸಿದ ತೃಣಬಿಂಧು ಮಹರ್ಷಿಗಳು ಈ ಸ್ಥ್ಳವನ್ನು ನೋಡಿ ತಮ್ಮ ತಪಸ್ಸಿಗೆ ಇದು ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಆದರೆ ತಪಸ್ಸು ಮಾಡುವ ಮುನ್ನ ಸ್ನಾನ, ಜಪ ಮಾಡಲು ನದಿ ಅವಶ್ಯಕತೆಯಿರುವುದರಿಂದ ಅವರು ನದಿಗಾಗಿ ಹುಡುಕಾಡುತ್ತಾರೆ. ಈ ವೇಳೆ ಅವರಿಗೆ ಅಲ್ಲಿಯೇ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ನದಿ ಕಾಣಿಸುವುದಿಲ್ಲ. ಹೀಗಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾರೆ. ಅವರ ತಪಸ್ಸಿಗೆ ಒಲಿದ ನಾರಾಯಣ ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿಯನ್ನು ತೋರಿಸುತ್ತಾರೆ. ಅಷ್ಟೇ ಅಲ್ಲದೆ ತ್ರೇತಾಯುಗದಲ್ಲಿ ರಾಮನ ಅವತಾರವೆತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಮಾತು ನೀಡುತ್ತಾನೆ.
ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಧನುಷ್ಕೋಟಿ
ಕಾಲಾಂತರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣರಾದಿಯಾಗಿ ಸೇನೆಯು ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ಹಿಂತಿರುಗುವಾಗಿ ಈ ಕ್ಷೇತ್ರಕ್ಕೆ ಬಂದಿದ್ದರೆಂದೂ ಈ ವೇಳೆ ಲಕ್ಷ್ಮಣನಿಗೆ ರಾಮ ಬಂಡೆಯನ್ನು ಒಡೆಯಲು ಹೇಳುತ್ತಾನೆ. ಲಕ್ಷ್ಮಣ ಹೊಡೆದ ಬಾಣಕ್ಕೆ ಬಂಡೆ ಚೂರಾಗಿ ಒಡೆದು ಕಾವೇರಿ ಉಕ್ಕಿ ಹರಿಯುತ್ತಾಳೆ.
ಇಲ್ಲಿನ ವಿಶೇಷತೆ ಏನೆಂದರೆ ರಾಮದೇವರ ದೇವಾಲಯದ ಗರ್ಭಗುಡಿಯಲ್ಲಿ ಕಾವೇರಿ ಭೋರ್ಗರೆಯುವ ಶಬ್ದ ಕೇಳಿಸುವುದಿಲ್ಲ. ಇನ್ನು ಲಕ್ಷ್ಮಣ ಬಾಣ ಬಿಟ್ಟ ಸ್ಥಳದಲ್ಲಿ ಜಲಪಾತ ಸೃಷ್ಟಿಯಾಗಿದ್ದು, ಅದುವೇ ಧನುಷ್ಕೋಟಿಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ರಾಮ ಚುಂಚನಕಟ್ಟೆಗೂ ಬಂದಿದ್ದ ಆತನಿಂದ ಕ್ಷೇತ್ರ ಪಾವನವಾಗಿದೆ ಎನ್ನುವುದಲ್ಲದೆ, ಇಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಾ ಬಂದಿರುವುದು ಖುಷಿಪಡುವ ವಿಷಯವಾಗಿದೆ.












Click it and Unblock the Notifications