ಮೈಸೂರಿನ ಲಿಂಗಾಂಬುಧಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ, ಹಲವು ಅನುಮಾನಗಳು ವ್ಯಕ್ತ
ಮೈಸೂರು, ಆಗಸ್ಟ್, 30: ನಗರದ ಲಿಂಗಾಂಬುಧಿ ಕೆರೆಯಲ್ಲಿ ಸಾವಿರಾರು ಮೀನುಗಳು ಮಾರಣ ಹೋಮ ನಡೆದಿದೆ. ಇದಕ್ಕೆ ಕಾರಣಗಳು ತಕ್ಷಣಕ್ಕೆ ಗೊತ್ತಾಗದ ಹಿನ್ನೆಲೆಯಲ್ಲಿ ಜನ ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಈ ಕೆರೆಯಲ್ಲಿ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಮೀನುಗಳು ಮೃತಪಟ್ಟಿರುವುದು ಆತಂಕವನ್ನು ಸೃಷ್ಟಿಸಿದೆ. ಸದ್ಯಕ್ಕೆ ಮೀನುಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಂಗಳವಾರ ಕೆರೆಗೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ನೀರಿನ ಮಾದರಿ ಸಂಗ್ರಹಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳಿಸಿದ್ದಲ್ಲದೆ, ಸತ್ತ ಕೆಲ ಮೀನುಗಳನ್ನು ಮಂಗಳೂರಿನ ಮೀನುಗಾರಿಕೆ ಕಾಲೇಜಿಗೂ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿಯಿಂದ ಮೀನುಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆರೆಯಲ್ಲಿದ್ದ ಮೀನುಗಳು ಏಕಾಏಕಿ ಸಾವನ್ನಪ್ಪಿದ್ದು ಕೆರೆ ನೀರು ಕಲುಷಿತಗೊಂಡಿದ್ದರಿಂದಲೋ ಅಥವಾ ಯಾರಾದರೂ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕೆರೆಗೆ ವಿಷ ಹಾಕಿದ್ದರಿಂದ ಮೀನುಗಳ ಮಾರಣ ಹೋಮ ನಡೆದಿದೆಯಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ.
ಮತ್ತೊಂದೆಡೆ ನೀರು ಕಡಿಮೆಯಾಗಿರುವುದರಿಂದ ಆಮ್ಲಜನಕ ಕೊರತೆ ಮತ್ತು ನೀರು ಕಲುಷಿತಗೊಂಡ ಕಾರಣ ಮೀನುಗಳು ಸತ್ತಿರಬಹುದು ಎಂಬ ಸಂಶಯಗಳು ವ್ಯಕ್ತವಾಗುತ್ತಿದೆ. ಆದರೆ ಸಾವಿರಾರು ಮೀನುಗಳು ಸತ್ತ ಕಾರಣ ಸುತ್ತಮುತ್ತ ಭಾರೀ ದುರ್ನಾತ ಬೀರುತ್ತಿದ್ದು, ಜನ ಮೂಗು ಮುಚ್ಚಿಕೊಂಡು ಅಡ್ಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳಿಂದ ಕೆರೆಯ ಪರಿಶೀಲನೆ
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಡಿಸಿಎಫ್ ಡಾ.ಕೆ.ಎನ್.ಬಸವರಾಜ, ಎಸಿಎಫ್ ಎಸ್.ಲಕ್ಷ್ಮೀಕಾಂತ್, ಆರ್‌ಎಫ್‌ಒ ಸುರೇಂದ್ರ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕೆರೆಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸತ್ತ ಮೀನುಗಳನ್ನು ಕೆರೆಯಿಂದ ಹೊರ ತೆಗಿಸಿ ಹೂಳುವಂತೆ ಸೂಚಿಸಿದ್ದಾರೆ.
ಇನ್ನು ಕೆರೆಯಲ್ಲಿ ಕಲುಷಿತ ನೀರು ಸೇರ್ಪಡೆ ಹಾಗೂ ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಮೀನುಗಳು ಸತ್ತು ತೇಲುತ್ತಿರಬಹುದು. ಮೀನುಗಾರಿಕೆ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ಆಗಸ್ಟ್ 27ರಂದು ಮೈಸೂರಿನ ವ್ಯಾಪ್ತಿಯ ಬೆಳವಾಡಿ, ವಿಜಯನಗರ, ದಟ್ಟಗಳ್ಳಿ ಹಾಗೂ ಬೋಗಾದಿ ಪ್ರದೇಶಗಳಲ್ಲಿ ಮಳೆಯಾಗಿದ್ದು, ಅಲ್ಲಿಂದ ರಾಜಕಾಲುವೆಗಳಿಂದ ನೀರು ಹರಿದು ಬಂದಿದ್ದು, ಕೆರೆ ನೀರಿನ ಉಷ್ಣತೆ ಹಾಗೂ ಆಮ್ಲಜನಕದಲ್ಲಿ ವ್ಯತ್ಯಾಸದಿಂದ ಬಹುತೇಕ ದೊಡ್ಡ ಮೀನುಗಳು ಸಾವನ್ನಪ್ಪಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಡಿಸಿಎಫ್ ಡಾ.ಕೆ.ಎನ್.ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆತಂಕ ತಂದ ಮೀನುಗಳ ಮಾರಣಹೋಮ
ಹಾಗೆನೋಡಿದರೆ ಸುಮಾರು 50 ಹೆಕ್ಟೇರ್ ವಿಸ್ತೀರ್ಣದ ಕೆರೆಯಲ್ಲಿ ಹಲವು ವರ್ಷಗಳಿಂದ ಮೀನುಗಾರಿಕೆ ನಡೆಯುತ್ತಿದೆ. ಅಗತ್ಯಕ್ಕಿಂತ ಹೆಚ್ಚು ಮೀನುಗಳ ಸಾಕಣೆ, ಶುಚಿತ್ವದ ಕೊರತೆ ಮೀನುಗಳ ಸಾವಿಗೆ ಕಾರಣ ಎಂದು ಸ್ಥಳೀಯರು ನಾನಾ ರೀತಿಯ ಕಾರಣಗಳನ್ನು ಹೇಳುತ್ತಿದ್ದಾರೆ. ಇನ್ನೂ ಕೆಲವರು, ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣಾಂಶ ಏರಿಕೆಯಾಗಿರುವುದು ಮೀನುಗಳು ಸಾಯಲು ಕಾರಣವಾಗಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಇದೆಲ್ಲದರ ನಡುವೆ ಮೀನುಗಳ ಮಾರಣ ಹೋಮದ ಜೊತೆಗೆ ಕೆರೆ ನೀರು ವಿಷವಾಗಿ ಪರಿವರ್ತನೆಯಾಗಿದೆ. ನೀರಿನಲ್ಲಿ ಮೃತಪಟ್ಟಿರುವ ಸಾವಿರಾರು ಮೀನುಗಳು ನೀರಿನಲ್ಲಿ ಕೊಳೆತು ಕೆರೆಯ ನೀರು ಮತ್ತಷ್ಟು ವಿಷವಾಗುವ ಸಾಧ್ಯತೆ ಇದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳನ್ನೊಳಗೊಂಡಂತೆ ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಲಿಂಗಾಂಬುಧಿ ಕೆರೆಯಲ್ಲಿ ಮೀನುಗಳು ಇದ್ದಕ್ಕಿದ್ದಂತೆಯೇ ಸಾವನ್ನಪ್ಪಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿರುವುದಂತೂ ನಿಜ.












Click it and Unblock the Notifications