ಮೈಸೂರಿನಲ್ಲಿ ನಾಯಿ ಕದ್ದೊಯ್ಯುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ಮೈಸೂರು, ನವೆಂಬರ್ 20: ನಗರದ ಬೆಮೆಲ್ ಲೇಔಟಿನ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಕಳೆದ ಒಂದು ವಾರದಿಂದಲೂ ನಾಯಿಗಳನ್ನು ಹೊತ್ತೊಯ್ದು ಇಲ್ಲಿನ ನಿವಾಸಿಗಳಿಗೆ ಆಗಾಗ್ಗೆ ಕಾಣಿಸಿಕೊಂಡಿದ್ದ ಚಿರತೆ ಜನರಲ್ಲಿ ಆತಂಕ ಸೃಷ್ಟಿಸಿತ್ತು.
ಮಂಗಳವಾರ ರಾತ್ರಿ ಬೆಮೆಲ್ ಕಾರ್ಖಾನೆಯ ಆವರಣದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುವುದಾಗಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ದೇವರಾಜು ತಿಳಿಸಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಸುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ವಾರದಿಂದಲೂ ಬೋನನ್ನು ಇರಿಸಿ ಅದಕ್ಕೆ ನಾಯಿಯನ್ನು ಕಟ್ಟಿ ಕಾಯುತ್ತಿದ್ದರು.

ನಿನ್ನೆ ರಾತ್ರಿ ಸಮಯದಲ್ಲಿ ನಾಯಿಯನ್ನು ಹೊತ್ತೊಯ್ಯಲು ಬಂದ ಚಿರತೆ ರಾತ್ರಿ ಸುಮಾರು 2.30 ಗಂಟೆಯಲ್ಲಿ ಸೆರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆರೆ ಹಿಡಿಯಲಾದ ಗಂಡು ಚಿರತೆ 4 ವರ್ಷದ್ದಾಗಿದ್ದು, ಅದನ್ನು ಹಿಡಿದು ನಾಗರಹೊಳೆ ಅಭಯಾರಣ್ಯಕ್ಕೆ ಇಂದು ಬಿಡಲಾಯಿತು.












Click it and Unblock the Notifications