ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ್ಮಣತೀರ್ಥ ನದಿ ನೀರು ಕುಡಿದವರಿಗೆ ದೇವ್ರೇ ಗತಿ

ಮೈಸೂರು ಜಿಲ್ಲೆ ಹುಣಸೂರಿನ ಲಕ್ಷ್ಮಣ ತೀರ್ಥ ನದಿಯ ನೀರಲ್ಲಿ ಕಲ್ಮಶ ಸೇರಿ ಕುಡಿಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ನದಿಯ ದುಃಸ್ಥಿತಿಯ ಬಗ್ಗೆ ವಿವರವಾದ ವರದಿಯಿದು.

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಏಪ್ರಿಲ್ 24: ಮೇಲ್ನೋಟಕ್ಕೆ ಅಚ್ಚ ಹಸಿರಿನಿಂದ ಕಂಗೊಳಿಸುವ ಮೈದಾನದಂತೆ ಕಾಣುವ ಈ ದೃಶ್ಯ ಹುಣಸೂರು ಪಟ್ಟಣದ ಮೂಲಕ ಹಾದು ಹೋಗುವ ಲಕ್ಷ್ಮಣ ತೀರ್ಥ ನದಿಯ ದುಃಸ್ಥಿತಿ ಎಂದರೆ ಅಚ್ಚರಿಯಾಗುತ್ತದೆ. ಅಷ್ಟೇ ಅಲ್ಲ, ಸಣ್ಣದೊಂದು ಆತಂಕವೂ ಶುರುವಾಗುತ್ತದೆ.

ತ್ಯಾಜ್ಯ, ಪಾಚಿ, ಜೊಂಡು ಹುಲ್ಲು, ಜಲಸಸ್ಯಗಳಿಂದ ಕೂಡಿರುವ ಕಲುಷಿತ ನೀರನ್ನು ಅದೆಷ್ಟೋ ಮಂದಿ ಬಳಸುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆಯೂ ಪ್ರಶ್ನೆಗಳೇಳುತ್ತಿವೆ. ಕೊಡಗಿನ ಇರ್ಪುನಲ್ಲಿ ಜಲಧಾರೆಯಾಗಿ ಹರಿದು ಬರುವ ಲಕ್ಷ್ಮಣ ತೀರ್ಥ ನದಿ ಇದೇನಾ ಎಂಬ ಎಂದು ಹುಣಸೂರು ಪಟ್ಟಣದ ಹೃದಯ ಭಾಗದಲ್ಲಿ ಹರಿದು ಹೋಗುವ ನದಿಯನ್ನು ನೋಡಿದರೆ ಖಂಡಿತಾ ಅಚ್ಚರಿ ಆಗುತ್ತದೆ.[ಕಿಡಿಗೇಡಿಗಳ ಕೃತ್ಯಕ್ಕೆ ಕಣ್ಣೀರಿಡುತ್ತಿದ್ದಾಳೆ ಸುಳ್ಯದ ಜೀವನದಿ ಪಯಸ್ವಿನಿ]

Lakshamana Teertha

ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆಯೇ ಲಕ್ಷ್ಮಣತೀರ್ಥ ನದಿ ಹುಣಸೂರು ಪಟ್ಟಣದಲ್ಲಿ ಹಸಿರಾಗುವುದು ಹೊಸತೇನಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅದರ ವ್ಯಾಪ್ತಿ ಹೆಚ್ಚಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ನದಿಯಲ್ಲಿದ್ದ ಕೊಳಚೆ, ಪಾಚಿ ಇನ್ನಿತರ ಎಲ್ಲ ಕಲ್ಮಶಗಳು ಹರಿದು ಹೋಗಿ ನದಿ ಸ್ವಚ್ಛವಾಗಿ ಬಿಡುತ್ತಿತ್ತು.

ಆದರೆ, ಅದ್ಯಾಕೋ ಕಳೆದ ಬಾರಿ ಪ್ರವಾಹ ಸೃಷ್ಟಿಸುವ ಮಳೆ ಬರಲಿಲ್ಲ. ಪರಿಣಾಮ ಲಕ್ಷ್ಮಣತೀರ್ಥ ಶುದ್ಧವಾಗಿಲ್ಲ. ಅದರ ಪರಿಣಾಮ ಈ ಬಾರಿ ದಡದಿಂದ ಆರಂಭವಾಗಿ ನದಿಯನ್ನೇ ಸತ್ತೆ, ಜೊಂಡು ಹುಲ್ಲು, ಪಾಚಿ ಆವರಿಸಿ ಹಸಿರು ಕ್ರಾಂತಿ ಸೃಷ್ಟಿಯಾದಂತೆ ಭಾಸವಾಗುತ್ತಿದೆ.[ಕಪಿಲ ನದಿಯಲ್ಲಿ ಸಿಕ್ಕಿದ್ದು ಮೂರು ಟ್ರ್ಯಾಕ್ಟರ್ ತ್ಯಾಜ್ಯ]

ಇರ್ಪುನಲ್ಲಿ ಈ ನದಿಯ ನೀರನ್ನು ಪವಿತ್ರ ಜೀವಜಲ ಎಂದು ಸೇವಿಸಲಾಗುತ್ತದೆ. ಅದೇ ನದಿ ನಾಗರಹೊಳೆ ಅಭಯಾರಣ್ಯದ ಮೂಲಕ ಹರಿದು ಸುಮಾರು 75 ಕಿ.ಮೀ ಹಾದು ಬಂದು ಹುಣಸೂರು ತಲುಪುವ ವೇಳೆಗೆ ಸಂಪೂರ್ಣ ಕಲ್ಮಶವಾಗಿ ಬಿಡುತ್ತದೆ. ನದಿಯನ್ನೊಮ್ಮೆ ನೋಡಿದರೆ ಕುಡಿಯುವುದಕ್ಕೆ ಅಸಹ್ಯವಾಗುತ್ತದೆ.

Lakshamana Teertha

ಹುಣಸೂರು ಪಟ್ಟಣದ ತ್ಯಾಜ್ಯ ಈ ನದಿಯನ್ನು ಸೇರುತ್ತಿದೆ. ಜತೆಗೆ ಸಿಕ್ಕಿದ್ದನ್ನೆಲ್ಲ ನದಿಗೆ ಎಸೆದು ತೆಪ್ಪಗೆ ಕೈಕಟ್ಟಿ ಕೂರುವ ಮಂದಿಗೂ ಕೊರತೆಯಿಲ್ಲ. ಆದರೆ ಈ ನದಿಯನ್ನೇ ನಂಬಿ ಹಲವರು ಬದುಕುತ್ತಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚಿನ ಹಳ್ಳಿಗಳು ಇದೇ ನೀರನ್ನು ಬಳಸುತ್ತಿವೆ.

ಹುಣಸೂರು ಪಟ್ಟಣದಲ್ಲಿ ಸಮತಟ್ಟಾಗಿ, ನಿಧಾನವಾಗಿ ಹರಿಯುವ ಕಾರಣ ನದಿಯಲ್ಲಿ ಕೊಳಚೆ, ತ್ಯಾಜ್ಯಗಳೆಲ್ಲವೂ ಸಂಗ್ರಹವಾಗುತ್ತಿದ್ದು, ಇದನ್ನು ವ್ಯಾಪಿಸಿಕೊಂಡು ಪಾಚಿ ಸೇರಿದಂತೆ ಇತರೆ ಜಲ ಸಸ್ಯಗಳು ಹುಲುಸಾಗಿ ಬೆಳೆಯುತ್ತಾ ಇದೊಂದು ನದಿ ಎಂಬ ಕಲ್ಪನೆ ಬಾರದಂತೆ ಮಾಡಿವೆ.

ಜಿಲ್ಲಾಡಳಿತವಾಗಲೀ ತಾಲೂಕು ಆಡಳಿತವಾಗಲೀ ಸಂಬಂಧಿಸಿದ ಜನಪ್ರತಿನಿಧಿಗಳಾಗಲೀ ಮನಸ್ಸು ಮಾಡಿದರೆ ಗಬ್ಬೆದ್ದು ನಾರುತ್ತಿರುವ ಲಕ್ಷ್ಮಣತೀರ್ಥ ನದಿಯನ್ನು ಸ್ವಚ್ಛಗೊಳಿಸಬಹುದು. ಆದರೆ ಇದು ಪ್ರತಿ ವರ್ಷ ಇದ್ದದ್ದೇ, ಮಳೆಗಾಲದಲ್ಲಿ ಸರಿ ಹೋಗುತ್ತದೆ ಎಂಬ ಅಭಿಪ್ರಾಯ ಮೂಡಿರುವುದರಿಂದ ಯಾರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.[ತುಂಬಿ ಹರಿವ ಲಕ್ಷ್ಮಣತೀರ್ಥವನ್ನು ನೋಡುವುದೇ ಆನಂದ]

ಪಟ್ಟಣದಿಂದ ಹರಿದು ಬರುವ ತ್ಯಾಜ್ಯವು ನೀರನ್ನು ತಡೆದು, ನದಿಯನ್ನು ಆವರಿಸಿರುವ ಜಲಸಸ್ಯಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಲಕ್ಷ್ಮಣ ತೀರ್ಥ ನದಿಗೆ ಮರುಹುಟ್ಟು ನೀಡಬಹುದು. ಆದರೆ ಸದ್ಯಕ್ಕೆ ಆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದರ ಪರಿಣಾಮವೇ ಗಬ್ಬೆದ್ದು ನಾರುತ್ತಾ ಅಸಹ್ಯ ಹುಟ್ಟಿಸುತ್ತಿದೆ.

ಇನ್ನು ಮುಂದೆಯಾದರೂ ಪರಿಸರದ ಬಗ್ಗೆ ಕಾಳಜಿಯಿರುವ ಮಂದಿ ಇದರತ್ತ ಗಮನಹರಿಸಿ, ಲಕ್ಷ್ಮಣತೀರ್ಥ ನದಿಗೆ ಕೊಳಚೆಯಿಂದ ಮುಕ್ತಿ ತೋರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

English summary
Lakshamana Teertha river in Hunsur taluk, Mysuru district contaminated by garbage. Immediate action has to take to clean the river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X