ಭಾರತೀಯ ವಾಯುಪಡೆ ಸೇರಿದ KSRTC ಬಸ್ ಡ್ರೈವರ್ ಮಗ
ಮೈಸೂರು, ಜುಲೈ 16: ತಂದೆ ಕೆಎಸ್‌ಆರ್‌ಟಿಸಿಯಲ್ಲಿ ಬಸ್ ಚಾಲಕ. ಆದರೆ, ಮಗನ ಕನಸು ಗಗನದಲ್ಲಿ ಹಾರಾಡಬೇಕೆಂಬುದಾಗಿತ್ತು. ಇದೀಗ ತಾನೂ ಅಂದುಕೊಂಡ ಕನಸನ್ನು ನನಸು ಮಾಡಿಕೊಂಡಿರುವ ಆ ಯುವಕ ಇದೀಗ ಭಾರತೀಯ ವಾಯುಪಡೆ ತರಬೇತಿ ಮುಗಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೈಸೂರಿನ ಬನ್ನಿಮಂಟಪದ ನಿವಾಸಿಯಾದ ಮಂಜುನಾಥ್ ಹಾಗೂ ಶಾರದಮ್ಮ ದಂಪತಿಯ ಪುತ್ರನಾದ ಪ್ರಶಾಂತ್ ಸದ್ಯ ಹೈದರಾಬಾದ್‌ನಲ್ಲಿರುವ ಇಂಡಿಯನ್ ಏರ್ಸ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಇದೀಗ ಜು.4ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಪ್ರಶಾಂತ್ ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಪಂಜಾಬಿನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾನಿಲಯದಲ್ಲಿ ಎಂ.ಟೆಕ್ ಪದವಿ ಗಳಿಸಿದ್ದಾರೆ. ಮೈಸೂರಿನ 2 ಎಎಫ್‌ಎಸ್‌ಬಿಯಿಂದ ಇಂಡಿಯನ್ ಏರ್‌ಪೋರ್ಸ್‌ಗೆ ಎಂಇಟಿ (ಮೀಟರಾಲಜಿ) ಅಧಿಕಾರಿಯಾಗಿ ನೇಮಕಗೊಳ್ಳುವಲ್ಲಿ ತಮ್ಮ ಆರನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ವಾಯಪಡೆ ಸಂದರ್ಶನ ಇದ್ದಾಗ ತಾಯಿ ಕ್ಯಾನ್ಸರ್‌ಗೆ ತುತ್ತಾಗಿ ನಿಧನರಾದರು. ಆ ನೋವಿನಲ್ಲೂ ಗುರಿ ಕಡೆ ವಿಮುಖರಾಗದೆ ಅಮ್ಮನ ಆಸೆ ಈಡೇರಿಸಲು ನಿರ್ಧರಿಸಿದ ಪ್ರಶಾಂತ್ ಇದೀಗ ಪ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಸದ್ಯ ಕರ್ನಾಟಕದಿಂದ ಇವರ ಬ್ರಾಂಚ್‌ನಲ್ಲಿ ಆಯ್ಕೆಯಾದ ಏಕೈಕ ಅಭ್ಯರ್ಥಿ ಎಂದರೆ ಅದು ಪ್ರಶಾಂತ್. ಸದ್ಯ ವಿಮಾನಯಾನದ ಹವಾಮಾನ ವರದಿ ವಿಭಾಗದಲ್ಲಿ ಪ್ರಶಾಂತ್ ಕೆಲಸ ಮಾಡಲಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಆರನೇ ಬಾರಿಗೆ ಸಿಕ್ಕ ಯಶಸ್ಸು
"ನನ್ನ ಪ್ರಯತ್ನಕ್ಕೆ ಮೊದಲು ಸಿಕ್ಕಿದ್ದು ಬರೀ ಸೋಲು. ಆದರೂ ಛಲಬಿಡಲಿಲ್ಲ. ಈ ನಡುವೆ ಅಮ್ಮ ಕ್ಯಾನ್ಸರ್‌ನಿಂದ ಮೃತಪಟ್ಟರು. ಆ ನೋವಿನಲ್ಲೇ ಆರನೇ ಬಾರಿ ಸಂದರ್ಶನ ಎದುರಿಸಿದೆ. ಆಗ ಶಾರ್ಟ್ ಲೀಸ್ಟ್ ಆದ 40 ಮಂದಿಯಲ್ಲಿ ನಾನು ಇದ್ದೆ. ಇದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ಅಂತಿಮವಾಗಿ ನಿರಂತರ ಅಭ್ಯಾಸದ ಫಲವಾಗಿ ನನ್ನ ಕನಸಿನ ಕ್ಷೇತ್ರವಾದ ಭಾರತೀಯ ವಾಯುಪಡೆಗೆ ಆಯ್ಕೆಯಾದೆ" ಎಂದು ಮೈಸೂರಿನ ಎಂ.ಟೆಕ್ ಪದವೀಧರ ಎಂ.ಪ್ರಶಾಂತ್ ತಮ್ಮ ಹಿಂದಿನ ದಿನಗಳನ್ನು ವಿವರಿಸುತ್ತಾರೆ.

ತಾಯಿ ನಿಧನದ ನೋವಿನಲ್ಲೂ ಸಾಧನೆ
ಪ್ರಶಾಂತ್‌ರದ್ದು ಮಧ್ಯಮ ವರ್ಗದ ಕುಟುಂಬ. ಅಪ್ಪ ಕೆಎಸ್‌ಆರ್‌ಟಿಸಿ ಬಸ್ ಡೈವರ್ ಆಗಿದ್ದು, ಇದೀಗ ನಿವೃತ್ತರಾಗಿದ್ದಾರೆ. ಸಂದರ್ಶನಕ್ಕೂ ಎರಡು ತಿಂಗಳು ಮುಂಚೆ ಅಮ್ಮ ಶ್ವಾಸಕೋಶ ಕ್ಯಾನ್ಸರ್‌ನಿಂದ ನಿಧನರಾದರು. ಈ ನೋವಿನಲ್ಲೂ ಪ್ರಶಾಂತ್ ತಮ್ಮ ಗುರಿಯೆಡೆಗಿನ ನಡೆ ನಿಲ್ಲಿಸಲಿಲ್ಲ, ಪ್ರಶಾಂತ್ ಕ್ರಿಕೆಟ್ ಟೇಬಲ್ ಟೆನ್ನಿಸ್ ಹಾಗೂ ಬೇಸ್ ಬಾಲ್‌ನಲ್ಲಿ ವಿವಿ ಮಟ್ಟದ ನಾನಾ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, ಎನ್‌ಸಿಸಿಗೂ ಕೂಡ ಜ್ಯೂನಿಯರ್ ಅಂಡರ್ ಆಫೀಸರ್ ಆಗಿ ಸೇರಿದ್ದು, 2 ಬೇಸಿಕ್ ಕ್ಯಾಂಪ್‌ಗಳಲ್ಲೂ ಭಾಗವಹಿಸಿ 'ಸಿ' ಸರ್ಟಿಫಿಕೇಟ್ ಪಡೆದಿದ್ದಾರೆ.

ಸರಕಾರದಿಂದ ಅಭಿನಂದನೆ, ಪ್ರೋತ್ಸಾಹವಿಲ್ಲದ್ದಕ್ಕೆ ಬೇಸರ
" ಬೇರೆ ರಾಜ್ಯದಿಂದ ಆಯ್ಕೆಯಾದ ಅಭ್ಯರ್ಥಿಗಳನ್ನು ಅಲ್ಲಿನ ಸರಕಾರ ಅಭಿನಂದಿಸಿವೆ. ಜೊತೆಗೆ ಆರ್ಥಿಕ ನೆರವನ್ನೂ ನೀಡಿದೆ. ಆದರೆ, ಕರ್ನಾಟಕದಿಂದ ನನಗೆ ಯಾವುದೇ ಅಭಿನಂದನೆ ಹಾಗೂ ಪ್ರೋತ್ಸಾಹ ಸಿಕ್ಕಿಲ್ಲ. ಇದನ್ನು ಹೇಳಲು ತುಂಬಾ ನೋವಾಗುತ್ತದೆ. ಆದರೂ ನಾನು ಇಷ್ಟು ದೂರ ಕ್ರಮಿಸಿರುವುದಕ್ಕೆ ಹೆಮ್ಮೆ ಇದೆ" ಎಂಬುದು ಪ್ರಶಾಂತ್ ಮಾತು.

ಹೈದರಾಬಾದಿನಲ್ಲಿ ಕಾರ್ಯಾರಂಭ
ಪ್ರಶಾಂತ್ ಪ್ರಸ್ತುತ ಹೈದರಾಬಾದ್‌ನಲ್ಲಿರುವ ಇಂಡಿಯನ್ ಏರ್ಸ್ ಅಕಾಡೆಮಿಯಲ್ಲಿ ಮೀಟರಾಲಜಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹವಾಮಾನ ವರದಿ ವಿಭಾಗ ಅವರ ಕಾರ್ಯಕ್ಷೇತ್ರ, ವಿಮಾನ ಹಾರಾಟದಲ್ಲಿ ಹವಾಮಾನದ ಪಾತ್ರ ತುಂಬಾ ಮುಖ್ಯ. ಹಾಗಾಗಿ ವಿಮಾನ ಹೋಗುವ ಹಾದಿ, ಹವಾಮಾನ ಹೇಗಿದೆ? ಏನೆಲ್ಲಾ ಅಡ್ಡಿ ಆಗಬಹುದು? ಯಾವ ಲೆವಲ್‌ನಲ್ಲಿ ಹೋಗಬೇಕು? ಎಲ್ಲಿ ಹೋಗಬಾರದು? ಎಂಬಿತ್ಯಾದಿ ಮಾಹಿತಿಯನ್ನು ನೀಡುವ ಜವಾಬ್ದಾರಿ ನಿರ್ವಹಿಸಬೇಕು. ಹವಾಮಾನ ಸ್ವಲ್ಪ ಏರುಪೇರಾದರೂ ಮಿಶೆಲ್ ಎಲ್ಲಿಗೋ ಹೋಗಿ ಡಿಕ್ಕಿ ಹೊಡೆಯಬಹುದು. ಹಾಗಾಗಿ ವಿಮಾನ ಹಾರುವ ಮುನ್ನ ಹಾಗೂ ಇಳಿಯುವ ಮುನ್ನ ಹವಾಮಾನದ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.












Click it and Unblock the Notifications