KRS Dam: ಮರುಕಳಿಸಿದ 2016, ಈ ಮೂರು ಜಿಲ್ಲೆಗಳ ಜನರ ಎದೆಯಲ್ಲಿ ಶುರುವಾಯ್ತು ಢವಢವ!

ಮೈಸೂರು, ಸೆಪ್ಟೆಂಬರ್‌, 25: ಕಾವೇರಿ ಹರಿದು ತಮಿಳುನಾಡು ಸೇರುತ್ತಿದ್ದರೆ, ಇತ್ತ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಇಂತಹದೊಂದು ಪರಿಸ್ಥಿತಿ 2016ರಲ್ಲೂ ಉದ್ಭವಿಸಿತ್ತು. ಈಗ ಮತ್ತೆ ಅದೇ ಸ್ಥಿತಿ ಬಂದೊದಗಿದೆ. ಮಳೆ ಕೈಕೊಟ್ಟಾಗ ಬಡಬಡಾಯಿಸುವ ನಾವು ಮುಂಗಾರು ಉತ್ತಮವಾಗಿ ನೀರಿನ ಸಮಸ್ಯೆ ಬಾರದಿದ್ದಾಗ ಈ ಬಗ್ಗೆ ಯೊಚಿಸುವುದೇ ಇಲ್ಲ. ಈಗ ಕಾವೇರಿ ನೀರನ್ನು ಬಳಸುವ ಎಲ್ಲರೂ ಯೋಚಿಸುವ ಸಮಯ ಬಂದಿದೆ.

ಹಾರಂಗಿ, ಹೇಮಾವತಿ, ಕಬಿನಿ ಸೇರಿದಂತೆ ಕೆಆರ್‌ಎಸ್ ಜಲಾಶಯಗಳ ನೀರಿನ ಮಟ್ಟ ಬೇಸಿಗೆಯಲ್ಲಿ ಇರುತ್ತಿದ್ದ ನೀರಿನ ಮಟ್ಟಕ್ಕೆ ಬಂದು ತಲುಪಿದೆ. ಬೇಸಿಗೆಯಲ್ಲಿ ಜಲಾಶಯಗಳು ಈ ಮಟ್ಟ ತಲುಪಿದರೆ ಮಳೆಗಾಲದಲ್ಲಿ ಭರ್ತಿಯಾಗಬಹುದು ಎಂಬ ಭರವಸೆ ಇರುತ್ತಿತ್ತು. ಆದರೆ ಮಳೆಗಾಲದಲ್ಲೇ ಇಂತಹ ಪರಿಸ್ಥಿತಿಗೆ ಬಂದು ತಲುಪಿದೆ ಎನ್ನುವುದಾದರೆ ಮುಂದಿನ ದಿನಗಳನ್ನು ಊಹಿಸಿದರೆ ಕಾವೇರಿ ನೀರು ಆಶ್ರಿತರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತದೆ.

krs-dam-water-level-low

ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿಗೆ ಬಂದು ತಲುಪುವುದಂತೂ ಖಚಿತ. ಈಗ ಕಾವೇರಿ ತವರು ಕೊಡಗಿನಲ್ಲೇ ನೀರು ನದಿ, ತೊರೆಗಳಲ್ಲಿ ಹರಿಯುತ್ತಿಲ್ಲ. ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಭೂಮಿಯಿಂದ ಉಕ್ಕಿ ಹರಿಯುತ್ತಾ, ಬಾವಿಗಳಲ್ಲಿ ನೀರು ತುಂಬಿಕೊಂಡಿರಬೇಕಿತ್ತು. ಆದರೆ ಈ ಬಾರಿ ಹಾಗಿಲ್ಲ. ಮೈಸೂರು, ಮಂಡ್ಯ ಭಾಗದಲ್ಲಿ ಕೆರೆಗಳು ಬತ್ತಿಹೋಗುತ್ತಿವೆ.

ಕೆಆರ್‌ಎಸ್‌ಗೆ ನೀರು ತಾನೆ ಹೇಗೆ ಬರುತ್ತೆ?

ಸಾಮಾನ್ಯವಾಗಿ ಈ ವೇಳೆಯಲ್ಲಿ ಕೊಡಗು ಸೇರಿದಂತೆ ಹಾಸನ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಮಳೆಯಾಗುತ್ತಿತ್ತು. ಹಾಗಾಗಿ ನೀರು ಜಲಾಶಯಗಳಿಗೆ ಹರಿದು ಬರುತ್ತಿತ್ತು. ಆದರೆ ಈ ಬಾರಿ ಈ ವೇಳೆಯಲ್ಲಿ ಮಳೆ ಎಲ್ಲ ಕಡೆ ಸುರಿಯುತ್ತಿಲ್ಲ. ಇನ್ನು ಕೊಡಗಿನಲ್ಲಿಯೇ ನದಿ, ತೊರೆಗಳು ತುಂಬಿ ಹರಿಯುತ್ತಿಲ್ಲ ಎಂದಾದ ಮೇಲೆ ಕೆಆರ್‌ಎಸ್‌ಗೆ ನೀರು ತಾನೆ ಹೇಗೆ ಹರಿದು ಬರಬೇಕು? ಎನ್ನುವ ಪ್ರಶ್ನೆ ಕಾಡತೊಡಗಿದೆ.

ಇನ್ನು ಮುಂದೆ ಕಾವೇರಿ ಕಣಿವೆಯಲ್ಲಿ ಎಷ್ಟೇ ಜೋರಾಗಿ ಮಳೆ ಸುರಿದರೂ ಕೆಆರ್‌ಎಸ್‌ನ ನೀರಿನ ಮಟ್ಟ ಹೆಚ್ಚಾಗುವ ಲಕ್ಷಣಗಳಂತೂ ಖಂಡಿತಾ ಇಲ್ಲ. ಹೀಗಿರುವಾಗ ಕಾವೇರಿ ನೀರಾವರಿ ಪ್ರಾಧಿಕಾರದ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಯುತ್ತಲೇ ಇದ್ದು, ಇದು ಮುಂದುವರೆದರೆ ಜಲಾಶಯ ಬರಿದಾಗಿ ಡೆಡ್‌ ಸ್ಟೋರೇಜ್‌ನ್ನು ತಲುಪುವುದಂತೂ ನಿಜ.

ನೀರು ಇದೇ ರೀತಿ ಹರಿಯುತ್ತಲೇ ಇದ್ದರೆ ಕೆಆರ್‌ಎಸ್ ಜಲಾಶಯ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ಬತ್ತಿ ಹೋಗುವುದರಲ್ಲಿ ಎರಡು ಮಾತಿಲ್ಲ. ಈಗ ಪ್ರತಿಭಟನೆ ತಾರಕಕ್ಕೇರಿದ್ದರೂ ಕಾವೇರಿ ನೀರು ಹೊರ ಹರಿವಿನ ಪ್ರಮಾಣ ಮಾತ್ರ ಕಡಿಮೆಯಾಗದೆ ದಿನಕ್ಕೆ ಹೆಚ್ಚಾಗುತ್ತಿದೆ. ಸೋಮವಾರ ತಮಿಳುನಾಡಿಗೆ ಸುಮಾರು 6,716 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಇಂದು (ಸೋಮವಾರ) ಹೊರ ಹೋಗುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ.

ತಮಿಳುನಾಡಿಗೆ 6,605 ಕ್ಯೂಸೆಕ್ ನೀರು

ಸದ್ಯ ತಮಿಳುನಾಡಿಗೆ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ನೀರನ್ನು ಬಿಡಲಾಗಿದ್ದು, ಒಟ್ಟಾರೆ ತಮಿಳುನಾಡಿಗೆ 6,605 ಕ್ಯೂಸೆಕ್ ನೀರು ಸದ್ಯ ಹರಿದು ಹೋಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಎಷ್ಟು ನೀರನ್ನು ಕೆಆರ್‌ಎಸ್‌ನಿಂದ ಬಿಡಲಾಗಿತ್ತು ಎಂಬುದನ್ನು ಇಲ್ಲಿ ಗಮನಿಸಿ.

ಶನಿವಾರ 2,973 ಕ್ಯೂಸೆಕ್, ಭಾನುವಾರ 3,838 ಕ್ಯೂಸೆಕ್ ನೀರನ್ನು ಬಿಡಲಾಗಿತ್ತು. ಆದರೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಹಳೇ ಮೈಸೂರು ವ್ಯಾಪ್ತಿಯಲ್ಲಿ ಪ್ರತಿಭಟನೆ ತೀವ್ರವಾದ ಬಳಿಕವೂ ಹರಿದು ಹೋಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗದೆ, ಹೆಚ್ಚಾಗುತ್ತಿರುವುದು ಕಾವೇರಿ ಕೊಳ್ಳದ ರೈತರು ಮತ್ತು ಜನರನ್ನು ಆತಂಕಕ್ಕೆ ತಳ್ಳಿದೆ.

ಇನ್ನು ಗರಿಷ್ಟ 124.80 ಅಡಿಗಳ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 96.70 ಅಡಿಗಳಷ್ಟು ನೀರಿದೆ. ಜಲಾಶಯ ಭರ್ತಿಯಾದರೆ 49.452 ಟಿಎಂಸಿ ನೀರು ಸಂಗ್ರವಾಗುತ್ತದೆ. ಆದರೆ ಈಗ ಇರುವ ನೀರಿನ ಪ್ರಮಾಣ 20.334 ಟಿಎಂಸಿ ಮಾತ್ರ.

ಜಲಾಶಯಕ್ಕೆ ನದಿಯ ಮೂಲಕ 5,993 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, 6,716 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಕೊಡಗು ವ್ಯಾಪ್ತಿಯಲ್ಲಿ ಸ್ವಲ್ಪ ಮಳೆಯಾಗುತ್ತಿರುವುದರಿಂದ ಸುಮಾರು ಐದು ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಆದರೆ ಅಲ್ಲಿ ಮಳೆ ಬಾರದೆ ಹೋದರೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಕುಸಿಯಲಿದೆ.

ಕಾವೇರಿ ಉಳಿಸಿಕೊಳ್ಳಲು ಸಾಧ್ಯನಾ?

ದಿನದಿಂದ ದಿನಕ್ಕೆ ಬರಿದಾಗುತ್ತಿರುವ ಜಲಾಶಯವನ್ನು ನೋಡುವಾಗ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ಇಂತಹದ್ದೇ ಪರಿಸ್ಥಿತಿ 2016ರಲ್ಲಿ ಉದ್ಭವವಾಗಿತ್ತು. ಅವತ್ತು ಕೂಡ ಇದೇ ಸಮಯದಲ್ಲಿ ಕಾವೇರಿ ನೀರಿನ ಹೋರಾಟ ತಾರಕಕ್ಕೇರಿತ್ತು. ಜೊತೆಗೆ ಕೆಆರ್‌ಎಸ್ ಸೇರಿದಂತೆ ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳು ಬರಿದಾಗಿದ್ದವು. ಆದರೆ 2017ರ ಬಳಿಕ ಮಳೆ ಸುರಿದಿದ್ದರಿಂದ ನೀರಿನ ಸಮಸ್ಯೆ ಬಗೆ ಹರಿದಿತ್ತು. ಈಗ ಮತ್ತೆ ನೀರಿಗಾಗಿ ಹೋರಾಡಬೇಕಾದ ಸಂಕಷ್ಟ ಎದುರಾಗಿದೆ. ಆದರೆ ಕಾವೇರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಾ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+