ಮೈಸೂರಿನ ನೀಲಿಯ ಬಾನಂಗಳದಲ್ಲಿ ಹಾರಾಡಿದ ಹಾವು, ರೈಲು, ಹುಲಿ... !
ಮೈಸೂರು, ಸೆಪ್ಟೆಂಬರ್.30:ಸೂತ್ರದ ಹಿಡಿತದಿಂದ ಬಾನಂಗಳದಲ್ಲಿ ತೇಲಾಡುತ್ತ, ಒದ್ದಾಡುತ್ತ, ನಸು ನಗುತ್ತ, ಮನಸ್ಸಿಗೆ ಮುದ ನೀಡುತ್ತ, ಬಾನು-ಭುವಿಗಳನ್ನು ಅಪ್ಪಿಕೊಳ್ಳಲು ಹಾತೊರೆಯುವ ಗಾಳಿಪಟಗಳ ಚೆಲ್ಲಾಟವೇ ಅದ್ಭುತ.
ಕತ್ತು ಎತ್ತರಿಸಿ ಕಣ್ಣು ಪಿಳುಕಿಸುತ್ತ, ಬಾನಂಗಳದ ಕಡೆ ಅತ್ತಿಂದಿತ್ತ ಕಣ್ಣೋಟ ಹಾಯಿಸುತ್ತ ಸೂರ್ಯನೆದುರಿಸಿ ಗಾಳಿಪಟಗಳನ್ನು ನೋಡುವುದೇ ಒಂದು ಹೊಸ ಲೋಕದಲ್ಲಿ ವಿರಮಿಸಿದಷ್ಟು ಖುಷಿ ನೀಡುವ ಅನುಭವ.
ಚಿಕ್ಕ ಮಕ್ಕಳಷ್ಟೇ ಅಲ್ಲದೆ ಎಲ್ಲ ವಯೋಮಾನದವರನ್ನು ಆಕರ್ಷಿಸುವ ತಾಕತ್ತಿದೆ ಗಾಳಿಪಟಕ್ಕೆ. ಅಂದಹಾಗೆ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಗಾಳಿಪಟ ಉತ್ಸವ ಶನಿವಾರ (ಸೆ. 29) ಮತ್ತು ಭಾನುವಾರ (ಸೆ. 30) ಆಯೋಜನೆಯಾಗಿದೆ.

ಹೆಲಿಪ್ಯಾಡ್ ನ ವಿಶಾಲ ಮೈದಾನದಲ್ಲಿ ಈ ಉತ್ಸವ ಏರ್ಪಡಿಸಲಾಗಿದ್ದು, ಸಣ್ಣವರಿಂದ ಹಿಡಿದು ವೃದ್ಧರವರೆಗೂ ಗಾಳಿಪಟ ಹಬ್ಬವನ್ನು ಎಂಜಾಯ್ ಮಾಡುತ್ತಿದ್ದಾರೆ.
ರಂಗುರಂಗಿನ ವಿವಿಧ ಕಲ್ಪನೆಗಳಲ್ಲಿ ಸಾಕಾರಗೊಂಡ, ಪಕ್ಷಿ, ಪ್ರಾಣಿಗಳ ಗಾಳಿಪಟಗಳು ಆಕಾಶದಲ್ಲಿ ಹಾರಿ ಹೊಂಗನಸು ಸೃಷ್ಟಿಸಿದವು. ಚಿತ್ತಾರದ ಮೂಲಕ ಮಾಯಾಂಗನೆಯಂತೆ ಕಣ್ಮುಂದೆ ಹಾದುಹೋದವು. ಬಣ್ಣಬಣ್ಣದ ಹಕ್ಕಿಗಳು ಸಾಲಾಗಿ ಹೋಗುವಂತೆ ಕಂಡು ಬರುವ ದೃಶ್ಯಾವಳಿ ಮನಸ್ಸನ್ನು ಪುಳಕಗೊಳಿಸುತ್ತಿದೆ.

ಹಾವು, ರೈಲು, ಹುಲಿ ಸೇರಿದಂತೆ ವಿವಿಧ ಪ್ರಾಣಿಗಳ ಚಿತ್ರಗಳನ್ನು ಹೊಂದಿದ ಗಾಳಿಪಟಗಳು ಆಕಾಶದಲ್ಲಿ ಸದ್ದು ಮಾಡುತ್ತಿವೆ.
ಮಂಗಳೂರು ನೇತೃತ್ವದಲ್ಲಿ ಎರಡು ದಿನಗಳ ಕಾಲ ಗಾಳಿಪಟ ಉತ್ಸವ ನಡೆದಿದ್ದು, ಮುಂಬೈನಿಂದ 4, ಅಹಮದಾಬಾದ್ 6, ಸೂರತ್ 5, ಹೈದರಾಬಾದ್ 3 ಮತ್ತು ಮಂಗಳೂರಿನ 10ಕ್ಕೂ ಹೆಚ್ಚು ವೃತ್ತಿನಿರತ ಕೈಟ್ ಪ್ಲೈಯರ್ಸ್ ಗಳು ಭಾಗವಹಿಸಿದ್ದಾರೆ.

ನೀಲಿಯ ಬಾನಂಗಳದಲ್ಲಿ ಬಿಳಿ ಮೋಡಗಳ ಮಗ್ಗುಲಲ್ಲಿ ಬಹುವರ್ಣ, ವೈವಿಧ್ಯಮಯ ಆಕಾರದ ಕಲರ್, ಕಲರ್ ಗಾಳಿಪಟಗಳು ಸ್ವಚ್ಛಂದವಾಗಿ ವಿಹರಿಸಿ ವೀಕ್ಷಕರ ಮನಸೂರೆಗೊಳಿಸುತ್ತಿವೆ.

ಸುಂದರ ಚಿಟ್ಟೆಗಳಂತೆ ರೂಪುಗೊಂಡ ಗಾಳಿಪಟಗಳು, ಮುಗಿಲಲ್ಲಿ ರೆಕ್ಕೆ ಬೀಸುತ್ತಾ ನರ್ತಿಸುವಂತೆ ಕಾಣುತ್ತಿತ್ತು. ರಾತ್ರಿ ಹೊತ್ತಿನಲ್ಲಿ ಎಲ್‌ಇಡಿ ಲೈಟ್ ಬಳಸಿ ಹಾರುವ ಪಟಗಳೂ ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ.












Click it and Unblock the Notifications