ಟಿಕೆಟ್ ಘೋಷಣೆಯಾಗದಿದ್ದರೂ ನಾಮಪತ್ರ ಸಲ್ಲಿಸಲಿರುವ ವಿಜಯೇಂದ್ರ
Recommended Video

ಮೈಸೂರು, ಏಪ್ರಿಲ್ 23: ಬಿಜೆಪಿಯಿಂದ ಟಿಕೇಟ್ ಘೋಷಣೆಯಾಗದಿದ್ದರೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ, ಬಿವೈ ವಿಜಯೇಂದ್ರ ಅವರು ಮೈಸೂರಿನ ವರುಣಾ ಕ್ಷೇತ್ರದಿಂದ ಇಂದು(ಏ.23) ನಾಮಪತ್ರ ಸಲ್ಲಿಸಲಿದ್ದಾರೆ.
ಏ.20 ಶುಕ್ರವಾರದಂದು ಬಿಡುಗಡೆಯಾದ ಬಿಜೆಪಿ ಪಟ್ಟಿಯಲ್ಲಿ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ಅವರ ಹೆಸರು ನಿರೀಕ್ಷಿಸಲಾಗಿತ್ತು. ಆದರೆ ವರುಣಾ, ಬಾದಾಮಿ, ಯಶವಂತಪುರ ಸೇರಿದಂತೆ 11 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಾಯಕರು ಘೋಷಿಸಿರಲಿಲ್ಲ.
ಆದರೂ ಇಂದು ನಾಮಪತ್ರ ಸಲ್ಲಿಸಲಿರುವ ವಿಜಯೇಂದ್ರ ಅವರಿಗೆ ತಂದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಶ್ರೀ ರಾಮುಲು, ಮಾಜಿ ಸಚಿವರುಗಳಾದ ವಿ.ಶ್ರೀನಿವಾಸ್ ಪ್ರಸಾದ್, ಗೋವಿಂದ ಕಾರಜೋಳ, ಶಿಕಾರಿಪುರದ ಶಾಸಕ ಬಿ.ವೈ. ರಾಘವೇಂದ್ರ, ನಿವೃತ್ತ ಪೋಲಿಸ್ ಅಧಿಕಾರಿ ಎಲ್. ರೇವಣ್ಣ ಸಿದ್ದಯ್ಯ, ಹಿಂದುಳಿದ ಮೋರ್ಚ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ವಿಜಯೇಂದ್ರ ಅವರು ನಂಜನಗೂಡಿನ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ.
ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದು, ಹಾಲಿ, ಮಾಜಿ ಮುಖ್ಯಮಂತ್ರಿಗಳ ಪುತ್ರರ ಕಾಳಗಕ್ಕಾಗಿ ಈ ಕ್ಷೇತ್ರ ಕುತೂಹಲ ಕೆರಳಿಸಿದೆ. ಮೇ. 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 15 ರಂದು ಹೊರಬೀಳಲಿದ್ದು, ವರುಣಾಕ್ಕೆ ಅಧಿಪತಿ ಯಾರು ಎಂಬುದು ನಿರ್ಧಾರವಾಗಲಿದೆ.












Click it and Unblock the Notifications