ಬಿಜೆಪಿಯವರಂಥ ಮೂರ್ಖರು ಯಾರೂ ಇಲ್ಲ: ಸಿದ್ದರಾಮಯ್ಯ
ಮೈಸೂರು, ಮೇ 08: "ಬಿಜೆಪಿಯವರಂಥ ಮೂರ್ಖರು ಯಾರೂ ಇಲ್ಲ. ಬಾದಾಮಿಯಲ್ಲಿ ನಾನು ಉಳಿದಿದ್ದ ರೆಸಾರ್ಟ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ಮಾಡಿಸಿದ್ದಾರೆ. ಐಟಿ ಇಲಾಖೆಯನ್ನ ನರೇಂದ್ರ ಮೋದಿ, ಅಮಿತ್ ಶಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯ, ಇಂದು ಬೆಳಿಗ್ಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಖಂಡಿಸಿದರು.
"ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇದ್ಯಾ?, ನಾನ್ ದುಡ್ಡು ಅಲ್ಲೇ ಬಿಟ್ಟು ಬಂದಿದ್ದೀನಾ? ನನಗೆ ಹೆದರಿ ಐಟಿಯವರನ್ನು ಬಿಟ್ಟಿದ್ದಾರೆ. ಇದೊಂದು ನಾನ್ ಸೆನ್ಸ್ ವಿಚಾರ. ಅಮಿತ್ ಶಾ ಉಳಿದುಕೊಂಡಿದ್ದ ರೂಂ ಯಾಕೆ ರೈಡ್ ಮಾಡಲ್ಲ? ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಮನೆ ಮೇಲೆ ಯಾಕೆ ದಾಳಿ ಮಾಡಿಲ್ಲ? ಎಂದು ಅವರು ಪ್ರಶ್ನಿಸಿದರು.

"ಸಿಎಂ ಆಪ್ತ ಮರಿಸ್ವಾಮಿಗೌಡ ಮನೆ ರೈಡ್ ಆಯ್ತು ಅಂತಾರೆ. ಎಲ್ಲಿ ರೈಡ್ ಆಗಿದೆ? ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಅಂತಾ ಬಿಜೆಪಿ ಮಂದಿಗೆ ಗೊತ್ತಾಗಿದೆ. ಹೀಗಾಗಿ ಹೆದರಿ ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ನಾವೇ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರಿನ ವಿಚಾರ
'ಕೇಂದ್ರ ಸರ್ಕಾರ ಇರೋದು ಸುಪ್ರೀಂ ಆದೇಶ ಜಾರಿಗೆ ತರಲು. ಕೇಂದ್ರ ಸರ್ಕಾರ ಮೊದಲು ಅದನ್ನು ಮಾಡಬೇಕು' ಎಂದ ಅವರು, ಕಾವೇರಿ ನದಿ ವಿಚಾರ ಸ್ಕಿಂ ಜಾರಿಗೆ ಮತ್ತೊಮ್ಮೆ ಒತ್ತಾಯಿಸಿದರು.
'ಕಾಂಗ್ರೆಸ್ ಪಕ್ಷ ಶಕ್ತಿ ಕಳೆದುಕೊಳ್ಳುತ್ತಿದೆ ಹಾಗಾಗಿ ಸೋನಿಯಾಗಾಂಧಿ ರಾಜ್ಯದಲ್ಲಿ ಪ್ರವಾಸ ಮಾಡ್ತಾರೆ' ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಸೋನಿಯಾ ಗಾಂಧಿ ಯಾರು? ಅವರು ನಮ್ಮ ಪಕ್ಷದ ವರಿಷ್ಠರು. ಹಾಗಾದರೆ ಪ್ರಧಾನಿ ಮೋದಿ, ಅಮಿತ್ ಶಾ , ಯೋಗಿ ಆದಿತ್ಯನಾಥ್ ಏನಕ್ಕೆ ಬರ್ತಿರೋದು' ಎಂದು ಪ್ರಶ್ನಿಸಿದರು.












Click it and Unblock the Notifications