Somanna vs Siddaramaiah: ನಾನು ಹೇಡಿಯಲ್ಲ, ಕಿಲಾಡಿ; ಸಿದ್ದರಾಮಯ್ಯಗೆ ಸವಾಲು ಹಾಕಿದ ವಿ ಸೋಮಣ್ಣ
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೂರೇ ದಿನಗಳು ಬಾಕಿ ಇದ್ದು, ಮೇ 10ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ಪ್ರಚಾರದ ಮೂಲಕ ಕಸರತ್ತು ನಡೆಸುತ್ತಿದ್ದಾರೆ.
ಇನ್ನು ಶನಿವಾರದಂದು ಮೈಸೂರಿನ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ವರುಣಾ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ, ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ವಿಧಿನಿಯಮ ಎಂದು ತಿಳಿಸಿದರು.

"ನನ್ನ ಮಗನಿಗೆ ಒಂದು ಟಿಕೆಟ್ ಕೊಡಿ, ನನಗೆ ಯಾವ ಟಾಸ್ಕ್ ಬೇಡ ಎಂದು ಹೈಕಮಾಂಡ್‍ಗೆ ತಿಳಿಸಿದ್ದೆ. ಆದರೆ, ಹೈಕಮಾಂಡ್ ನೀವೇ ಎರಡು ಕಡೆ ಸ್ಪರ್ಧೆ ಮಾಡಿ. ನಿಮ್ಮ ಕೈಯಲ್ಲಿ ಇದು ಸಾಧ್ಯ ಅಂತಾ ಹೇಳಿ ನನಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದ್ದಾರೆ," ಎಂದು ವಿ. ಸೋಮಣ್ಣ ಹೇಳಿದರು.
ಇದೇ ವೇಳೆ ವರುಣಾ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ವಿ. ಸೋಮಣ್ಣ, "ಸಿದ್ದರಾಮಯ್ಯ ಅವರಿಂದ ವರುಣಾದಲ್ಲಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನುಕೂಲವಾಗಿದೆ. ಸಿದ್ದರಾಮಯ್ಯ ಎದುರು ನನ್ನ ಕೂರಿಸಿ. ನಾನು ಅವರ ಆರೋಪಗಳಿಗೆ ಉತ್ತರ ಕೊಡುತ್ತೇನೆ. ಅವರ ಜೊತೆ ಹೊರಗಿನಿಂದ ಎಷ್ಟು ಜನ ಬಂದಿದ್ದಾರೆ. ಹಣ ಹಂಚಲು ಎಷ್ಟು ಮಂದಿಯನ್ನು ಕರೆತಂದಿದ್ದಾರೆ ಅನ್ನುವುದು ನನಗೆ ಗೊತ್ತಿದೆ," ಎಂದು ಕಿಡಿಕಾರಿದರು.
ವರುಣಾದ ರಸ್ತೆಗಳನ್ನು ನೋಡಿದರೆ ದಂಗಾಗುತ್ತದೆ
ಭ್ರಷ್ಟಾಚಾರದ ಆರೋಪದ ವಿಚಾರವಾಗಿ ಮಾತನಾಡಿದ ವಿ. ಸೋಮಣ್ಣ, "ಸಿದ್ದರಾಮಯ್ಯ ಬೆಂಗಳೂರಿನ ಗೋವಿಂದರಾಜನಗರಕ್ಕೆ ಹೋಗಿ ನೋಡಿ ಬರಲಿ. ರಾಜಕಾರಣ ಯಾರು ಬೇಕಾದರೂ ಮಾಡಬಹುದು. ಮತದಾರರಿಗೆ ಜಾತಿ, ಭೇದ ಏನು ಬೇಡ, ಅಭಿವೃದ್ಧಿ ಬೇಕು. ವರುಣಾದ ರಸ್ತೆಗಳನ್ನು ನೋಡಿದರೆ ದಂಗಾಗುತ್ತದೆ," ಎಂದರು.

"ನಮ್ಮ ನಾಯಕರು ಗೋವಿಂದರಾಜನಗರದಂತೆ ವರುಣಾ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಕಳುಹಿಸಿದ್ದಾರೆ. ಕ್ಷೇತ್ರದ ಜನರ ಜೊತೆ ಕುಳಿತು ಮಾತನಾಡಿದ್ದೀರಾ?, ಕ್ಷೇತ್ರದಲ್ಲಿ ನಿಮ್ಮದೆ ಆದ ಪಾಳೆಗಾರಿಕೆ, ನಿಮ್ಮದೆ ಆದ ಗುತ್ತಿಗೆದಾರರು. ನಾನು ನಿಮ್ಮ ಸ್ನೇಹಿತನೇ, ಆದರೆ ನಾನು ಹೇಡಿ ಅಲ್ಲ, ಕಿಲಾಡಿ," ಎಂದು ಟಾಂಗ್ ನೀಡಿದರು.
ತಮ್ಮ ಪಟಾಲಂ ಬಿಟ್ಟು ಕ್ಷೇತ್ರವನ್ನು ನಡೆಸುತ್ತಿದ್ದಿರಿ. ನಾನು ಬೇಡ ನೀವು ಬೇಡ. ನಿಮ್ಮ ಬೆಂಬಲಿಗರು ಬೇಡ, ನನ್ನ ಬೆಂಬಲಿಗರು ಬೇಡ. ಎಲ್ಲರೂ ಕ್ಷೇತ್ರದಿಂದ ಹೊರಗೆ ಹೋಗೋಣ. ಜನ ತೀರ್ಮಾನ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ವಿ. ಸೋಮಣ್ಣ ಸವಾಲು ಹಾಕಿದರು.
ಲಿಂಗಾಯತರ ಬಗ್ಗೆ ಈಗ ಯಾಕೆ ಕ್ಷಮೆ ಕೇಳುತ್ತಿದ್ದೀರಿ?
"ವೀರಶೈವರು, ಒಕ್ಕಲಿಗರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಮುಟ್ಟಲು ನಿಮಗೆ ಸಾಧ್ಯವಿದೆಯಾ?, ಲಿಂಗಾಯತರ ಬಗ್ಗೆ ಈಗ ಯಾಕೆ ಕ್ಷಮೆ ಕೇಳುತ್ತಿದ್ದೀರಿ ಎಂಬುದು ಜನರಿಗೆ ಗೊತ್ತಾಗಿದೆ. ಬಸವಣ್ಣನ ಬಾವುಟ ಹಾಕಿಕೊಂಡು ಈಗ ಪ್ರಚಾರ ಮಾಡುತ್ತಿದ್ದೀರಿ. ಇದನ್ನು ಜನ ನಂಬುತ್ತಾರಾ? ನಾನೇ ದೊಡ್ಡ ನಾಯಕ ಎನ್ನುತ್ತಿದ್ದವರು ಸಿನಿಮಾ ಸ್ಟಾರ್‌ಗಳನ್ನು ಕರೆದುಕೊಂಡು ಬಂದು ಪ್ರಚಾರ ಮಾಡುತ್ತಿದ್ದಾರೆ," ಎಂದು ಹರಿಹಾಯ್ದರು.

ಇನ್ನು ಲಿಂಗಾಯತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ ವಿಚಾರವಾಗಿ ಮಾತನಾಡಿದ ವಿ. ಸೋಮಣ್ಣ, "ಒಡೆದ ಮೊಸರು ಯಾವತ್ತು ಸರಿಯಾಗುವುದಿಲ್ಲ. ಚುನಾವಣೆ ಹತ್ತಿರವಾದಾಗ ಸಿದ್ದರಾಮಯ್ಯಗೆ ಅರಿವಾಗಿದೆ. ಚುನಾವಣೆಗೋಸ್ಕರ ಅವರು ಬದಲಾಗಿದ್ದು, ಚುನಾವಣೆ ನಂತರ ಸಿದ್ದರಾಮಯ್ಯ ಮತ್ತೆ ಅದೇ ಚಾಳಿ ಮುಂದುವರೆಸುತ್ತಾರೆ," ಎಂದು ಗುಡುಗಿದರು.
ಗೆದ್ದು ಬಂದು ಜಾತಿ ರಾಜಕಾರಣ ಮಾಡಿದ್ದೀರಿ
"ಸಿದ್ದರಾಮಯ್ಯನವರೇ, ವರುಣಾ ಕ್ಷೇತ್ರದ ಅಭಿವೃದ್ಧಿ ನಿಮಗೆ ತೃಪ್ತಿ ಕೊಟ್ಟಿದ್ದಿಯಾ? ಮುಖ್ಯಮಂತ್ರಿ ಆಗಿದ್ದ ನೀವು ವರುಣಾ ಕ್ಷೇತ್ರವನ್ನು ಎಷ್ಟು ಅಭಿವೃದ್ಧಿ ಮಾಡಬಹುದಿತ್ತು? ಸಿದ್ದರಾಮಯ್ಯನವರೇ ನಿಮ್ಮಂಥ ಅದೃಷ್ಟವಂತರು ಯಾರು ಇಲ್ಲ. ಏನೂ ಕೆಲಸ ಮಾಡದೆ ಇಷ್ಟು ವರ್ಷ ಇಲ್ಲಿ ಗೆದ್ದು ಬಂದು ಅಧಿಕಾರ ಅನುಭವಿಸಿದ್ದೀರಿ. ಗೆದ್ದು ಬಂದು ಜಾತಿ ರಾಜಕಾರಣ ಮಾಡಿದ್ದೀರಿ. ನಾನು ಯಾವತ್ತೂ ಜಾತಿ ಮಾಡಲ್ಲ. ನನ್ನ ಜಾತಿಯ ಜನ ಕಡಿಮೆ ಇರುವ ಕ್ಷೇತ್ರದಲ್ಲಿ ನಾನು ಗೆದ್ದು ಬಂದು ಅಭಿವೃದ್ಧಿ ಮಾಡಿದ್ದೀನಿ," ಎಂದು ವಇ. ಸೋಮಣ್ಣ ತಿಳಿಸಿದರು.
ವಸತಿ ಸಚಿವ ಸೋಮಣ್ಣ ಮನೆ ಕೊಟ್ಟಿಲ್ಲ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ, "ಸಿದ್ದರಾಮಯ್ಯನವರು ಅದೃಷ್ಟದ ರಾಜಕಾರಣಿ. ಅದೃಷ್ಟ ಇದೆ ಅಂತ ಬಂಡೆಗೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಈಗ ನಿಮಗೆ ಕಾಲ ಸನ್ನಿಹಿತವಾಗಿದೆ. ಇನ್ನೊಬ್ಬರ ಕೆಲಸವನ್ನು ಮೊದಲು ಗೌರವಿಸಿ. ಅದು ನಾಯಕತ್ವದ ಗುಣಲಕ್ಷಣ," ಎಂದು ವಿ. ಸೋಮಣ್ಣ ತಿರುಗೇಟು ನೀಡಿದರು.












Click it and Unblock the Notifications