ಕೊನೆಗೂ ವರುಣದಿಂದಲೇ ಸ್ಪರ್ಧೆ ಮಾಡಲು ಮುಂದಾದ ಸಿದ್ದರಾಮಯ್ಯ
ವರುಣ, ಮಾರ್ಚ್ 25: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಶನಿವಾರ ಬಿಡುಗಡೆಯಾಗಿದೆ. ಮೈಸೂರು ಜಿಲ್ಲೆಯ ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರವಾದ ವರುಣದಲ್ಲಿ ಕೊನೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕೆ ಇಳಿಯುತ್ತಿದ್ದಾರೆ. ಈ ಹಿಂದೆ ಅವರು ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ನಿಂತು ಜಯ ಸಾಧಿಸಿದ್ದರು.
ಕರ್ನಾಟಕ ವಿಧಾನಸಭೆಗೆ ಟಿಕೆಟ್ ಘೋಷಣೆಯಾಗುವ ಮೊದಲೇ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಕೊನೆಯಲ್ಲಿ ವರುಣದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈಗ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರೇ ಶಾಸಕರಾಗಿದ್ದಾರೆ.

ಈಗ ಸಿದ್ದರಾಮಯ್ಯ ಅವರೇ ತಮ್ಮ ತವರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಅವರ ಗೆಲುವು ಬಹತೇಕ ಖಚಿತವಾದಂತಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ನಿಂತಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ ವಿರುದ್ಧ ಸೋತಿದ್ದರು. ಆದರೆ ಬಾದಾಮಿಯಲ್ಲಿ ಜಯ ಗಳಿಸಿದ್ದರು.
ಸಿದ್ದರಾಮಯ್ಯ ಅವರಿಗೆ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲುವಂತೆ ಬಾದಾಮಿ ಹಾಗೂ ಕೋಲಾರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಮನೆ ಮುಂದೆಯೇ ಒತ್ತಾಯ ಮಾಡಿದ್ದರು. ಆದರೆ ಈ ಸಂರಕ್ಷಣಾತ್ಮಕ ಅಟ ಆಡಲು ಮುಂದಾಗಿರುವ ಸಿದ್ದರಾಮಯ್ಯ ಅವರು ತಮ್ಮ ತವರು ಕ್ಷೇತ್ರ ವರುಣದಿಂದಲೇ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ.
ತಾವು ನಿಲ್ಲುವ ವಿಧಾನಸಭಾ ಕ್ಷೇತ್ರ ಅಂತಿಮವಾಗದ ಕಾರಣ ಇತರ ಪಕ್ಷಗಳಿಂದ ಸಿದ್ದರಾಮಯ್ಯ ಅಲೆಮಾರಿ ಎಂಬ ಟೀಕೆಯನ್ನು ಎದುರಿಸಿದ್ದರು. ಕೊನೆಗೆ ಈಗ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುತ್ತಿದ್ದು, ಸುರಕ್ಷಿತ ಆಟ ಆಡಲು ಮುಂದಾಗಿದ್ದಾರೆ. ಟಿಕೆಟ್ ಘೋಷಣೆಯಾಘುವ ಅಂತಿಮ ಕ್ಷಣದವರೆಗೂ ಒಂದೇ ಹೆಸರು ಇರುವ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಅದರಲ್ಲಿ ನನ್ನ ಹೆಸರು ಇರುತ್ತೊ ಇಲ್ಲವೋ ಗೊತ್ತಿಲ್ಲ. ವರುಣಾದಿಂದ ಯತೀಂದ್ರ ಹೆಸರು ಸ್ಪಷ್ಟವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಸ್ಪರ್ಧೆ ವಿಚಾರವಾಗಿ ಮತ್ತೆ ಗೊಂದಲದ ಹೇಳಿಕೆ ನೀಡಿದ್ದರು.

ನಾನು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಹೈ ಕಮಾಂಡ್ ಏನು ಮಾಡುತ್ತೊ ಗೊತ್ತಿಲ್ಲ. ನಾನು ಎಲ್ಲಾ ಆಯ್ಕೆಯನ್ನು ಹೈ ಕಮಾಂಡ್‌ಗೆ ಬಿಟ್ಟಿದ್ದೇನೆ. ಮನೆಯವರ ಅಭಿಪ್ರಾಯವನ್ನು ಕೇಳುತ್ತಿದ್ದೇನೆ. ಹೈ ಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ. ನಾನು ಎಲ್ಲೇ ಸ್ಪರ್ಧಿಸಿದರು ಗೆಲ್ಲುವ ವಿಶ್ವಾಸ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬುದು ನಿಜವೇ ಆಗಿದ್ದರೂ ತಮಗಾಗಿ ತಮ್ಮ ಮಗನ ರಾಜಕೀಯ ಭವಿಷ್ಯದ ಬಗ್ಗೆ ಏನು ನಿರ್ಧಾರ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರ ಹೊರತು ಪಡಿಸಿ ಬೇರೆ ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಸಾಮರ್ಥ್ಯ ಹೊಂದಿಲ್ಲ. ಕಾಂಗ್ರೆಸ್‌ನ 2ನೇ ಪಟ್ಟಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಟಿಕೆಟ್ ಗಿಟ್ಟಿಸಿದರು ಅಚ್ಚರಿ ಇಲ್ಲ.
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಿದ್ದರೆ ಅವರನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪಣತೊಟ್ಟು ನಿಂತಿದ್ದವು. ಸದ್ಯ ಹೈಕಮಾಂಡ್ ಸಲಹೆಯನ್ನು ಸ್ವೀಕರಿಸಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಹೊರಬಂದು ವರುಣಾದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. 2008ರಲ್ಲಿ ರಚನೆಯಾದ ವರುಣಾ ಕ್ಷೇತ್ರದಲ್ಲಿ ಇದುವರೆಗೆ ಮೂರು ಚುನಾವಣೆಗಳು ನಡೆದಿವೆ. ಎರಡು ಬಾರಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರೆ, ಒಂದು ಬಾರಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ವರುಣಾ ಕ್ಷೇತ್ರಕ್ಕೆ ಮೈಸೂರು ತಾಲೂಕಿನ ಮೆಲ್ಲಹಳ್ಳಿ, ವರುಣ ಹೋಬಳಿ, ನಂಜನಗೂಡು ತಾಲೂಕಿನ ತಾಂಡವಪುರ, ತಗಡೂರು, ಹದಿನಾರು, ಚಿಕ್ಕವಲಂದೆ(ಭಾಗಶಃ) ಜಿಪಂ ಕ್ಷೇತ್ರಗಳು ಒಳಗೊಳ್ಳುತ್ತವೆ ಮತ್ತು ತಿ.ನರಸೀಪುರದ ಗರ್ಗೇಶ್ವರಿ ಜಿಪಂ ಕ್ಷೇತ್ರ ವ್ಯಾಪ್ತಿಗೆ ಒಳಗೊಂಡಿದೆ.
ವೀರಶೈವ ಲಿಂಗಾಯತರು, ದಲಿತ ಸಮುದಾಯದ ಮತ ಹೆಚ್ಚಿನ ಸಂಖ್ಯೆಯಲ್ಲಿದೆ. ನಂತರ ಸ್ಥಾನದಲ್ಲಿ ಕುರುಬ, ನಾಯಕ, ಉಪ್ಪಾರ, ಒಕ್ಕಲಿಗ, ಮುಸ್ಲಿಂ ಸಮುದಾಯದ ಮತದಾರರಿದ್ದಾರೆ. ಹಿಂದುಳಿದ ಮತಗಳು ಕೈಹಿಡಿಯುವ ಅಭ್ಯರ್ಥಿ ಗೆಲ್ಲುವುದು ಇಲ್ಲಿನ ವಿಶೇಷ. ಮುಂದೇನು ಕಾದು ನೋಡಬೇಕಿದೆ.












Click it and Unblock the Notifications