Chamundeshwari Constituency: ಈ ಬಾರಿ ಚಾಮುಂಡಿ ಅನುಗ್ರಹ ಯಾರಿಗೆ?
ಇದು ಮೊದಲು ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ಕರ್ಮಭೂಮಿಯಾಗಿತ್ತು. ಅಲ್ಲದೆ ಅವರಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರ ಇದಾಗಿದೆ.
ಮೈಸೂರು, ಫೆಬ್ರವರಿ 21: ಮೈಸೂರು ಜಿಲ್ಲೆಯ ಬಹುಮುಖ್ಯ ಕ್ಷೇತ್ರಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರವು ಒಂದು. ಕರ್ನಾಟಕ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದಂತೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲೂ ಈ ಬಾರಿ ಪ್ರಚಾರ ಭರಾಟೆ ಜೋರಾಗಿದೆ. ಈಗ ಇಲ್ಲಿ ಹಾಲಿ ಶಾಸಕರಾಗಿ ಜೆಡಿಎಸ್‌ನ ಜಿಟಿ ದೇವೇಗೌಡ ಇದ್ದಾರೆ.
ಈಗ ಅವರು ಇಲ್ಲಿ ಅಗ್ನಿಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಇದು ಮೊದಲು ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ಕರ್ಮಭೂಮಿಯಾಗಿತ್ತು. ಅಲ್ಲದೆ ಅವರಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರ ಇದಾಗಿದೆ. ಇಲ್ಲಿ ನಡೆದ 13 ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು 5 ಬಾರಿ ಜಯಶೀಲರಾಗಿದ್ದರು. ಅವರು ಜೆಡಿಎಸ್‌ನಿಂದ ಹೊರ ಬಂದ ಕಾಂಗ್ರೆಸ್ ಸೇರಿ ಮೇಲೂ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದರು. ಹಾಗಾಗಿಯೇ 2006ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 258 ಮತಗಳ ಅಂತರದಿಂದ ಗೆಲುವು ಸಾಧಿಸಿ ರಾಜಕೀಯ ಮರುಹುಟ್ಟು ಪಡೆದಿದ್ದರು.
ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದರು. ಬದಲಿಗೆ ಎರಡು ಕಡೆ ನಿಂತಿದ್ದರಿಂದ ಬದಾಮಿ ಕ್ಷೇತ್ರದಲ್ಲಿ ನಿಂತು ಗೆದ್ದರು. ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದರಿಂದಲೇ ಜಿ ಟಿ ದೇವೇಗೌಡ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮಿಂಚಿದ್ದರು. ಆದರೆ ಈಗ ಜಿಟಿ ದೇವೇಗೌಡರಿಗೆ ಕ್ಷೇತ್ರದಲ್ಲಿ ಚುನಾವಣೆ ಬಂದಿದ್ದು ಅಗ್ನಿಪರೀಕ್ಷೆಯ ಸಮಯವಾಗಿದೆ. ಜೆಡಿಎಸ್ ಅಭ್ಯರ್ಥಿಯಾಗಿರುವ ಜಿಟಿ ದೇವೇಗೌಡರ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸಲು ಸಜ್ಜಾಗುತ್ತಿದೆ.
ಕೆಲವು ತಿಂಗಳ ಹಿಂದೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಜಿಟಿ ದೇವೇಗೌಡ ಕಾಂಗ್ರೆಸ್ ಇಲ್ಲವೇ ಬಿಜೆಪಿ ಸೇರುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಇಲ್ಲವೇ ಬಿಜೆಪಿನಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬಿಕ್ಕಟ್ಟನ್ನು ಜೆಡಿಎಸ್ ವರಿಷ್ಠ ದೇವೇಗೌಡರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ನಂತರ ಪಕ್ಷದ ಚಟುವಟಿಕೆಗಳಲ್ಲಿ ಜಿಟಿ ದೇವೇಗೌಡ ಸಕ್ರಿಯರಾದರು.

ಜಿಟಿ ದೇವೇಗೌಡ ವಿರುದ್ಧ ಪ್ರಬಲ ಅಭ್ಯರ್ಥಿ ಇಲ್ಲ
ಈಗ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಜಿಟಿ ದೇವೇಗೌಡ ವಿರುದ್ಧ ನಿಲ್ಲುವ ಪ್ರಬಲ ಅಭ್ಯರ್ಥಿ ಸಿಕ್ಕಿಲ್ಲ. ಆದರೆ ಕಾಂಗ್ರೆಸ್ ಟಿಕೆಟ್ ಘೋಷಿಸಿದ ನಂತರ ಅಸಲಿ ಅಖಾಡ ಸಿದ್ಧವಾಗುತ್ತದೆ. ಜಿಟಿಡಿ ವಿರುದ್ಧ ಕ್ಷೇತ್ರದಲ್ಲಿ ಸಿನಿಮಾ ನಟರನ್ನು ನಿಲ್ಲಿಸುವ ಕುರಿತು ಮಾತುಕತೆಗಳು ನಡೆದಿವೆ. ಬಿಜೆಪಿಯಿಂದ ನಟ ಶಶಿಕುಮಾರ್ ಹಾಗೂ ಕಾಂಗ್ರೆಸ್‌ನಿಂದ ನಟಿ ರಮ್ಯಾ(ದಿವ್ಯಸ್ಪಂದನಾ) ಅವರನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆಗಳು ಇವೆ, ಕೆಲವು ದಿನಗಳ ಹಿಂದಿ ರಮ್ಯಾ ಅವರು ರಾಮನಗರದಿಂದ ನಿಲ್ಲುತ್ತಾರೆ ಎಂದು ಕೂಡ ಹೇಳಲಾಗಿತ್ತು.

ಚಾಮುಂಡೇಶ್ವರಿಯಲ್ಲಿ ಮತ್ತೆ ಸಿದ್ದರಾಮಯ್ಯ ನಿಲ್ಲಲ್ಲ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಡ ಬಳಿಕ ಸಿದ್ದರಾಮಯ್ಯ ಮತ್ತೆ ಅಲ್ಲಿಂದ ನಿಲ್ಲುವುದಿಲ್ಲ ಎಂದು ಕಾರ್ಯಕರ್ತರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈಗ ಅವರು ಕೋಲಾರದಿಂದ ನಿಲ್ಲುತ್ತಾರೆ ಎನ್ನಲಾಗಿದೆ. ಹೀಗಾಗಿ ಜಿಟಿಡಿ ಅವರಿಗೆ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಹಾದಿಯನ್ನು ಸುಗಮಗೊಳಿಸಿದಂತಾಗಿದೆ. ಮೂಲಗಳ ಪ್ರಕಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ 8 ಮಂದಿ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ಅವರಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಶಾಸಕ ಸತ್ಯನಾರಾಯಣ ಅವರ ಪುತ್ರ ಅರುಣ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೂರ್ಗಳ್ಳಿ ಮಹದೇವ, ಲೇಖಾ ವೆಂಕಟೇಶ್, ರಾಕೇಶ್ ಪಾಪಣ್ಣ, ಉದ್ಯಮಿ ಕೃಷ್ಣಕುಮಾರ್ ಸಾಗರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಮಲ್ಲಹಳ್ಳಿ ಮಹದೇವಸ್ವಾಮಿ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ.

2018ರಲ್ಲಿ ಜಿಟಿ ದೇವೇಗೌಡರಿಗೆ 1,21,325 ಮತ
2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜಿಟಿ ದೇವೇಗೌಡರು 1,21,325 ಮತ ಗಳಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್‌ನಿಂದ ನಿಂತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ 85,283 ಮತ ಪಡೆದಿದ್ದರು. ಬಿಜೆಪಿಯಿಂದ ನಿಂತಿದ್ದ ಗೋಪಾಲ್‌ರಾವ್ ಎಂಬುವವರು 12,064 ಮತಗಳನ್ನು ಪಡೆದಿದ್ದರು. ಜಿಟಿ ದೇವೇಗೌಡ ಅವರು 36,042 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಜೆಡಿಎಸ್ ಇಲ್ಲವೇ ಕಾಂಗ್ರೆಸ್‌ನದ್ದೇ ಪ್ರಾಬಲ್ಯ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಜೆಡಿಎಸ್ ಇಲ್ಲವೇ ಕಾಂಗ್ರೆಸ್‌ನದ್ದೇ ಪ್ರಾಬಲ್ಯವಿದೆ. ಬಿಜೆಪಿ ಸಂಘಟನೆ, ನಾಯಕತ್ವ ಕೊರತೆಯಿಂದ ಯಾವಾಗಲೂ ಮೂರನೇ ಸ್ಥಾನದಲ್ಲೇ ಇದೆ. ಆದರೂ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇಲ್ಲಿ ದೊಡ್ಡದಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಜಿಟಿಡಿಗೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇದೆ, ಇದರಿಂದ ಕಾಂಗ್ರೆಸ್ ಇಲ್ಲವೇ ಬಿಜೆಪಿಗೆ ಲಾಭವಾಗದೂ ಅಚ್ಚರಿ ಇಲ್ಲ.












Click it and Unblock the Notifications