ಬೆಂಕಿ ನಂದಿಸುತ್ತಿರುವ ಸ್ವಯಂಸೇವಕರಿಗೆ ಸಹಾಯ ಮಾಡಿ:ಯದುವೀರ್ ಮನವಿ
ಮೈಸೂರು, ಫೆಬ್ರವರಿ 25 :ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಕಳೆದ 5 ದಿನಗಳಿಂದ ಕಾಡ್ಗಿಚ್ಚು ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಕೂಡ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂಸೇವಕರ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಯದುವೀರ್, ದಯವಿಟ್ಟು ಈ ಬಗ್ಗೆ ಸುದ್ದಿ ಹರಡಿಸಿ, ನಮ್ಮ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡೋಣ ಎಂದು ಮನವಿ ಮಾಡಿಕೊಂಡಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನ ಸುದ್ದಿ ತಿಳಿದು ಬಹಳ ನೋವಾಗಿದೆ. ಅಂದಾಜು ಸುಮಾರು 20,000 ಎಕರೆ ಅರಣ್ಯಪ್ರದೇಶದ ಪ್ರಾಣಿಸಂಕುಲ ಹಾಗೂ ಸಸ್ಯಸಂಕುಲಕ್ಕೆ ಅಪಾರ ಹಾನಿಯುಂಟಾಗಿದೆ. ನಮ್ಮ ಪರಿಸರ ಪರಂಪರೆಗೆ ಸಂಭವಿಸಿರುವ ಈ ನಷ್ಟವು ಬಹಳ ದುಃಖಕರ ಸಂಗತಿಯಾಗಿದೆ.
ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

ಅರಣ್ಯ ಇಲಾಖೆಯವರಿಗೆ ಸ್ವಯಂಸೇವಕರು ಬೇಕಾಗಿದ್ದಾರೆ ಹಾಗೂ ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ. ಬಂಡೀಪುರ ಪ್ರವೇಶದ ಚೆಕ್ ಪೋಸ್ಟ್ ಕಚೇರಿಯಲ್ಲಿ ನೀವು ನೀರಿನ ಬಾಟಲಿಗಳು, ಗ್ಲುಕೋಸ್, ಔಷಧ, ಇತರೆ ಅಗ್ನಿಶಾಮಕ ಅಗತ್ಯತೆಗಳು, ಆಹಾರ ಮತ್ತು ಇತರೆ ಸರಬರಾಜುಗಳನ್ನು ನೀಡಬಹುದಾಗಿದೆ ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.












Click it and Unblock the Notifications