ಮೈಸೂರಿನ ಜಯಲಕ್ಷ್ಮಿ ವಿಲಾಸ ಅರಮನೆಗೆ ಸಿಗಲಿದೆ ಕಾಯಕಲ್ಪ: ಈ ಇತಿಹಾಸ ನಿಮಗೂ ತಿಳಿದಿರಲಿ
ಮೈಸೂರು, ಜನವರಿ 05: ಮೈಸೂರು ನಗರದಲ್ಲಿರುವ ಅರಮನೆಗಳಲ್ಲೊಂದಾದ ಮೊದಲನೇ ರಾಜಕುಮಾರಿಯ ಅರಮನೆ ಎಂದೇ ಹೆಸರುವಾಸಿಯಾದ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆಗೆ ಕಾಯಕಲ್ಪ ದೊರೆಯುವ ದಿನಗಳು ಹತ್ತಿರವಾಗಿದೆ. ಇದೀಗ ಮೈಸೂರು ವಿವಿ ಅಮೆರಿಕ ಸರ್ಕಾರ ಮತ್ತು ಮುಂಬೈನ ಹರೀಶ್ ಬೀನಾ ಶಾ ಫೌಂಡೇಶನ್ ಸಹಯೋಗದಲ್ಲಿ ಸಂರಕ್ಷಣೆಯತ್ತ ದಾಪುಗಾಲಿಟ್ಟಿದೆ.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರು ಮಾಹಿತಿ ನೀಡಿದ್ದು, ಅಮೆರಿಕ ಸರ್ಕಾರದ ಎಎಫ್ಸಿಪಿ (ಅಂಬಾಸಿಡರ್ಸ್ ಫಂಡ್ ಫಾರ್ ಕಲ್ಚರಲ್ ಪ್ರಿಸರ್ವೇಷನ್) ಮೂಲಕ 2.4 ಕೋಟಿ ಧನಸಹಾಯ ನೀಡಲಾಗಿದೆ. ಅರಮನೆಯ ಜಾನಪದ ವಸ್ತುಸಂಗ್ರಹಾಲಯ ಕಟ್ಟಡದ ಪಶ್ಚಿಮ ಭಾಗ ಮತ್ತು ಅಲ್ಲಿ ರಾಜ್ಯದಾದ್ಯಂತ ಸಂಗ್ರಹಿಸಲಾಗಿರುವ 6,500ಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಗೆ ಅನುದಾನ ಬಳಸಲಾಗುತ್ತದೆ.

ಅರಮನೆ ಕಟ್ಟಡದ ಇತರ ಭಾಗವನ್ನು ಸಂರಕ್ಷಿಸಲು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ, ಉದ್ಯಮಿ ಹರೀಶ್ ಶಾ ನೇತೃತ್ವದ ಹರೀಶ್ ಬೀನಾ ಶಾ ಫೌಂಡೇಶನ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನಾ ಮೊತ್ತ 30 ಕೋಟಿ ರೂಪಾಯಿ ಆಗಿದ್ದು, ಹಂತ ಹಂತವಾಗಿ ಒದಗಿಸಲಾಗುವುದು ಎಂದು ಹರೀಶ್ ಸಮ್ಮತಿಸಿದ್ದಾರೆ. ಕಾಮಗಾರಿ ಭೌತಿಕವಾಗಿ ಇನ್ನಷ್ಟೇ ಆರಂಭವಾಗಬೇಕಿದೆ. ಹಂತ ಹಂತವಾಗಿ ನಡೆಯಲಿದ್ದು, ಪುನರುಜ್ಜೀವನಕ್ಕೆ 5ರಿಂದ 7 ವರ್ಷ ಬೇಕಾಗುತ್ತದೆ. ಇದಕ್ಕಾಗಿ ಪರಂಪರೆ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ.
2025ರ ವೇಳೆಗೆ ಕಾಮಗಾರಿ ಪೂರ್ಣ
ಮಣಿಪಾಲ ತಾಂತ್ರಿಕ ಕಾಲೇಜು ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿದ್ದಾಗ ನಾನು ಎಂಜಿನಿಯರಿಂಗ್ ಪದವಿ ಪಡೆದಿದ್ದೆ. ಈ ವಿವಿಯ ಜಯಲಕ್ಷ್ಮಿ ವಿಲಾಸ ಅರಮನೆಯ ಸಂರಕ್ಷಣೆಗೆ ಕೈಜೋಡಿಸಿರುವುದು ಖುಷಿ ನೀಡಿದೆ. ಇದು, ಮೈಸೂರಿನ ಹೆಗ್ಗುರುತಾಗಿ ಸಿದ್ಧಗೊಳ್ಳಲಿದೆ. ವಿಶ್ವವಿದ್ಯಾಲಯ ಡೆಕ್ಕನ್ ಹೆರಿಟೇಜ್ ಫೌಂಡೇಶನ್ (ಡಿಎಚ್ಎಫ್) ಸಹಭಾಗಿತ್ವದಲ್ಲಿ ಪುನಶ್ಚೇತನ ಹಾಗೂ ಸಂರಕ್ಷಣಾ ಪ್ರಯತ್ನಗಳನ್ನು ಮಾಡುತ್ತಿದೆ. ಒಂದು ವರ್ಷದಿಂದ ಪ್ರಾರಂಭವಾಗಿರುವ ಕಾಮಗಾರಿ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಲ್ಲಿರುವ ಕಲಾಕೃತಿಗಳ ಡಿಜಿಟಲೀಕರಣವೂ ನಡೆಯಲಿದೆ. ಕಟ್ಟಡ ತೀವ್ರ ಶಿಥಿಲಗೊಂಡಿದ್ದು, ಅದನ್ನು ಉಳಿಸಿಕೊಳ್ಳುವುದು ತುರ್ತಾಗಿ ಆಗಬೇಕಿರುವುದರಿಂದ ಸಹಭಾಗಿತ್ವದ ಮೂಲಕ ಸಂರಕ್ಷಣಾ ಕೆಲಸ ಕೈಗೊಳ್ಳಲಾಗಿದೆ ಎಂದರು.
ಸಂರಕ್ಷಣೆ ಕಾರ್ಯ ಕೈಗೊಳ್ಳಲು ತಜ್ಞರ ಸಮಿತಿ ರಚಿಸಲಾಗಿದೆ. ವಿವಿಯ ಅಧಿಕಾರಿಗಳೊಂದಿಗೆ ಪರಿಣತರಾದ ಜೆ.ರಂಗನಾಥ್, ಅರುಣ್ ಮೆನನ್, ಶ್ರೀಕುಮಾರ್ ಮೆನನ್, ಸ್ಕಾಟ್ ಇ.ಹ್ಯಾಟ್ಮನ್, ಪ್ರೊ.ನರೇಂದ್ರ, ಶರತ್ ಚಂದ್ರ ಮೊದಲಾದವರು ಇದ್ದಾರೆ. ಅರಮನೆಯಲ್ಲಿ ಒಟ್ಟು 14 ಸಾವಿರಕ್ಕೂ ಹೆಚ್ಚು ಕಲಾಕೃತಿಗಳಿವೆ. ಅವುಗಳನ್ನೆಲ್ಲಾ ಸಂರಕ್ಷಿಸಲಾಗುವುದು. ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ಇಲ್ಲಿನ ಒಆರ್ಐ (ಒರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್) ಸಂರಕ್ಷಣೆ ಹಾಗೂ ಅದರ 40 ಸಾವಿರ ಪುರಾತನ ತಾಳೆಗರಿಗಳು, ಹಸ್ತಪ್ರತಿಗಳು ಮತ್ತು ಪುಸ್ತಕಗಳ ಸಂಗ್ರಹಕ್ಕೆ ಅನುದಾನ ನೀಡಿತ್ತು ಎಂದು ತಿಳಿಸಿದರು.
ಜಯಲಕ್ಷ್ಮಿ ವಿಲಾಸ ಅರಮನೆ ಇತಿಹಾಸ
ಇನ್ನು ಜಯಲಕ್ಷ್ಮಿ ವಿಲಾಸ ಅರಮನೆಯ ಬಗ್ಗೆ ಹೇಳಬೇಕೆಂದರೆ ಚಾಮರಾಜ ಒಡೆಯರ್ ಅವರ ಹಿರಿಯ ಮಗಳು ಹಾಗೂ ಕೃಷ್ಣರಾಜ ಒಡೆಯರ್ರವರ ಸಹೋದರಿ ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿಯವರಿಗಾಗಿ 1905ರಲ್ಲಿ ಸುಮಾರು ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿಸಲಾಯಿತು.
ಮೈಸೂರು ಸಂಸ್ಥಾನದ ಮುಖ್ಯ ಇಂಜಿನೀಯರ್ ರಾಘವಲು ನಾಯ್ಡು ಅವರ ಮಾರ್ಗದರ್ಶನದಲ್ಲಿ ನಿರ್ಮಾಣವಾದ ಈ ಅರಮನೆಗೆ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಪ್ರವೇಶ ದ್ವಾರಗಳಿವೆ. ನಾಲ್ಕು ಭಾಗಗಳಿಂದ ಕೂಡಿರುವ ಈ ಅರಮನೆ ಒಟ್ಟಾಗಿ ಸೇರಿ ಒಂದೇ ಕಟ್ಟಡ ಎಂಬಂತೆ ಭಾಸವಾಗುತ್ತದೆ. ಇಂಡೋಗ್ರೀಕ್ ಮತ್ತು ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣವಾಗಿರುವ ಅರಮನೆಗೆ ಅರ್ಧ ಚಂದ್ರಾಕೃತಿಯ ಕಮಾನುಗಳು, ಗ್ರೀಕ್, ರೋಮನ್, ಕೆತ್ತನೆ ಕುಸುರಿ ಕೆಲಸಗಳು, ಬೃಹತ್ ಮರದ ಬಾಗಿಲುಗಳು ಮೆರುಗು ನೀಡಿವೆ.

ವೈಭವೋಪೇತವಾಗಿರುವ ಒಳಾಂಗಣ ಅಲಂಕಾರ
ಈ ಅರಮನೆಯ ನೆಲ ಅಂತಸ್ತಿನಲ್ಲಿ ಪ್ರವೇಶ ದ್ವಾರ, ಸ್ವಾಗತ ಮಂದಿರ, ವಿಶಾಲ ಸಭಾಂಗಣ ಮತ್ತು ಭುವನೇಶ್ವರಿ ತೊಟ್ಟಿಗಳನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದೆ. ಅತಿಥಿಗಳಿಗೆಂದೇ ಅತಿಥಿ ಕೋಣೆಗಳ ಛಾವಣಿಗೆ ಲೋಹದ ಹಾಳೆ ಹಾಗೂ ನೆಲಕ್ಕೆ ಮೊಸಾಯಿಕ್ ಹಾಕಲಾಗಿದೆ. ಇಲ್ಲಿರುವ ಕೃಷ್ಣ ತೊಟ್ಟಿ ಹಾಗೂ ಭುವನೇಶ್ವರಿ ತೊಟ್ಟಿಗಳು ರಾಜಮನೆತನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದವು. ಈ ಅರಮನೆಯ ಒಳಾಂಗಣವನ್ನು ವೈಭವೋಪೇತವಾಗಿ ಅಲಂಕಾರ ಮಾಡಲಾಗಿದೆ.
ಇಲ್ಲಿ ಕಾಣಸಿಗುವ ಅಪೂರ್ವ ಕಲಾಕುಸುರಿ ಕೆಲಸ, ಮರಗಳ ಮೇಲೆ ಕೆತ್ತಲಾದ ಸಾಂಪ್ರದಾಯಿಕ ಕೆತ್ತನೆ ಕಲಾವಿದನ ಕಲಾ ಚಾತುರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೃಹತ್ ಬಾಗಿಲುಗಳು, ಕಿಟಿಕಿಗಳು, ಕಮಾನುಗಳು, ಗುಮ್ಮಟಗಳು ಇಸ್ಲಾಮಿಕ್ ಶೈಲಿಯಲ್ಲಿದ್ದು ಗಮನಸೆಳೆಯುತ್ತದೆ. ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಕೂಡಿರುವ ಅರಮನೆಯಲ್ಲಿ ನೃತ್ಯಶಾಲೆ ಮತ್ತು ಕಲ್ಯಾಣ ಮಂಟಪವಿದೆ. ನೃತ್ಯಶಾಲಾ ಮಂಟಪವು ತೇಗದ ಮರದ ಹಲಗೆಯ ನೆಲಹಾಸನ್ನು ಹೊಂದಿದ್ದು, ಹಲಗೆಯನ್ನು ಯಾವುದೇ ಮೊಳೆಯನ್ನು ಬಳಸದೆ ಜೋಡಿಸಲಾಗಿದೆ. ನಲುವತ್ತು ಅಡಿ ಎತ್ತರದ ಛಾವಣಿಯನ್ನು ಬಣ್ಣದ ಗಾಜುಗಳಿಂದ ಅಲಂಕರಿಸಲಾಗಿದೆ. ನೃತ್ಯ ಶಾಲಾ ಮಂಟಪವು 40ಅಡಿ ಚದರಳತೆಯಲ್ಲಿದೆ.
ವಿವಿ ಸ್ಥಾಪನೆಗಾಗಿ ಅರಮನೆಯ ಖರೀದಿ
ಇನ್ನು ಕಲ್ಯಾಣ ಮಂಟಪವು ವಿಶಾಲ ಹಜಾರದಲ್ಲಿ ತೇಗ ಮರದ 20 ಅಡಿ ಎತ್ತರದ ಸುಂದರ ಕೆತ್ತನೆಯ ವೃತ್ತಾಕಾರವಾಗಿ ಸುತ್ತುವರೆದಿರುವ 12 ಕಂಬಗಳಿಂದ ಕೂಡಿದೆ. ಅರಮನೆಯಲ್ಲಿ ಸುಮಾರು 123ಕ್ಕೂ ಹೆಚ್ಚು ಕೋಣೆಗಳಿದ್ದು, 90ಕೋಣೆಗಳನ್ನು ರಾಣಿಯರ ವಾಸಕ್ಕೆ ಮೀಸಲಿರಿಸಿ ಉಳಿದವುಗಳನ್ನು ಸೇವಕರಿಗೆ ನೀಡಲಾಗಿತ್ತು ಎನ್ನಲಾಗಿದೆ. ಇಲ್ಲಿಯ ಪ್ರತಿ ಬಾಗಿಲುಗಳ ಮೇಲೂ ದೇವ ದೇವತೆಯ ಹೂಗಳನ್ನು ರಚಿಸಿ ಸಿಂಗರಿಸಲಾಗಿದೆ.
ಈ ಅರಮನೆ ಹಾಗೂ 300 ಎಕರೆ ಜಾಗವನ್ನು ರಾಷ್ಟ್ರಕವಿ ಕುವೆಂಪುರವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾಗ ವ್ಯವಸ್ಥಿತ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ 1959ರಲ್ಲಿ 10ಲಕ್ಷ ರೂಪಾಯಿಗಳಿಗೆ ಖರೀದಿಸಿದರು ಎನ್ನಲಾಗಿದೆ. ಇದೀಗ ಅರಮನೆಯು ಮೈಸೂರು ವಿವಿಯ ಜಾನಪದ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಸದ್ಯ ಅರಮನೆಯ ಸಂರಕ್ಷಣೆಗೆ ಮೈಸೂರು ವಿವಿ ಅಮೆರಿಕ ಸರ್ಕಾರ ಮತ್ತು ಮುಂಬೈನ ಹರೀಶ್ ಬೀನಾ ಶಾ ಫೌಂಡೇಶನ್ ಮುಂದಾಗಿರುವುದು ಸಂತಸ ತಂದಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications