ರಾಜ್ಯ ಬಜೆಟ್ ವಿಶೇಷ; ಮೈಸೂರಿನ ಪ್ರವಾಸೋದ್ಯಮ ಚೇತರಿಕೆಗೆ ಸಿಗುತ್ತಾ ಬೂಸ್ಟರ್ ಡೋಸ್!

ಮೈಸೂರು, ಫೆಬ್ರವರಿ 23: ಹಿಜಾಬ್ ಸಂಘರ್ಷ, ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಹೋರಾಟ, ಶಿವಮೊಗ್ಗದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ಹೀಗೆ ನೂರೆಂಟು ಸಮಸ್ಯೆಗಳು ರಾಜ್ಯವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೆಲ್ಲದರ ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಮಾರ್ಚ್ 4ರಂದು ಚೊಚ್ಚಲ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯದ ಪ್ರತಿ ಜಿಲ್ಲೆ, ವಿವಿಧ ಸಮುದಾಯ ಮತ್ತು ಇಲಾಖೆಗಳಿಗೆ ಯಾವ ರೀತಿಯ ಪ್ರಾಶಸ್ತ್ಯ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

 ಈ ಬಾರಿ ಸವಾಲಿನ ಬಜೆಟ್

ಈ ಬಾರಿ ಸವಾಲಿನ ಬಜೆಟ್

ಹಾಗೆ ನೋಡಿದರೆ ಇದುವರೆಗೆ ಮಂಡಿಸಿರುವ ಬಜೆಟ್‌ಗಿಂತ ಈ ಬಾರಿಯ ಬಜೆಟ್ ವಿಭಿನ್ನ ಮತ್ತು ಸವಾಲಿನದ್ದಾಗಿರುವುದಂತು ನಿಜ. ಕಾರಣ ಒಂದು ಕಡೆ ಕಾಡಿದ ಕೊರೊನಾ ಮಹಾಮಾರಿಯಿಂದ ಆರ್ಥಿಕ ವ್ಯವಸ್ಥೆ ಸುಗಮವಾಗಿಲ್ಲ. ಜತೆಗೆ 2023ರ ಚುನಾವಣೆಯೂ ಇರುವುದರಿಂದ ಪ್ರಾಂತೀಯ ಮತ್ತು ಸಮುದಾಯದ ಕಡೆಗೂ ಗಮನಹರಿಸಬೇಕಾಗಿರುವುದು ಅನಿವಾರ್ಯ. ಒಂದು ವೇಳೆ ಕೇಂದ್ರದ ಬಜೆಟ್ ನಂತೆ ಚುನಾವಣೆಯನ್ನು ಬದಿಗಿಟ್ಟು ಬಜೆಟ್ ಮಂಡಿಸಿದರೂ ಮಂಡಿಸಬಹುದು.

ಆದರೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಖಜಾನೆಯನ್ನು ನೋಡಿಕೊಂಡು ಬಜೆಟ್ ಮಂಡನೆ ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಬಹುದೊಡ್ಡ ಸವಾಲು ಎಂದರೆ ತಪ್ಪಾಗಲಾರದು. ಚುನಾವಣೆಗಳಿರುವುದರಿಂದ ಪ್ರತಿಪಕ್ಷಗಳು ಯಾವುದೇ ರೀತಿಯ ಬಜೆಟ್ ಮಂಡಿಸಿದರೂ ಅದನ್ನು ವಿರೋಧಿಸುವುದಂತು ಖಚಿತ. ಇನ್ನು ರೈತರು, ಕಾರ್ಮಿಕರು, ಉದ್ಯಮಿಗಳು, ಉದ್ಯೋಗಿಗಳು, ಖಾಸಗಿ ವಲಯಗಳನ್ನು ಸಂತೃಪ್ತಿಗೊಳಿಸುವ ಹೊಣೆಗಾರಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲಿದೆ.

 ಪ್ರವಾಸೋದ್ಯಮಕ್ಕೆ ಸಿಗುತ್ತಾ ಕೊಡುಗೆ

ಪ್ರವಾಸೋದ್ಯಮಕ್ಕೆ ಸಿಗುತ್ತಾ ಕೊಡುಗೆ

ಇನ್ನು ರಾಜ್ಯದ ಎಲ್ಲ ಜಿಲ್ಲೆಯೂ ಪ್ರತಿ ಬಾರಿ ಬಜೆಟ್ ಮಂಡನೆಯಾದಾಗಲೂ ತಮ್ಮ ಜಿಲ್ಲೆಗೇನು ಕೊಡುಗೆ ಇದೆ ಎಂದು ಆಸೆಗಣ್ಣಿನಿಂದ ನೋಡುವುದು ಸಹಜ. ಅದರಂತೆ ಪ್ರವಾಸೋದ್ಯಮದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಪಾರಂಪರಿಕ ನಗರಿ ಮೈಸೂರು ಕೂಡ ಬಜೆಟ್‌ನತ್ತ ದೃಷ್ಟಿ ನೆಟ್ಟಿದೆ. ಮುಖ್ಯವಾಗಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚಿತ್ರನಗರಿ ನಿರ್ಮಾಣಕ್ಕೆ ಚಾಲನೆ ಸಿಗುತ್ತಾ?, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಾರಾ? ಮಂಡಕಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಯಾಗುತ್ತಾ? ದಸರಾ ಉದ್ಘಾಟನೆ ವೇಳೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನೀಡಿದ ದಸರಾ ಪ್ರಾಧಿಕಾರ ರಚನೆಯ ಸಲಹೆಯನ್ನು ಪಾಲಿಸುತ್ತಾರಾ? ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಾರಾ? ಹೀಗೆ ಹತ್ತಾರು ನಿರೀಕ್ಷೆಗಳಲ್ಲಿ ಜಿಲ್ಲೆಯ ಜನರಿದ್ದಾರೆ.

ಮೈಸೂರು ನಗರ ಪ್ರವಾಸೋದ್ಯಮದ ಮೇಲೆ ನಿಂತಿದೆ. ಇಲ್ಲಿನ ಬಹಳಷ್ಟು ವ್ಯಾಪಾರ, ವಹಿವಾಟುಗಳು ಪ್ರವಾಸಿಗರ ಅವಲಂಬಿಸಿ ನಡೆಯುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಚೇತರಿಕೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನೀಡಿದರೆ ಪ್ರವಾಸೋದ್ಯಮವನ್ನು ನಂಬಿ ಬದುಕು ಕಟ್ಟಿರುವ ಜನರ ಪಾಲಿಗೆ ಆಶಾಕಿರಣವಾಗಲಿದೆ.

 ಪ್ರವಾಸೋದ್ಯಮ ಹಬ್ ಸ್ಥಾಪನೆಗೆ ಸಲಹೆ

ಪ್ರವಾಸೋದ್ಯಮ ಹಬ್ ಸ್ಥಾಪನೆಗೆ ಸಲಹೆ

ಮೈಸೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಯಲ್ಲಿ ಹಲವಾರು ಪ್ರೇಕ್ಷಣೀಯ ತಾಣಗಳಿವೆ. ದೂರದಿಂದ ಬರುವ ಪ್ರವಾಸಿಗರು ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ಪ್ರವಾಸ ಆರಂಭಿಸುತ್ತಾರೆ. ಆದ್ದರಿಂದ ಪ್ರವಾಸೋದ್ಯಮ ಹಬ್ ಸ್ಥಾಪನೆ ಮಾಡಲಿ ಎಂಬುದು ಬಹಳಷ್ಟು ಉದ್ಯಮಿಗಳ ಮತ್ತು ವ್ಯಾಪಾರಿಗಳ ಮನವಿಯಾಗಿದೆ. ಇನ್ನು ಬೆಂಗಳೂರಿಗೆ ಮೈಸೂರು ಹತ್ತಿರದಲ್ಲಿದೆ. ಆದರೆ ಬೇರೆಡೆಗೆ ಹೋಲಿಸಿದರೆ ಇಲ್ಲಿನ ವಿಮಾನಯಾನ ಅಭಿವೃದ್ಧಿ ಕಂಡಿಲ್ಲ ಎನ್ನಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಹಿಂದೆ ಸಂಚಾರ ಮಾರ್ಗವೂ ಅಗತ್ಯವಾಗಿರುವುದರಿಂದ ವಿಮಾನಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಹೀಗಾಗಿ ರನ್‌ವೇ ವಿಸ್ತರಣೆಗೆ ಅನುದಾನ ಬಜೆಟ್‌ನಲ್ಲಿ ನೀಡುತ್ತಾರಾ ಕಾದು ನೋಡಬೇಕಿದೆ.

ಮೈಸೂರು ನಗರಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹೀಗೆ ಬಂದ ಪ್ರವಾಸಿಗರು ತಲಕಾವೇರಿ, ಬಂಡೀಪುರ, ನಾಗರಹೊಳೆ ಮುಂತಾದ ಕಡೆಗಳಿಗೆ ತೆರಳಲು ಅನುಕೂಲವಾಗುವಂತೆ ವ್ಯವಸ್ಥೆ, ದಸರಾ ವೇಳೆ ಪ್ರವಾಸಿಗರನ್ನು ಸೆಳೆಯಲು ಮತ್ತು ಅದರ ಸುತ್ತಲೂ ಪ್ರವಾಸೋದ್ಯಮಕ್ಕೆ ಅನುಕೂಲ ಮತ್ತು ಆದಾಯ ತರಲು ಬೇಕಾದ ಕ್ರಮಗಳು, ಜತೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನೀಡಿರುವ ದಸರಾ ಪ್ರಾಧಿಕಾರದ ರಚನೆಗೆ ಒತ್ತು ನೀಡಬೇಕು.

 ಪ್ರವಾಸೋದ್ಯಮಕ್ಕೆ ಒತ್ತು ಅಗತ್ಯ

ಪ್ರವಾಸೋದ್ಯಮಕ್ಕೆ ಒತ್ತು ಅಗತ್ಯ

ಹೊರಗಿನ ರಾಜ್ಯದಿಂದ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಅಂತರರಾಜ್ಯ ಪ್ರವಾಸಿಗರಿಗೆ ತೆರಿಗೆ ಇಳಿಕೆ ಮಾಡಬೇಕು ಎಂಬ ಅಭಿಪ್ರಾಯಗಳನ್ನು ಪ್ರವಾಸಿಗರು ಮುಂದಿಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ಪ್ರವಾಸಿಗರನ್ನು ನಂಬಿ ಜೀವನ ಮಾಡುತ್ತಿದ್ದ ಹಲವರು ಬೀದಿಗೆ ಬಂದಿದ್ದಾರೆ. ಅವರು ಮತ್ತೆ ಬದುಕು ಕಟ್ಟಿಕೊಳ್ಳಬೇಕಾದರೆ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಾಗಿದೆ. ಆ ಕೆಲಸ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+