ರಾಜ್ಯ ರಾಜಕೀಯಕ್ಕೆ ಬರ್ತಾರಾ ಪ್ರತಾಪ್ ಸಿಂಹ: ರಾಜಕೀಯ ಪಡಸಾಲೆಯಲ್ಲಿ ಹೀಗೊಂದು ಚರ್ಚೆ ಶುರು!
ಮೈಸೂರು, ಮಾರ್ಚ್ 14: ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ. ಇದೊಂದು ಶಾಕಿಂಗ್ ನ್ಯೂಸ್ ಆಗಿದೆ. ಆದರೆ ಅವರನ್ನು ರಾಜ್ಯ ರಾಜಕೀಯಕ್ಕೆ ತರಲೆಂದೇ ಟಿಕೆಟ್ ನೀಡಲಾಗಿಲ್ಲ ಎಂಬ ಮಾತುಗಳು ಇದೀಗ ರಾಜಕೀಯ ಪಡಸಾಲೆಗಳಲ್ಲಿ ಕೇಳಿ ಬರಲಾರಂಭಿಸಿದೆ. ಇದು ನಿಜವೋ ಅಥವಾ ಅಂತೆ ಕಂತೆಗಳ ಸುದ್ದಿಯೋ ಎಂಬುದು ಗೊತ್ತಾಗುತ್ತಿಲ್ಲವಾದರೂ ಚರ್ಚೆಯಂತು ಶುರುವಾಗಿದೆ.
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತಿದೆ. ಅದು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಹೇಳಿ ಮಾಡಿಸಿದಂತಿದ್ದು, ಅವರ ಅತಿಯಾದ ಆತ್ಮವಿಶ್ವಾಸವೇ ಅವರಿಗೆ ಮುಳುವಾಗಿದೆ. ಮೇಲ್ನೋಟಕ್ಕೆ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಲು ಹಲವು ಕಾರಣಗಳನ್ನು ನೀಡಬಹುದಾದರೂ ನಿಗೂಢ ಕಾರಣಗಳು ಇನ್ನೇನಿವೆಯೋ ಗೊತ್ತಿಲ್ಲ.

ಪ್ರತಾಪ್ ಸಿಂಹ ಉತ್ತಮ ಕೆಲಸಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕಿಂತ ಹೆಚ್ಚಾಗಿ ತಾನು ಮಾಡಿದ ಕೆಲಸಕ್ಕೆ ಹೇಗೆ ಪ್ರಚಾರ ತೆಗೆದುಕೊಳ್ಳಬಹುದು ಎಂಬುದು ಅವರು ಪತ್ರಕರ್ತರಾಗಿದ್ದರಿಂದ ಬೇರೆಲ್ಲರಿಗಿಂತ ಚೆನ್ನಾಗಿ ಅರಿವಿದ್ದ ಕಾರಣದಿಂದ ಅವರು ಮಾಡಿದ ಎಲ್ಲ ಕೆಲಸಗಳು ನಿರೀಕ್ಷೆ ಮೀರಿ ಜನರನ್ನು ತಲುಪಿದೆ. ಇದರ ಜತೆಗೆ ಯಾವುದೇ ಘಟನೆ ನಡೆದರೂ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದರು.
ಫೈರ್ ಬ್ರಾಂಡ್ ಆಗಿದ್ದೇ ತಪ್ಪಾಯಿತಾ?
ಕೆಲವು ಅವರ ಹೇಳಿಕೆಗೆಳು ಬೆನ್ನು ತಟ್ಟುವಂತಿದ್ದರೆ, ಮತ್ತೆ ಕೆಲವು ವಿವಾದಕ್ಕೂ ಎಡೆ ಮಾಡಿಕೊಟ್ಟಿವೆ. ಇದರ ಜತೆಗೆ ಎಲ್ಲವನ್ನೂ ನಾನೆ ಮಾಡಿದೆ ಎಂಬ ಹೇಳಿಕೆಗಳು ಎಲ್ಲೊ ಒಂದು ಕಡೆ ಅವರ ವೇಗಕ್ಕೆ ತಡೆಯಾಯಿತಾ? ಗೊತ್ತಿಲ್ಲ. ಆದರೆ ರಾಜ್ಯದಲ್ಲಿದ್ದ ಇಪ್ಪತ್ತೈದು ಸಂಸದರ ಪೈಕಿ ಹೆಚ್ಚು ಪ್ರಚಲಿತದಲ್ಲಿದ್ದವರು ಪ್ರತಾಪ್ ಸಿಂಹ ಮಾತ್ರ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಹಿಂದುತ್ವ ವಿಚಾರದಲ್ಲಿ ಮೊದಲ ಪ್ರತಿಕ್ರಿಯೆ ನೀಡುತ್ತಿದ್ದವರೇ ಪ್ರತಾಪ್ ಸಿಂಹ. ಟೀಕಿಸುವ ವಿಚಾರದಲ್ಲಿ ಯಾರನ್ನೂ ಬಿಡುತ್ತಿರಲಿಲ್ಲ. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದ್ದ ಕಾಲದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳಾದಾಗ ಸರ್ಕಾರದ ವಿರುದ್ಧವೇ ಗುಡುಗಿದ್ದರು. ಬಹುಶಃ ಅವರ ಈ ಗುಣವೇ ಅವರಿಗೆ ಮಾರಕವಾಗಿ ಬಿಟ್ಟಿತಾ ಸದ್ಯಕ್ಕೆ ಗೊತ್ತಾಗುತ್ತಿಲ್ಲ. ಕಳೆದ ಹತ್ತು ವರ್ಷಗಳ ಕಾಲ ಸಂಸದನಾಗಿ ತಾನು ಮಾಡಿದ ಕೆಲಸ ಕಾರ್ಯಗಳ ಪಟ್ಟಿಯನ್ನು ಮೊದಲಿನಿಂದಲೂ ಜನರ ಮುಂದೆ ಇಡುತ್ತಲೇ ಬಂದಿದ್ದ ಅವರು ಫೈರ್ ಬ್ರಾಂಡ್ ಆಗಿದ್ದರು.

ಆ ಘಟನೆ ಇಮೇಜ್ ಗೆ ಡ್ಯಾಮೇಜ್ ಮಾಡ್ತಾ?
ಸಂಸತ್‌ನಲ್ಲಿ ನಡೆದ ಅದೊಂದು ಘಟನೆ ಅವರಿಗೆ ಸಂಕಷ್ಟ ತಂದೊಡ್ಡಿತಾ? ಹೀಗೊಂದು ಪ್ರಶ್ನೆಗಳು ಹುಟ್ಟಿಕೊಂಡಿವೆ. ಪ್ರತಾಪ್ ಸಿಂಹ ನೀಡಿದ ಪಾಸ್ ಬಳಸಿ ಇಬ್ಬರು ದುಷ್ಕರ್ಮಿಗಳು ಸ್ಮೋಕ್ ಬಾಂಬ್ ನ್ನು ಸಂಸತ್ ಒಳಗೆ ಸಿಡಿಸಿ ಅಟ್ಟಹಾಸ ಮೆರೆದಿದ್ದರು. ಇದೊಂದು ಅವರ ಅಷ್ಟು ಸಾಧನೆಗೆ ಕಪ್ಪು ಚುಕ್ಕೆಯಾಗಿತ್ತು. ಮೋದಿ ನೇತೃತ್ವದ ಸರ್ಕಾರಕ್ಕೂ ಇದು ಬಹಳಷ್ಟು ಡ್ಯಾಮೇಜ್ ಮಾಡಿತ್ತು. ವಿರೋಧಿಗಳ ಮುಂದೆ ತಲೆ ತಗ್ಗಿಸುವಂತಾಗಿತ್ತು. ಅದರ ಪರಿಣಾಮ ಟಿಕೆಟ್ ಸಿಗದಂತೆ ಆಯಿತಾ?
ಕೆಲವು ವಿಚಾರಗಳಲ್ಲಿ ಅವತ್ತು ಶಾಸಕರಾಗಿದ್ದ ತಮ್ಮದೇ ಪಕ್ಷದ ಎಸ್.ಎ.ರಾಮದಾಸ್, ನಾಗೇಂದ್ರ ಸೇರಿದಂತೆ ಕೆಲವು ನಾಯಕರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದರು. ಹೈಕಮಾಂಡ್ ಜತೆಗೆ ಸಂಪರ್ಕದಲ್ಲಿದ್ದೇನೆ. ಎಲ್ಲವನ್ನೂ ನಾನೇ ಮಾಡಿದ್ದು ಎಂಬ ಅಹಂ ಹಲವು ವಿಚಾರಗಳು ಅವರಿಗೆ ಟಿಕೆಟ್ ಸಿಗದಂತೆ ಮಾಡಿದೆ. ಕಳೆದ ಬಾರಿ ಅವರಿಗೆ ಟಿಕೆಟ್ ನೀಡಿದಾಗಲೂ ಅವರ ಪಕ್ಷದ ಕೆಲವು ನಾಯಕರಿಗೆ ಇಷ್ಟವಿರಲಿಲ್ಲ.
ರಾಜಕೀಯ ಪಡಸಾಲೆಯಲ್ಲಿ ಹೊಸ ಚರ್ಚೆ?
ಅವರ ವಿರುದ್ಧ ಕೆಲವು ಆಡೀಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದವು. ಆದರೆ ಅದೆಲ್ಲವನ್ನು ಮೀರಿ ಅವರು ಗೆದ್ದು ಬಂದಿದ್ದರು. ಆದರೆ ಈ ಬಾರಿ ತಾನು ಬೇಕಾದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೀಗಾಗಿ ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಅಂದು ಕೊಂಡಂತೆ ಆಗಲೇ ಇಲ್ಲ. ಮುಂದೆ ದಿನ ಕಳೆದಂತೆ ಟಿಕೆಟ್ ಕೈ ತಪ್ಪಲು ಕಾರಣಗಳು ಸಿಗಬಹುದು ಅಥವಾ ಪಕ್ಷದಲ್ಲಿ ಬೇರೆ ಹುದ್ದೆ ನೀಡಲು ಟಿಕೆಟ್ ತಡೆಹಿಡಿದ್ರಾ ಎಂಬುದು ಗೊತ್ತಾಗಬಹುದು.

ಸಾಮಾನ್ಯವಾಗಿ ರಾಜಕೀಯ ವಲಯದಲ್ಲಿ ಏನೇ ಘಟನೆಗಳು ನಡೆಯಲಿ ಅದೇ ಸಂದರ್ಭದಲ್ಲಿ ರಾಜಕೀಯ ಪಡಸಾಲೆಯಲ್ಲಿ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಚರ್ಚೆಗಳು, ವಿಚಾರಗಳು ನಡೆಯುವುದು ಇದ್ದೇ ಇರುತ್ತದೆ. ಕೆಲವೊಂದು ಇಲ್ಲಿ ನಡೆಯುವ ಚರ್ಚೆಗಳು ಕೇವಲ ಅಂತೆ ಕಂತೆಗಳಂತೆ ಕಾಣುತ್ತವೆ. ಹಾಗೆಂದು ಅವುಗಳನ್ನು ಗಂಭೀರವಾಗಿ ಅಥವಾ ಲಘುವಾಗಿ ಪರಿಗಣಿಸುವಂತಿಲ್ಲ. ಇದೀಗ ಅಂತಹದ್ದೇ ಚರ್ಚೆಗಳು ಹುಟ್ಟಿಕೊಂಡಿವೆ.
ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಪ್ರತಾಪ್ ಸಿಂಹ?
ಸದ್ಯಕ್ಕೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಮಾತುಗಳು ಓಡಾಡುತ್ತಿವೆ. ಇನ್ನು ಕೆಲವರು ರಾಜ್ಯರಾಜಕರಾಣದಲ್ಲಿ ಉಳಿಸಿಕೊಳ್ಳುವ ಸಲುವಾಗಿಯೇ ಟಿಕೆಟ್ ತಡೆ ಹಿಡಿಯಲಾಗಿದೆ ಎಂದು ಹೇಳುತ್ತಿದ್ದಾರೆ. ಅವರು ಹೇಳುವ ಪ್ರಕಾರ ಸದ್ಯ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಲೋಕಸಭಾ ಟಿಕೆಟ್ ನೀಡಲಾಗಿದ್ದು, ತೆರವಾಗುವ ಸ್ಥಾನಕ್ಕೆ ಪ್ರತಾಪ್ ಸಿಂಹ ಅವರನ್ನು ತರಲಾಗುತ್ತದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಲು ಫೈರ್ ಬ್ರಾಂಡ್ ಅಗತ್ಯವಿದ್ದು ಸರ್ಕಾರವನ್ನು ಕಟ್ಟಿಹಾಕುವ ಗುಣಗಳು ಪ್ರತಾಪ್ ಸಿಂಹ ಅವರಲ್ಲಿ ಇರುವುದರಿಂದ ಅಂತಹದೊಂದು ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ಎಲ್ಲ ವಿಚಾರಗಳಂತೆ ಅಂತೆ ಕಂತೆ ಸುದ್ದಿಯೋ ಅಥವಾ ಇದು ನಿಜವೋ ಗೊತ್ತಿಲ್ಲ. ಇದೆಲ್ಲವನ್ನು ಮೀರಿ ರಾಜ್ಯ ರಾಜಕೀಯಕ್ಕೆ ಬರಲು ಪ್ರತಾಪ್ ಸಿಂಹ ಆಸಕ್ತಿ ವಹಿಸುತ್ತಾರೋ ಗೊತ್ತಿಲ್ಲ.
ರಾಜಕೀಯ ಬೆಳವಣಿಗೆ ಏನೇನಾಗುತ್ತೋ?
ಕೆಲವೊಮ್ಮೆ ರಾಜಕೀಯ ಪಡಸಾಲೆಗಳಲ್ಲಿ ಚರ್ಚೆಯಾಗುವ ವಿಚಾರಗಳೇ ನಿಜವಾಗಿ ಬಿಡುತ್ತವೆ. ಆದುದರಿಂದ ಅವುಗಳನ್ನು ತಳ್ಳಿಹಾಕುವುದ್ಕಕಾಗಲೀ, ಗಂಭೀರವಾಗಿ ಪರಿಗಣಿಸುವುದಕ್ಕಾಗಲೀ ಸಾಧ್ಯವಾಗುವುದಿಲ್ಲ. ಆದರೆ ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದು ಮಾತ್ರ ಸತ್ಯ. ಮುಂದಿನ ರಾಜಕೀಯ ಬೆಳವಣಿಗೆಗಳು ಏನಾಗುತ್ತವೆ ಎಂಬುದನ್ನು ಕಾದುನೋಡಬೇಕಷ್ಟೆ.












Click it and Unblock the Notifications