MUDA Scam: ಮುಡಾ ಆಯುಕ್ತರ ನಿವಾಸದಲ್ಲಿದ್ದ ಡಿವಿಆರ್ ನಾಪತ್ತೆ! 18 ಅಧಿಕಾರಿಗಳಿಗೆ ನೋಟಿಸ್
ಮುಡಾ ಹಗರಣ ತನಿಖೆ ತೀವ್ರಗೊಂಡಿದ್ದು ಬಗೆದಷ್ಟು ಆಘಾತಕಾರಿ ಅಂಶಗಳು ಬಯಲಾಗುತ್ತಿವೆ. ಅಕ್ರಮ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ತಂಡ 1 ಲಕ್ಷಕ್ಕೂ ಅಧಿಕ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ವಿಚಾರ ಬಯಲಾಗಿದೆ. ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿ ಇದ್ದ ಸಿಸಿ ಕ್ಯಾಮರಾ ಹಾಗೂ ಡಿವಿಆರ್ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಮುಡಾ ಹಗರಣದಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿರುವ ಅನುಮಾನ ಹೆಚ್ಚಾಗುತ್ತಿದ್ದು, ಸಾಕ್ಷಿಗಳನ್ನು ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದಾರ ಎನ್ನುವ ಅನುಮಾನ ಶುರುವಾಗಿದೆ.
ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ 8 ಸಿಸಿ ಕ್ಯಾಮೆರಾಗಳು ಹಾಗೂ ಡಿವಿಆರ್ ಅನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದು, ಹಿಂದಿನ ಆಯುಕ್ತರೇ ಅವುಗಳನ್ನು ಕೊಂಡೊಯ್ದಿರುವ ಬಗ್ಗೆ ಅನುಮಾನ ಶುರುವಾಗಿದೆ. ಜೊತೆಗೆ ಅಧಿಕಾರಿಗಳು ಡಿಜಿಟಲ್ ಸಾಕ್ಷಿ ನಾಶಕ್ಕೆ ಮುಂದಾಗಿದ್ದಾರೆಯೇ? ಎನ್ನುವ ಪ್ರಶ್ನೆ ಮೂಡಿದೆ.

50-50 ಅನುಪಾತ, ಬದಲಿ ನಿವೇಶನ, ತುಂಡು ಭೂಮಿ ಸೇರಿದಂತೆ ಹಲವು ವ್ಯವಹಾರಗಳಿಗೆ ಈ ಅಧಿಕೃತ ನಿವಾಸ ಕೇಂದ್ರ ಬಿಂದು ಆಗಿದ್ದು, ಇದೆಲ್ಲಕ್ಕೂ ಸಿಸಿ ಕ್ಯಾಮೆರಾಗಳು ಪ್ರಮುಖ ಸಾಕ್ಷಿಯಾಗಿದ್ದವು ಎನ್ನಲಾಗಿತ್ತು, ಆದರೆ ಈಗ ಡಿವಿಆರ್ ಸಹಿತ ಸಿಸಿ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿದ್ದು ಹಿಂದಿನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮೇಲೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮುಡಾ ಆಯುಕ್ತ ರಘುನಂದನ್ ಮಾತನಾಡಿ, ಸಿಸಿ ಕ್ಯಾಮೆರಾಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ತನಿಖೆಗೆ ಹಾಜರಾಗಲು 18 ಅಧಿಕಾರಿಗಳಿಗೆ ನೋಟಿಸ್
2017ರಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ಉಳ್ಳವರಿಗೆ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಪ್ರಾಧಿಕಾರದ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ದೂರು ನೀಡಿದ್ದ ಕುರಿತು ದಾಖಲಾಗಿರುವ ಎಫ್‌ಐಆರ್ ಸಂಬಂಧ ಇದೀಗ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇದೀಗ ಲೋಕಾಯುಕ್ತ ಪೊಲೀಸರು ಪ್ರಾಧಿಕಾರದ 18 ಅಧಿಕಾರಿಗಳಿಗೆ ವಿಚಾರಣೆಗೆ 3 ದಿನದೊಳಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ಮುಡಾ ಸೂಪರಿಂಟೆಂಡೆಂಟ್, ಇಂಜಿನಿರ್ಯ ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹೈಕೋರ್ಟ್ ಸಿಎಂ ಪ್ರಾಸಿಕ್ಯೂಷನ್ ಪ್ರಕರಣವನ್ನು ಸೆ.12ರೊಳಗೆ ಮುಕ್ತಾಯಗೊಳಿಸುವುದಾಗಿ ಹೇಳಿದೆ. ಈ ಬೆನ್ನಲ್ಲೇ ತನಿಖೆ ಕೂಡ ವೇಗವಾಗಿ ಸಾಗುತ್ತಿದೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳಿದೆ.











Click it and Unblock the Notifications