"ಸಂಪುಟಕ್ಕೆ 10+3, ಆ ಮೂರರಲ್ಲಿ ನಾನೂ ಇರಬಹುದು"; ವಿಶ್ವನಾಥ್ ಭರವಸೆ
ಮೈಸೂರು, ಫೆಬ್ರುವರಿ 01: "ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಬಂದಿದ್ದಾರೆ. ಸಂಪುಟಕ್ಕೆ ಯಾರು ಸೇರುತ್ತಾರೆ, ಯಾರು ಸೇರಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಯಡಿಯೂರಪ್ಪ ಮತ್ತು ಅಮಿತ್ ಶಾ ಹೊರತುಪಡಿಸಿ ಯಾರಿಗೂ ಮಾಹಿತಿ ಇಲ್ಲ. ಆದರೆ ಸಂಪುಟ ಸೇರುವ 10+3ರಲ್ಲಿ ನಾನೂ ಇರಬಹುದು" ಎಂದು ಸಂಪುಟ ಸೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವ ಎಚ್. ವಿಶ್ವನಾಥ್.
ಸೋಮವಾರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, "ಹತ್ತು ಮತ್ತು ಇನ್ನೂ ಮೂವರನ್ನು ಸಂಪುಟಕ್ಕೆ ಸೇರಿಸಲಾಗುತ್ತಿರುವ ಮಾಹಿತಿ ಇದೆ. ಆ ಮೂವರು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಪಟ್ಟಿ ಸಿದ್ಧವಾಗಿದೆ. ಸೋಮವಾರ ತಿಳಿಯುತ್ತದೆ. ಈ ಹಂತದಲ್ಲಿ ಯಾವುದೇ ಗೊಂದಲ ಇಲ್ಲ" ಎಂದು ಹೇಳಿದ್ದಾರೆ.
"ಯಡಿಯೂರಪ್ಪ ವಚನಭ್ರಷ್ಟ ಆಗಬಾರದು ಅಂತ ಹೇಳಿದ್ದೇನೆ. ನಾಲಿಗೆ ಮೇಲೆ ನಿಲ್ಲುವ ನಾಯಕ ಅಂತ ನಾನೇ ಹಲವು ಬಾರಿ ಹೇಳಿದ್ದೇನೆ. ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಮತ್ತೆ ಹೇಳಿದ್ದಾರೆ.

ಇಂದು ರಥ ಸಪ್ತಮಿ ಹಿನ್ನೆಲೆಯಲ್ಲಿ ರಾಜೀವ ನಗರದಲ್ಲಿರುವ ಸೂರ್ಯ ನಾರಾಯಣ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಬಂದ ವಿಶ್ವನಾಥ್, ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ಸೂರ್ಯ ನಾರಾಯಣನಿಗೆ ಅಕ್ಕಿ, ಬೆಲ್ಲ ಅರ್ಪಿಸಿ ಸಚಿವ ಸ್ಥಾನಕ್ಕಾಗಿ ದೇವರ ಮೊರೆ ಹೋದರು.












Click it and Unblock the Notifications