ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ : ಪ್ರತಾಪ್ ಸಿಂಹ ವಿಶ್ವಾಸ
ಮೈಸೂರು, ಜನವರಿ 16 : ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು. ಅವರು ಆಗುತ್ತಾರೆ. ಮುಂದಿನ ದಿನಗಳಲ್ಲಿ ಸಿಹಿ ಸುದ್ದಿ ಬರಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಸಿಎಂ ಆಗಬೇಕು ಎನ್ನುವುದು ನಮ್ಮೆಲ್ಲರ ಆಸೆ. ಸಿಹಿ ಸುದ್ದಿ ಬರಲಿ ಎಂದು ನಾವು ಕಾಯುತ್ತಿದ್ದೇವೆ. ಜನರ ಆದೇಶ ನಮ್ಮ ಪರ ಇರುವಾಗ ಜನರಿಂದ ತಿರಸ್ಕೃತಗೊಂಡವರು ಮೈತ್ರಿ ಮಾಡಿಕೊಂಡು ಅಧಿಕಾರ ಪಡೆದುಕೊಂಡಿದ್ದಾರೆ. ಸ್ವಲ್ಪ ವ್ಯತ್ಯಾಸ ಆಗಿದೆ. ಮುಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದಿದ್ದಾರೆ.
ಬದಲಾವಣೆ ಜಗದ ನಿಯಮ, ಮಾದ್ಯಮಗಳ ಆಶಯದಂತೆ ಸಂಕ್ರಾಂತಿಗೆ ಸರ್ಕಾರ ಬದಲಾವಣೆಯಾಗದಿದ್ದರೂ, ಯುಗಾದಿಗಾದರೂ ಬದಲಾವಣೆಯಾಗಲಿ. ಬಿ. ಎಸ್ ಯಡಿಯೂರಪ್ಪ ಸಿಎಂ ಆಗೋದು ನಿಶ್ಚಿತ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಅಪರೇಷನ್ ಕಮಲದ ಬಗ್ಗೆ ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ಜನರಿಂದ ತಿರಸ್ಕಾರಗೊಂಡ ಎರಡು ಪಕ್ಷಗಳು ಸರ್ಕಾರ ರಚನೆ ಮಾಡಿವೆ.

ಪ್ರಜಾಪ್ರಭುತ್ವದಲ್ಲಿ ಮ್ಯಾಜಿಕ್ ನಂಬರ್ ಮುಖ್ಯ. ಹೀಗಾಗಿ 104 ಸೀಟ್ ತೆಗೆದುಕೊಂಡು ನಾವು ಸುಮ್ಮನೆ ಕುಂತ್ರೆ ಹೇಗೆ ಎಂದು ಪ್ರಶ್ನಿಸಿದರು. ದೆಹಲಿಯಲ್ಲಿ ಬಿಜೆಪಿ ಶಾಸಕರ ವಾಸ್ತವ್ಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ನಮ್ಮ ಶಾಸಕರು ಹಿರಿಯರ ಮಾರ್ಗದರ್ಶನ ಪಡೆಯುತ್ತಿದ್ದಾರೆ. ನಾನು ಸಹ ಮೊದಲ ಬಾರಿ ಎಂಪಿಯಾಗಿದ್ದಾಗ ಮೂರು ದಿನಗಳ ಕಾಲ ಹರಿಯಾಣದಲ್ಲಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.












Click it and Unblock the Notifications